Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ: ಡಿಕೆ ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಜುಲೈ 2ಕ್ಕೆ ಐದು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ಇಂದು (ಮಾರ್ಚ್ 13) ಕಾಂಗ್ರೆಸ್‌ನ ಎಲ್ಲಾ ಶಾಸಕರಿಗೂ ಮೂರೂವರೆ ತಿಂಗಳು ಮೊದಲೇ ಔತಣಕೂಟ ಆಯೋಜಿಸಿದ್ದು, ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರು ಶಾಸಕರು ಔತಣಕೂಟದಲ್ಲಿ ಭಾಗಹಿಸಿ ಡಿಕೆಶಿಗೆ ಶುಭಾಶಯಕೋರಿದರು. ಆದ್ರೆ ಅಚ್ಚರಿ ಎಂಬಂತೆ ಈ ಕಾಂಗ್ರೆಸ್​ ಭೋಜನಾಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು ಪಾಲ್ಗೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ: ಡಿಕೆ ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು
Dk Shivakumar Dinner Meeting
Follow us
ರಮೇಶ್ ಬಿ. ಜವಳಗೇರಾ
|

Updated on:Mar 13, 2025 | 9:41 PM

ಬೆಂಗಳೂರು, (ಮಾರ್ಚ್​ 13): ಕೆಪಿಸಿಸಿ ಅಧ್ಯಕ್ಷರಾಗಿ (KPCC President)  ಜುಲೈ 2ಕ್ಕೆ ಐದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌  (DK Shivakumar) ಮೂರವರೇ ತಿಂಗಳು ಮೊದಲೇ ಔತಣಕೂಟ (Dinner) ಏರ್ಪಡಿಸಿದ್ದಾರೆ. ಇಂದು (ಮಾರ್ಚ್ 13) ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಡಿಕೆಶಿ ಭೋಜನಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ಶಾಸಕರು, ಸಚಿವರು ಭಾಗವಹಿಸಿದರು. ಈ ವೇಳೆ ಡಿಕೆ ಶಿವಕುಮಾರ್​​ಗೆ ಶುಭಾಶಯ ಕೋರಿ ಔತಣಕೂಟ ಸ್ವೀಕರಿಸಿದರು. ಇನ್ನು ಡಿಕೆಶಿ ಆಯೋಜಿಸಿರುವ ಈ ಔತಣಕೂಟದಲ್ಲಿ ಬಿಜೆಪಿ ಶಾಸಕರಾದ ಎಸ್​ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ 5 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಚಿವರು, ಕಾಂಗ್ರೆಸ್ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಔತಣಕೂಟ ಏರ್ಪಡಿಸಿದ್ದಾರೆ. ಆದ್ರೆ, ಈ ಕಾಂಗ್ರೆಸ್ ಔತಣಕೂಟದಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಿವರಾಮ್ ಹೆಬ್ಬಾರ್ ಸಹ ಭಾಗವಹಿಸಿದ್ದು, ಡಿಕೆಶಿಗೆ ಶುಭಾಶಯ ತಿಳಿಸಿ ಔತಣಕೂಟವನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಕುರ್ಚಿ ಕಚ್ಚಾಟ ಮಧ್ಯೆ ಮತ್ತೆ ಸಚಿವರ ದೆಹಲಿಯಾತ್ರೆ: ಕೆಲವರಿಗೆ ಕಾಂಗ್ರೆಸ್​ ಹೈಕಮಾಂಡ್​ನಿಂದ ಬುಲಾವ್

ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್​ ಈ ಹಿಂದೆ ಆಪರೇಷನ್ ಕಮಲದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಹಾಗೇ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಬಿಜೆಪಿಯಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಆದ್ರೆ, ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್​ ಸರ್ಕಾರ ರಚನೆ ಸಂದರ್ಭದಲ್ಲೇ ಈ ಇಬ್ಬರು ಶಾಸಕರು ಬಿಜೆಪಿ ತೊರೆದು ವಾಪಸ್​ ಕಾಂಗ್ರೆಸ್​ಗೆ ವಾಪಸ್ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ
Image
ಕೈ ಶಾಸಕಾಂಗ ಸಭೆಯಲ್ಲಿ ಪರಸ್ಪರ ಕಿತ್ತಾಡಿಕೊಂಡ ಸಚಿವದ್ವಯರು..!
Image
‘ಕೈ’ ಶಾಸಕಾಂಗ ಸಭೆಯಲ್ಲೇ ಅಸಮಾಧಾನದ ಹೊಗೆ: ಸತೀಶ್ ವಿರುದ್ಧ ಗಣಿಗ ಆಕ್ಷೇಪ
Image
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
Image
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ

ಆದ್ರೆ, ಕೆಲ ಕಾರಣಾಂತರಗಳಿಂದ ಸದ್ಯಕ್ಕೆ ಅವರು ಬಿಜೆಪಿಯಲ್ಲೇ ಇದ್ದಾರೆ. ಆದರೆ ಬಿಜೆಪಿ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರವೇ ಇದ್ದಾರೆ. ಎಸ್​ಟಿ ಸೋಮಶೇಖರ್ ಕ್ಷೇತ್ರದ ಕೆಲ ಬಿಜೆಪಿ ನಾಯಕರ ನಡೆಯಿಂದ ಬೇಸತ್ತಿದ್ದಾರೆ. ಈ ಬಗ್ಗೆ ನಾಯಕರ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಸೋಮಶೇಖರ್ ಅವರು ಪಕ್ಷದಿಂದಲೇ ದೂರ ಇದ್ದು, ಕಾಂಗ್ರೆಸ್​​​​ನೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ.

ಅದರಲ್ಲೂ ಮುಖ್ಯವಾಗಿ ಪ್ರತಿಯೊಂದು ಹಂತದಲ್ಲೂ ಸಹ ವಿಪಕ್ಷ ಬಿಜೆಪಿ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುತ್ತಿದ್ದರೆ, ಸೋಮಶೇಖರ್ ಮಾತ್ರ ಕಾಂಗ್ರೆಸ್ ಸರ್ಕಾರವನ್ನು ಹಾಡಿಹೊಗಳುತ್ತಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್​​ ಗುಣಗಾನ ಮಾಡುತ್ತಲೇ ಇದ್ದಾರೆ. ಈ ಬಾರಿ ಬಜೆಟ್ ಅಧಿವೇಶನದಲ್ಲಿ ಗ್ರೇಟರ್​ ಬೆಂಗಳೂರು ಕಾಯ್ದೆಗೆ ಬಿಜೆಪಿಗಳು ಆಕ್ರೋಶ ಹೊರಹಾಕಿದ್ದರೆ, ಸೋಮಶೇಖರ್ ಮಾತ್ರ ಸದನದಲ್ಲೇ ತಮ್ಮ ಪಕ್ಷದ ನಾಯಕರ ಮುಂದೆಯೇ ಗ್ರೇಟರ್​ ಬೆಂಗಳೂರಿಗೆ ಬೆಂಬಲ ವ್ಯಕ್ತಪಡಿಸಿ ಡಿಕೆ ಶಿವಕುಮಾರ್​ ಅವರನ್ನು ಹಾಡಿಹೊಗಳಿದಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು 2020ರ ಜುಲೈ 2ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದರು. 2023ರ ಮೇ ತಿಂಗಳಲ್ಲಿ ಉಪಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿ ಹುದ್ದೆ ಘೋಷಣೆ ವೇಳೆಯೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ಲೋಕಸಭೆ ಚುನಾವಣೆವರೆಗೆ ಡಿ.ಕೆ.ಶಿವಕುಮಾರ್‌ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 pm, Thu, 13 March 25