Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯತ್ನಾಳ್​ಗೆ ಈ ಉಚ್ಛಾಟನೆ ಶಿಕ್ಷೆ ಇದೇನು ಮೊದಲಲ್ಲ…2 ಬಾರಿ ಅಮಾನತುಗೊಂಡು ವಾಪಸ್ ಪಕ್ಷಕ್ಕೆ ಬಂದವರು

ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಸೇರಿ ಐವರು ನಾಯಕರಿಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ನೋಟಿಸ್‌ ನೀಡಿದ್ದ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಇದೇನು ಯತ್ನಾಳ್​ಗೆ ಮೊದಲಲ್ಲ. ಈ ಹಿಂದೆಯೂ ಯತ್ನಾಳ್​​ ಎರಡು ಬಾರಿ ಅಮಾನತುಗೊಂಡು ವಾಪಸ್ ಪಕ್ಷಕ್ಕೆ ಬಂದವರು.

ಯತ್ನಾಳ್​ಗೆ ಈ ಉಚ್ಛಾಟನೆ ಶಿಕ್ಷೆ ಇದೇನು ಮೊದಲಲ್ಲ...2 ಬಾರಿ ಅಮಾನತುಗೊಂಡು ವಾಪಸ್ ಪಕ್ಷಕ್ಕೆ ಬಂದವರು
Yatnal
Follow us
ರಮೇಶ್ ಬಿ. ಜವಳಗೇರಾ
|

Updated on:Mar 26, 2025 | 7:31 PM

ಬೆಂಗಳೂರು, (ಮಾರ್ಚ್​ 26): ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY VIjayendra) ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಅವರನ್ನು ಉಚ್ಚಾಟನೆ ಮಾಡಲಾಗಿದೆ. ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಇಂದು (ಮಾರ್ಚ್ 26) ಆದೇಶ ಹೊರಡಿಸಿದೆ. ಯತ್ನಾಳ್‌ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಯತ್ನಾಳ್​​ಗೆ ಈ ಉಚ್ಛಾಟನೆ ಶಿಕ್ಷೆ ಹೊಸದೇನಲ್ಲ. ಈ ಹಿಂದೆಯೂ ಇದೇ ಬಿಜೆಪಿಯಿಂದ ಎರಡು ಬಾರಿ ಉಚ್ಛಾಟನೆಗೊಂಡಿದ್ದಾರೆ. ಇದು ಮೂರನೇ ಬಾರಿ.

2009 ರಲ್ಲಿ ಮೊದಲ ಬಾರಿಗೆ ಉಚ್ಛಾಟನೆ

2009 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಅಮಾನತ್ತಾಗಿದ್ದರು. ಯಡಿಯೂರಪ್ಪ, ಶೋಬಾ ಕರಂದ್ಲಾಜೆ ಸದಾನಂದಗೌಡ ವಿರುದ್ದ ಮಾತನಾಡಿ 6 ವರ್ಷಗಳ ಕಾಲ ಪಕ್ಷದಿಂದ ಅಮಾನತ್ತು ಶಿಕ್ಷೆಗೆ ಒಳಗಾಗಿದ್ದರು. ನಂತರ ಜೆಡಿಎಸ್ ಪಕ್ಷ ಸೇರಿ 2013 ರಲ್ಲಿ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ 2014 ರಲ್ಲಿ ಯತ್ನಾಳ್​ ಮೇಲಿನ ಅಮಾನತ್ತು ಶಿಕ್ಷೆ ರದ್ದು ಮಾಡಿ ಪಕ್ಷಕ್ಕೆ ಕರೆತರಲಾಯ್ತು. ಆ ವೇಳೆ ಯಡಿಯೂರಪ್ಪ ಬಿಜೆಪಿಯಲ್ಲಿರಲಿಲ್ಲ.

ಇದನ್ನೂ ಓದಿ: Yatnal Expelled: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

2016ರಲ್ಲಿ  2ನೇ ಬಾರಿ ಯತ್ನಾಳ್​ ಉಚ್ಚಾಟನೆ

ಇನ್ನು 2014 ರ ಲೋಕಸಭಾ ಚುನಾವಣೆ ಬಳಿಕ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಸಿಗದ ಕಾರಣ 2016ರಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದೇ ಕಾರಣ ಮತ್ತೆ 2016ರಲ್ಲಿ 6 ವರ್ಷಗಳ ಕಾಲ ಎರಡನೇ ಬಾರಿ ಯತ್ನಾಳ್​ ಉಚ್ಚಾಟನೆ ಶಿಕ್ಷೆಗೆ ಗುರಿಯಾಗಿದ್ದರು. ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು ವಿಧಾನಪರಿಷತ್​ ಆಯ್ಕೆಯಾಗಿ ಹೈಕಮಾಂಡ್​ಗೆ ತಮ್ಮ ಶಕ್ತಿ ತೋರಿಸಿದ್ದರು. ನಂತರ 2018 ರಲ್ಲಿ ಕೇಂದ್ರದ ವರಿಷ್ಟರು ಹಾಗೂ ಯಡಿಯೂರಪ್ಪ ಸೇರಿಕೊಂಡು ಯತ್ನಾಳ್​ ವಿರುದ್ಧ ಅಮಾನತ್ತು ಶಿಕ್ಷೆ ರದ್ದು ಮಾಡಿ ವಾಪಸ್ ಬಿಜೆಪಿಗೆ ಕರೆ ತಂದರು. ಬಳಿಕ 2018 ರಲ್ಲಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಅಲ್ಲಿಂದ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸಮರ ಸಾರಲು ಶುರು ಮಾಡಿದರು.

ಇದನ್ನೂ ಓದಿ
Image
ಯತ್ನಾಳ್​ ಉಚ್ಛಾಟನೆ ಬೆನ್ನಲ್ಲೇ ರಾಜೀನಾಮೆ ಪರ್ವ, ಮತ್ತೊಂದಡೆ ಸಂಭ್ರಮ
Image
ಯತ್ನಾಳ್​ ಉಚ್ಛಾಟನೆ ಬೆನ್ನಲ್ಲೇ ಮಹತ್ವದ ಸಂದೇಶ ರವಾನಿಸಿದ ವಿಜಯೇಂದ್ರ..!
Image
ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಬಸನಗೌಡ ಪಾಟೀಲ್​​ ಯತ್ನಾಳ್​ ಉಚ್ಚಾಟನೆ
Image
ಬಿಜೆಪಿಯ ಮೂವರು ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್‌..!

ಯತ್ನಾಳ್​ ಅಮಾನತುಗೊಂಡಿರುವುದು ಇದು 3ನೇ ಬಾರಿ

ಯಡಿಯೂರಪ್ಪ ಹಾಗೂ ವಿಜಯೇಂದ್ರ ರಾಜಕಾರಣದ ವಿರುದ್ದ ಅಬ್ಬರಿಸಿ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದರು. ಅಲ್ಲದೇ ಹೊಂದಾಣಿಕೆ ರಾಜಕೀಯ ಬಗ್ಗೆಯೂ ಪದೇ ಪದೇ ಬಹಿರಂಗವಾಗಿಯೇ ಬಿಎಸ್​​ವೈ ಕುಟುಂಬದ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬಂದರು.ನಂತರ ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ನಂತರ ಯತ್ನಾಳ್​ ಹಾಗೂ ಯಡಿಯೂರಪ್ಪ ನಡುವೆ ಹಾವು ಮುಂಗುಸಿ ರೀತಿ ಜಗಳ ಮುಂದುವರಿದುಕೊಂಡು ಬಂತು.

ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಗರ ಕ್ಷೇತ್ರಕ್ಕೆ ಸ್ಪರ್ಧಿಸಿ‌ ಜಯ‌ ಕಂಡರು. ಆದ್ರೆ, ಯತ್ನಾಳ್​ಗೆ ಟಿಕೆಟ್​​ ತಪ್ಪಿಸಲು ಇನ್ನಿಲದ ಪ್ರಯತ್ನಗಳು ನಡೆದಿದ್ದವು ಆದರೂ ಸಹ ಅದು ಯಶಸ್ವಿಯಾಗಿರಲಿಲ್ಲ. ನಂತರ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ದದ ಕಿಡಿ‌ ಮಾತ್ರ ನಿಲ್ಲಲಿಲ್ಲ. ವಿಜಯಪುರದಲ್ಲಿ ಸೋಲಿಸಲು ವಿಜಯೇಂದ್ರ ತಂಡ ಕೆಲಸ ಮಾಡಿತ್ತು ಎಂದು ಯತ್ನಾಳ್​ ಆರೋಪ ಮಾಡಿದ್ದರು

ಹೀಗೆ ಯಡಿಯೂರಪ್ಪ ಹಾಗೂ ಯತ್ನಾಳ್​ ನಡುವಿನ ಗುದ್ದಾಟ ಮುಂದುವರಿದ ನಡುವೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಯ್ತು. ಇದರಿಂದ ಇದು ಯತ್ನಾಳ್​ ಆಕ್ರೋಶಕ್ಕೆ ಕಾರಣವಾಯ್ತು. ಅಲ್ಲಿಂದ ಯಡಿಯೂರಪ್ಪನವರನ್ನು ಸೈಡಿಗೆ ಇಟ್ಟು ವಿಜಯೇಂದ್ರ ವಿರುದ್ಧ ನಿರಂತರ ವಾಗ್ದಾಳಿ ಮಾಡಿಕೊಂಡು ಬಂದರು. ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದರು. ಇದರಿಮದ ವಿಜಯೇಂದ್ರ ಹಾಗೂ ಅವರ ಬಣ ಈ ಬಗ್ಗೆ ಹೈಕಮಾಂಡ್​ಗೆ ಸಾಕಷ್ಟು ಸಲ ದೂರು ನೀಡಿತ್ತು.

ಪದೇ ಪದೇ ರಾಜ್ಯಾಧ್ಯಕ್ಷ ವಿರುದ್ಧ ಬಹಿರಂಗ ಹೇಳಿಕೆ ಕೊಡುತ್ತಿರುವುದರಿಂದ ಬಿಜೆಪಿ ಕೇಂದ್ರದ ಶಿಸ್ತು ಸಮೀತಿ ಹಲವು ಬಾರಿ‌ ನೊಟೀಸ್ ನೀಡಿತ್ತು. ಆದರೂ ತಲೆ ಕೆಡಿಸಿಕೊಳ್ಳದ ಯತ್ನಾಳ್, ನೋಟಿಸ್ ಬಂದಾಗ ಉತ್ತರ ನೀಡಿ ಬಳಿಕ ತಮ್ಮ ಮಾತಿನ ಸಮರ ಮುಂದುವರಿಸುತ್ತಿದ್ದರು. ಎರಡು ಬಾರಿ ಶೋಕಾಸ್​ ನೋಟಿಸ್​ ನೀಡಿದ್ದಾಗಲೂ ಸಹ ಯತ್ನಾಳ್​ ಉತ್ತರ ಕೊಟ್ಟು ನಂತರ ಅದೇ ಪ್ರಕಾರ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಇದ್ದರು.

ಆದ್ರೆ, ಇತ್ತೀಚೆಗೆ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಲೇಬೇಕೆಂದು ಯತ್ನಾಳ್ ಪಟ್ಟು ಹಿಡಿದಿದ್ದರು. ಅದಕ್ಕಾಗಿ ವಿಜಯೇಂದ್ರ ವಿರೋಧಿ ಬಣದ ನಾಯಕರನ್ನು ಕೂಡಿಸಿಕೊಂಡು ಗುಪ್ತ್​ ಗುಪ್ತ್​ ಸಭೆಗಳನ್ನು ಮಾಡಲಾರಂಭಿಸಿದರು. ಹೀಗೆ ರೆಬೆಲ್​ ನಾಯಕರ ತಂಡ ದೊಡ್ಡದಾಗಿ ಬೆಳೆದಂತೆ ಇತ್ತ ವಿಜಯೇಂದ್ರ ಬಣ ಸಹ ಯತ್ನಾಳ್​​ ವಿರುದ್ಧ ಸಿಡಿದೆದ್ದಿದೆ. ಇದರಿಂದ ಬಿಜೆಪಿಯಲ್ಲಿ ಎಲ್ಲವೂ ಸರಿ ಎನ್ನುವುದು ಜಗಜ್ಜಾಹೀರಾಗಿದ್ದು, ಕೆಲ ನಿಷ್ಠಾವಂತ ನಾಯಕರು, ಕಾರ್ಯಕರ್ತರು ಬೇಸರಗೊಂಡಿದ್ದರು. ಈ ಬಣಬಡಿದಾಟಕ್ಕೆ ಯಾವಾಗ ಬ್ರೇಕ್​ ಬೀಳುತ್ತಪ್ಪ ಎಂದು ಮಾತನಾಡಿಕೊಳ್ಳುತ್ತಿದ್ದರು.

ಕರ್ನಾಟಕ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮಸಿದ ಹೈಕಮಾಂಡ್ ನಾಯಕರು, ರೆಬೆಲ್​ ತಂಡದ ನಾಯಕ ಯತ್ನಾಳ್​​ ಅವರನ್ನೇ ಸೈಲೆಂಟ್ ಮಾಡಿಸಿದ್ರೆ ಉಳಿದವರು ತೆಪ್ಪಗಿರುವುತ್ತಾರೆಂದು ಶಿಸ್ತು ಸಮಿತಿ ಶೋಕಾಸ್ ನೋಟಿಸ್​ ನೀಡಿತ್ತು. ಇದಕ್ಕೆ ಯತ್ನಾಳ್​ ಸಹ ಉತ್ತರಿಸಿ ಮತ್ತದೇ ತಮ್ಮ ರೆಬೆಲ್​ ನಾಯಕರ ಜೊತೆ ಗೌಪ್ಯ ಸಭೆ ನಡೆಸುಕೊಂಡು ಬಂದಿದ್ದಾರೆ. ಹೀಗಾಗಿ ಅಂತಿಮವಾಗಿ ಹೈಕಮಾಂಡ್​ ರೆಬೆಲ್​ ತಂಡದ ಕ್ಯಾಪ್ಟನನ್ನೇ ಉಚ್ಛಾಟಿಸಿದರೆ ಉಳಿದವರು ಸಹಜವಾಗಿಯೇ ಗಪ್​ ಚುಪ್ ಆಗುತ್ತಾರೆ ಎಂದು ತಿಳಿದು ಈ ತೀರ್ಮಾನ ತೆಗೆದುಕೊಂಡಿದೆ. ಇದರೊಂದಿಗೆ ಯತ್ನಾಳ್ ಬಿಜೆಪಿಯಿಂದ ಮೂರನೇ ಬಾರಿಗೆ ಉಚ್ಛಾಟನೆಯಾಗಿದ್ದಾರೆ.

ಈ ಹಿಂದೆ ಯತ್ನಾಳ್​ ವಿರುದ್ಧದ ಅಮಾನತು ವಾಪಸ್ ಪಡೆದುಕೊಂಡು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಅದರಂತೆ ಮುಂದಿನ ದಿನಗಳಲ್ಲಿ ಯತ್ನಾಳ್​ ವಿರುದ್ಧದ ಸಸ್ಪೆಂಡ್​ ಆದೇಶ ವಾಪಸ್ ಪಡೆದುಕೊಂಡಡು ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಇದು ರಾಜಕೀಯ. ಯಾವ ಸಂದರ್ಭದಲ್ಲಿ ಏನು ಆಗುತ್ತೋ ಗೊತ್ತಾಗಲ್ಲ .

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Wed, 26 March 25