ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಶಿಸ್ತು ಸಮಿತಿ ಖಡಕ್ ಸಂದೇಶ, ಕ್ರಮಕ್ಕೆ ಕೂಡಿಬಂತು ಕಾಲ
ಕರ್ನಾಟಕ ಬಿಜೆಪಿಯ ಮನೆ ಬೂದಿ ಮುಚ್ಚಿದ ಕೆಂಡದಂತಿದೆ. ಒಂದಲ್ಲ ಒಂದು ರೀತಿಯ ಗೊಂದಲಗಳು ಪಕ್ಷದಲ್ಲಿವೆ. ಒಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಬಣ ಬಡಿದಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದೆ. ಇದರ ಮಧ್ಯ ಮತ್ತಿಬ್ಬರು ಶಾಸಕರ ನಡೆ ವರಿಷ್ಠ ಕೆಂಗಣ್ಣಿಗೆ ಗುರಿಯಾಗಿದೆ. ಹೀಗೆ ಬಿಜೆಪಿಯಲ್ಲಿ ಒಂದಲ್ಲ ಒಂದ ರೀತಿಉ ಹಲವು ಗೊಂದಲಗಳು ಉದ್ಭವಿಸಿದ್ದು, ಇದಕ್ಕೆ ಎಲ್ಲದಕ್ಕೂ ಅಂತ್ಯ ಹಾಡುವ ಸಮಯಬಂದಂತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಫೋಟಕ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು, (ಮಾರ್ಚ್ 14): ಕರ್ನಾಟಕ ಬಿಜೆಪಿ ಮನಯೊಂದು ಮೂರು ಬಾಗಿಲು ಎಂಬಂತಾಗಿದೆ. ಪಕ್ಷದಲ್ಲಿ ವಿಜಯೇಂದ್ರ ಪರವಾದ ಒಂದು ತಂಡ, ವಿರುದ್ಧವಾದ ಮತ್ತೊಂದು ತಂಡ ಹಾಗೂ ತಟಸ್ಥವಾದ ತಂಡವೊಂದು ಇದೆ. ಈ ಮೂರು ಬಣದಲ್ಲಿ ಒಂದಿಷ್ಟು ಜನರು ಗುರುತಿಸಿಕೊಂಡಿದ್ದಾರೆ. ಈ ಬಣಗಳ ನಡೆಯಿಂದ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿದ್ದು, ಏನು ಮಾಡಬೇಕೆಂದು ಒಂದೂ ತಿಳಿಯದೇ ಸೈಲೆಂಟ್ ಆಗಿದೆ. ಭೇಟಿ ಬಂದವರಿಗೆ ಸಮಾಧಾನ ಮಾಡಿ ಕಳುಹಿಸುವುದನ್ನು ಬಿಟ್ಟರೆ ಬೇರೆ ಯಾವುದೇ ಕ್ರಮಕೈಗೊಂಡಿಲ್ಲ. ಆದ್ರೆ, ಇದೀಗ ರಾಜ್ಯ ಬಿಜೆಪಿಯಲ್ಲಿನ ಗೊಂದಲ ನಿವಾರಣೆಗೆ ಸಮಯ ಕೂಡಿ ಬಂದಂತಿದೆ. ಹೌದು…ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಅವರೇ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಹೌದು…ಒಂದು ಕಡೆ ಯತ್ನಾಳ್ ಹಾಗೂ ವಿಜಯೇಂದ್ರ ಬಣ ಬಡಿದಾಟ ಒಂದುಕಡೆಯಾದರೆ ಮತ್ತೊಂದೆಡೆ ಬಿಜೆಪಿ ರೆಬೆಲ್ ಶಾಸಕರ ಒಂದು ಕಥೆಯಾಗಿದೆ. ಬಿಜೆಪಿ ಚೆಹ್ನೆಯಿಂದ ಗೆದ್ದಿರುವ ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದ ನೀತಿ ನಿಯಮಗಳನ್ನು ದಿಕ್ಕರಿಸಿ ತಮ್ಮದೇ ಹಾದಿಯಲ್ಲಿ ಹೊರಟ್ಟಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಕೆರಳಿದ್ದು, ಈ ಇಬ್ಬರು ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ: ಡಿಕೆ ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು
ಇಷ್ಟು ದಿನ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸ್ವಪಕ್ಷ ಬಿಜೆಪಿ ವಿರುದ್ಧವೇ ಟೀಕೆ ಟಿಪ್ಪಣೆಗಳನ್ನು ಮಾಡುತ್ತಿದ್ದಾರೆ. ಸಾಲದಕ್ಕೆ ನಿನ್ನೆ (ಮಾರ್ಚ್ 13) ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು, ಸಚಿವರಿಗೆ ಔತಣಕೂಟ ಏರ್ಪಡಿಸಿದ್ದು. ಈ ಭೋಜನಕೂಟದಲ್ಲಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಭಾಗವಹಿಸಿ ಡಿಕೆಶಿಗೆ ಶುಭಾಶಯ ತಿಳಿಸಿ ಔತಣವನ್ನು ಸ್ವೀರಿಸಿ ಅಚ್ಚರಿ ಮೂಡಿಸಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಈ ತಿಂಗಳ ಅಂತ್ಯಕ್ಕೆ ಇವರಿಬ್ಬರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ದೃಢ ನಿರ್ಧಾರ ಮಾಡಿದೆ.
ಈ ತಿಂಗಳಾಂತ್ಯಕ್ಕೆ ಬಿಜೆಪಿ ಗೊಂದಲಕ್ಕೆ ತೆರೆ
ಈ ಸಂಬಂಧ ಹುಬ್ಬಳ್ಳಿಯಲ್ಲಿ ಟಿವಿ9ಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಮಾತನಾಡಿ, ಇಬ್ಬರು ಶಾಸಕರ ವಿರುದ್ಧ ಶಿಸ್ತುಕ್ರಮ ಆಗುತ್ತೆ. ಪಕ್ಷ ದ್ರೋಹ ಕೆಲಸ ಮಾಡಿದ ಈ ಇಬ್ಬರು ಶಾಸಕರ ವಿರುದ್ಧ ಈ ತಿಂಗಳಾಂತ್ಯದಲ್ಲಿ ಶಿಸ್ತುಕ್ರಮ ಆಗುತ್ತೆ ಎಂದು ಕಡ್ಡಿಮುರಿದಂತೆ ಹೇಳಿದರು. ಅಲ್ಲದೇ ಪಕ್ಷದಲ್ಲಿರುವ ಎಲ್ಲಾ ಗೊಂದಲಕ್ಕೆ ಈ ತಿಂಗಳಾಂತ್ಯಕ್ಕೆ ತೆರೆ ಬೀಳುತ್ತೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರೆಬೆಲ್ ಶಾಸಕರು ಹಾಗೂ ಯತ್ನಾಳ್ ಹಾಗೂ ವಿಜಯೇಂದ್ರ ಬಣ ಬಡಿದಾಟಕ್ಕೆ ಅಂತ್ಯವಾಡುವ ಸುಳಿವು ನೀಡಿದರು.
ವಿಧಾನಸಭೆ ಚುನಾವಣೆ ನಂತರ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ನಿರಂತರವಾಗಿ ಪಕ್ಷ ದ್ರೋಹ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ನ ಡಿನ್ನರ್ ಪಾರ್ಟಿಗೆ ಹೋಗಿರುವ ವಿಚಾರ ದೊಡ್ಡದಲ್ಲ. ಅದಕ್ಕಿಂತ ಹೆಚ್ಚಿನ ಪಕ್ಷ ವಿರೋಧಿ ಚಟುವಟಿಕೆ ಅವರಿಬ್ಬರು ಮಾಡಿದ್ದಾರೆ. ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕ್ಷೇತ್ರಕ್ಕೆ ತೆರಳಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಮಂಡಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರಿಂದ ವರದಿ ಸಿದ್ಧಪಡಿಸಿ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಟೀಲ್ ಅವರಿಗೆ ವರದಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ವಿಡಿಯೋ, ಪೇಪರ್ ಕಟಿಂಗ್‌ಗಳನ್ನು ವರದಿಯ ಜೊತೆಗೆ ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಎರಡ್ಮೂರು ಬಾರಿ ಕೇಂದ್ರಕ್ಕೆ ವರದಿ ನೀಡಲಾಗಿದೆ. ಆದಷ್ಟು ಬೇಗ ಎಸ್.ಟಿ.ಸೋಮಶೇಖರ್, ಹೆಬ್ಬಾರ್ ವಿರುದ್ಧ ಶಿಸ್ತುಕ್ರಮವಾಗಲಿದೆ ಎಂದು ತಿಳಿಸಿದರು.
ಲಿಂಗರಾಜ್ ಪಾಟೀಲ್ ಹೇಳಿರುವಂತೆ ಈ ತಿಂಗಳ ಅಂತ್ಯಕ್ಕೆ ರಾಜ್ಯ ಬಿಜೆಪಿಯಲ್ಲಿನ ಗೊಂದಲ ನಿವಾರಣೆಯಾಗಲಿದೆ ಎಂದು ಹೇಳಿದ್ದಾರೆ. ಹಾಗಾದ್ರೆ, ಯತ್ನಾಳ್ ಹಾಗೂ ವಿಜಯೇಂದ್ರ ಬಣ ರಾಜಕೀಯಕ್ಕೆ ಬ್ರೇಕ್ ಬೀಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಒಂದು ವೇಳೆ ಎಲ್ಲವೂ ಸರಿಯಾದರೆ ಯಾವ ಬಣ ಮೇಲುಗೈ ಸಾಧಿಸಲಿದೆ ಎನ್ನುವುದು ಸಹ ಕುತೂಹಲಕ್ಕೆ ಕಾರಣವಾಗಿದ್ದರೆ, ಇನ್ನು ಬಿಜೆಪಿ ಚಿಹ್ನೆಯಿಂದಲೇ ಗೆದ್ದು ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ವಿರುದ್ಧ ಶಿಸ್ತು ಸಮಿತಿ ಯಾವ ಕ್ರಮಕೈಗೊಳ್ಳುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಸದ್ಯ ಒಂದಲ್ಲ ಒಂದು ರೀತಿಯಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಇದನ್ನು ಯಾವ ರೀತಿ ಬಗಹರಿಸುತ್ತೆ ಎನ್ನುವುದೇ ಎನ್ನುವುದನ್ನು ಕಾದುನೋಡಬೇಕಿದೆ.