ಯತ್ನಾಳ್ ಬೆನ್ನಲ್ಲೇ ಇನ್ನಿಬ್ಬರಿಗೆ ಉಚ್ಛಾಟನೆ ಭೀತಿ: ಶಿಸ್ತು ಸಮಿತಿ ಸ್ಪೋಟಕ ಸುಳಿವು
ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿ ಐವರು ನಾಯಕರಿಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿದ್ದ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಶಿಸ್ತು ಸಮಿತಿ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಈ ಬೆನ್ನಲ್ಲೇ ಬಿಜೆಪಿಯ ಇನ್ನಿಬ್ಬರು ನಾಯಕರು ಉಚ್ಛಾಟನೆಯಾಗುವ ಸುಳಿವನ್ನು ಶಿಸ್ತು ಸಮಿತಿ ನೀಡಿದೆ.

ಹುಬ್ಬಳ್ಳಿ, ಮಾರ್ಚ್ 26: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಉಚ್ಛಾಟನೆಯಿಂದ ರಾಜ್ಯ ಬಿಜೆಪಿಯಲ್ಲಿ (BJP) ಸಂಚಲನ ಸೃಷ್ಟಿಯಾಗಿದೆ. ಹೈಕಮಾಂಡ್ನ ಈ ನಿರ್ಧಾರದಿಂದ ಯತ್ನಾಳ್ ಬಣದ ಕೆಲ ನಾಯಕರು ಬೇಸರಗೊಂಡಿದ್ದು ಮಾತ್ರವಲ್ಲದೇ, ನಮಗೆ ಇದು ಎಚ್ಚರಿಕೆ ಗಂಟೆಯೇ ಎಂದು ಯೋಚಿಸುತ್ತಿದ್ದಾರೆ. ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ರಾಜ್ಯ ಬಿಜೆಪಿಯ ಶಾಸಕರಾದ ಎಸ್ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ಗೂ ಕೂಡ ಉಚ್ಛಾಟನೆ ಭೀತಿ ಶುರುವಾಗಿದೆ. ಈ ಬಗ್ಗೆ ರಾಜ್ಯ ಶಿಸ್ತು ಸಮಿತಿಯಿಂದ ಮಹತ್ವದ ಸುಳಿವು ಸಿಕ್ಕಿದೆ. “ಇದು ಎಲ್ಲರಿಗೂ ಎಚ್ಚರಿಕೆಯ ಗಂಟೆ. ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ವಿರುದ್ಧವೂ ಕ್ರಮ ಆಗುತ್ತೆ ಅಂತ ಎಂದು ಲಿಂಗರಾಜ್ ಪಾಟೀಲ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ ಅವಶ್ಯಕ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ನೋಟಿಸ್ ಕೊಟ್ಟರೂ, ಹಗುರವಾಗಿ ಮಾತಾಡತಿದ್ದರು. ಹೀಗಾಗಿ, ಪಕ್ಷದಿಂದ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಉಚ್ಛಾಟನೆ ಮಾಡಲಾಗಿದೆ ಎಂದರು.
ಹೌದು, ಶಾಸಕರಾದ ಎಸ್ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೆಚ್ಚು ಕಡಿಮೆ ಬಿಜೆಪಿಯಿಂದ ಕಾಲು ಹೊರಗೆ ಇಟ್ಟಿದ್ದಾರೆ. ಅಲ್ಲದೇ, ಈ ಇಬ್ಬರು ಶಾಕರು ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ 72 ಗಂಟೆಯ ಒಳಗೆ ಉತ್ತರ ನೀಡದಿದ್ದರೇ ಈ ಇಬ್ಬರೂ ನಾಯಕರು ಯತ್ನಾಳ್ ರೀತಿ ಉಚ್ಚಾಟನೆಯಾಗುವ ಸುಳಿವು ದೊರೆತಿದೆ.
ಯತ್ನಾಳ್ ಉಚ್ಛಾಟನೆ ಬೇಸರ ತಂದಿದೆ: ಬೆಲ್ಲದ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆಗೆ ಬಿಜೆಪಿಯ ಹಿರಿಯ ನಾಯಕ, ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಬೇಸರ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಉಚ್ಚಾಟಿಸಿದ್ದು ಬಹಳ ಬೇಸರ ತಂದಿದೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗುವೆ. ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯರು, ಜನಪ್ರಿಯ ನಾಯಕ. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು, ಹಲವು ಅನುಭವ ಉಳ್ಳವರು. ಯತ್ನಾಳ್ ತಮ್ಮ ಮನಸ್ಸಿನಲ್ಲಿದ್ದನ್ನು ನೇರವಾಗಿ ಮಾತನಾಡುತ್ತಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ರನ್ನು 6 ವರ್ಷ ಉಚ್ಚಾಟಿಸಿದ್ದು ಬಹಳ ಬೇಸರ ತಂದಿದೆ. ಮುಂದೆ ಪಕ್ಷದಲ್ಲಿ ಎಲ್ಲವೂ ಸರಿಯಾಗುತ್ತೆ ಎನ್ನುವ ಭರವಸೆಯಿದೆ ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ದಾವಣಗೆರೆ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಶಾಸಕ ಬಿಜೆಪಿ ಹರೀಶ್ಗೆ ಸೆಟ್ ಬ್ಯಾಕ್ ಆದಂತೆ ಆಗಿದೆ. ಯತ್ನಾಳ್ ಮುಂದಿಟ್ಟುಕೊಂಡು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ ಸಮರ ಸಾರಿದ್ದರು. ಅವರ ಬೆನ್ನಿಗೆ ಬಿಜೆಪಿ ಶಾಸಕ ಬಿಪಿ ಹರೀಶ್ ನಿಂತಿದ್ದರು. ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಸ್ ಎ ರವೀಂದ್ರನಾಥ್ ಹಾಗೂ ಎಂ. ಪಿ ರೇಣುಕಾಚಾರ್ಯ ವಿರುದ್ಧ ತೊಡೆ ತಟ್ಟಿದ್ದರು.
ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ರಾಜೀನಾಮೆ ಪರ್ವ, ಮತ್ತೊಂದಡೆ ಸಂಭ್ರಮ: ಸತ್ಯವಂತರಿಗೆ ಕಾಲವಲ್ಲ ಎಂದ ಬಸನಗೌಡ
ಯತ್ನಾಳ್ ಉಚ್ಚಾಟನೆ ಯಿಂದ ದಾವಣಗೆರೆಯಲ್ಲಿ ರೇಣುಕಾಚಾರ್ಯ ಬಣಕ್ಕೆ ಆನೆ ಬಲ ಬಂದಂತ್ತಾಗಿದ್ದು, ಕೆಲ ತಿಂಗಳ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಕರೆತಂದು ಬಿಎಸ್ವೈ ವಿರುದ್ಧ ಜಿಎಂ ಸಿದ್ದೇಶ್ವರ ಪರೋಕ್ಷವಾಗಿ ಯುದ್ಧ ಸಾರಿದ್ದರು.