ಕೊಟ್ಟ ಹಣ ಕೇಳಿದ್ದಕ್ಕೆ ಕಿಡ್ನಾಪ್ ಕೇಸ್ ಹಾಕಿಸಿಕೊಂಡ ಮಹಿಳೆ: ಹಣ ಕೇಳಿದ್ದಕ್ಕೆ ವಂಚಕನ ಪತ್ನಿ ಕಟ್ಟಿದ ಕಥೆ ಅಬ್ಬಬ್ಬಾ..
ಬಾಗಲಕೋಟೆಯ ಓರ್ವ ಮಹಿಳೆ ರೈಲ್ವೆ ಟಿಸಿ ಉದ್ಯೋಗಕ್ಕಾಗಿ ವ್ಯಕ್ತಿಯೋರ್ವನಿಗೆ 12 ಲಕ್ಷ ರೂ ನೀಡಿದ್ದಾರೆ. ಆದರೆ ಉದ್ಯೋಗವೂ ಸಿಗದೆ, ಹಣ ಕೂಡ ವಾಪಸ್ ಕೊಡದೆ ಮೋಸ ಹೋಗಿರುವಂತಹ ಘಟನೆ ನಡೆದಿದೆ. ಹಣ ವಾಪಸ್ ಕೇಳಲು ಹೋದಾಗ, ವ್ಯಕ್ತಿಯ ಪತ್ನಿ ಸಹಾಯಕ್ಕೆ ಬಂದಿದ್ದಳು. ಆದರೆ ಇದೀಗ ಆ ಮಹಿಳೆ ಕೂಡ ಅಪಹರಣದ ಆರೋಪ ಹೊರಿಸಿದ್ದಾರೆ.

ಬಾಗಲಕೋಟೆ, ಮಾರ್ಚ್ 13: ಆ ವ್ಯಕ್ತಿ ರೈಲ್ವೆ ಇಲಾಖೆಯಲ್ಲಿ ಟಿಸಿ ನೌಕರಿ ಕೊಡಿಸೋದಾಗಿ ಮಹಿಳೆಯಿಂದ ಲಕ್ಷಾಂತರ ರೂ ಹಣ ಪಡೆದಿದ್ದ. ಆದರೆ ನೌಕರಿಯೂ ಇಲ್ಲ, ಹಣವನ್ನು ವಾಪಸ್ ಕೊಟ್ಟಿರಲಿಲ್ಲ. ಇದರಿಂದ ಹಣ ಕೇಳಲು ಮಹಿಳೆ (Woman) ಮೈಸೂರಿನ ಆತನ ಮನೆಗೆ ತೆರಳಿದ್ದಳು. ಗಂಡನ ವರ್ತನೆಗೆ ಬೇಸತ್ತ ಆತನ ಪತ್ನಿ ಗಂಡ ನಿಮ್ಮ ಹಣ ಕೊಡುವವರೆಗೂ ನಾ ನಿಮ್ಮ ಜೊತೆ ಇರುತ್ತೇನೆ ಅಂತ ಬಂದಿದ್ದಳು. ಆದರೆ ಈಗ ಹಣ ಕೇಳಿದ್ದಕ್ಕೆ ಆ ಮಹಿಳೆಯ ಮೇಲೆ ಕಿಡ್ನಾಪ್ (Kidnapping) ಕೇಸ್ ಹಾಕಲಾಗಿದೆ.
ಹಣವೂ ಇಲ್ಲ, ನೌಕರಿಯೂ ಇಲ್ಲ
ಹನುಮಂತ ವಡ್ಡರ್ ಎಂಬಾತ ಬಾಗಲಕೋಟೆಯ ಸರಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲ ದಿನ ಕೆಲಸ ಮಾಡಿದ್ದಾರೆ. ಬಳಿಕ ಸೋಮಶೇಖರ್ ಸಾಲಮನಿ ಎಂಬ ಮಾಜಿ ಯೋಧನ ಮೂಲಕ ಆಶಾ ಜಾಜಿಗೆ ಎಂಬವವರ ಪರಿಚಯವಾಗಿದೆ. ನಂತರ ಆಶಾ ಜಾಜಿಗೆ ರೇಲ್ವೆ ಇಲಾಖೆ ಟಿಸಿ ಕೆಲಸ ಕೊಡಿಸೋದಾಗಿ 12 ಲಕ್ಷ ರೂ. ಪಡೆದಿದ್ದಾನಂತೆ. ಎರಡುವರೆ ವರ್ಷದ ಹಿಂದೆ ಹಣ ಪಡೆದು ಹಣವನ್ನೂ ಕೊಟ್ಟಿಲ್ಲ, ನೌಕರಿಯೂ ಇಲ್ಲ.
ಇದನ್ನೂ ಓದಿ: ಕುರಿ ಕಳ್ಳತನ ಮಾಡಲು ಬಂದು ಕುರಿಗಾಯಿಯನ್ನೇ ಕೊಂದರು: ಆತ್ಮರಕ್ಷಣೆಗೆ ಗನ್ ಬೇಕೆಂದ ಕುರುಬರು
ವಂಚನೆ ಮಾಡಿ ಮೈಸೂರು ಸೇರಿದ್ದ ಹನುಮಂತ ವಡ್ಡರ್ನನ್ನು ಆಶಾ ಜಾಜಿ ತನ್ನ ಸ್ನೇಹಿತೆ ನಿರ್ಮಲಾ ಜೊತೆ ಹಣ ಕೇಳಲು ಜನವರಿ ತಿಂಗಳಲ್ಲಿ ಮೈಸೂರಿಗೆ ಹೋಗಿದ್ದರು. ಆಗ ಹನುಮಂತ ಮನೆಯಲ್ಲಿರಲಿಲ್ಲ. ಗಂಡನ ವರ್ತನೆಯಿಂದ ಬೇಸತ್ತ ಪತ್ನಿ ಮಾದೇವಿ ನನ್ನ ಗಂಡ ನಿಮ್ಮ ಹಣ ಕೊಡುವವರೆಗೂ ನಾನು ನಿಮ್ಮ ಜೊತೆ ಬರುತ್ತೇನೆ ಎಂದು ಸಹೋದರಿ ಹಾಗೂ ಮಗನ ಸಮೇತ ಬಂದಿದ್ದಾರೆ. ಆದರೆ ಈಗ ಎರಡು ತಿಂಗಳಿಂದ ನನ್ನ ಕಿಡ್ನಾಪ್ ಮಾಡಿ ಕೂಡಿಟ್ಟಿದ್ದರು. ಬಾಗಲಕೋಟೆ ತಾಲ್ಲೂಕಿನ ಮುರನಾಳ ಗ್ರಾಮದ ಆಶಾ ಜಾಜಿ ತನ್ನ ಮನೆಯಲ್ಲಿ ಗೃಹಬಂಧನದಲ್ಲಿಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ. ಪತಿ ಮಾಡಿದ ತಪ್ಪಿಗೆ ನನಗೆ ಶಿಕ್ಷೆ ನೀಡಿದ್ದಾರೆ ಎಂದು ಆರೋಪಿಸಿದ್ದ, ಮಾರ್ಚ್ 11 ರಂದು ವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಿಡ್ನಾಪ್ ಆರೋಪಕ್ಕೆ ಮಹಿಳೆ ಕಣ್ಣೀರು
ಆಶಾ ಜಾಜಿ 13 ವರ್ಷದ ಹಿಂದೆ ಮದುವೆಯಾಗಿದ್ದು, ಮದುವೆಗಾಗಿ ಹತ್ತು ತಿಂಗಳಲ್ಲಿ ಪತಿ ನಿಧನವಾಗಿದ್ದಾರೆ. 12 ವರ್ಷದ ಮಗನಿದ್ದಾನೆ. ಜೀವನಕ್ಕೆ ಆಸರೆಯಾಗಬಹುದು ಎಂದು ನೌಕರಿಗಾಗಿ ಸಾಲ ಮಾಡಿ ಹಣ ಕೊಟ್ಟಿದ್ದರು. ಕಿಡ್ನಾಪ್ ಆರೋಪಕ್ಕೆ ಕಣ್ಣೀರು ಹಾಕುತ್ತಲೇ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಆಶಾ ಜಾಜಿ, ತನ್ನ ಕಷ್ಟ ಹೇಳಿಕೊಂಡು ಗೋಳಾಡಿದರು. ಹನುಮಂತ ವಡ್ಡರ್ 12 ಲಕ್ಷ ರೂ ಪಡೆದು ಮೋಸ ಮಾಡಿದ್ದಾನೆ. ಹಣ ಕೇಳಲು ಅಲೆದಾಡಿ ಸಾಕಾಗಿದೆ. ಅತ್ತು ಕರೆದು ಬೇಡಿಕೊಂಡರೂ ಹಣ ಕೊಟ್ಟಿಲ್ಲ. ನಮ್ಮ ತಂದೆ ಇದೇ ಚಿಂತೆಯಲ್ಲಿ ಸಾವನ್ನಪ್ಪಿದರು. ಮೈಸೂರಿಗೆ ಹಣ ಕೇಳಲು ಹೋದಾಗ ಆತನ ಪತ್ನಿ ನನಗೆ ಇದೇ ರೀತಿ ಮೋಸ ಹೋದವರು ಸುಮಾರು ಜನ ಮನೆಗೆ ಬಂದು ಜೀವ ತಿಂತಿದ್ದಾರೆ ಎಂದರು.
ನಾನು ನಿಮ್ಮ ಜೊತೆಗೆ ಬರುತ್ತೇನೆ. ಆತ ಹಣ ಕೊಡುವವರೆಗೂ ನಿಮ್ಮ ಮನೆಯಲ್ಲಿ ಇರುತ್ತೇನೆ ಎಂದು ನಮ್ಮ ಮನೆಗೆ ಬಂದಿದ್ದಾಳೆ. ನಮ್ಮ ಮನೆಯಲ್ಲಿ ಸಹೋದರಿ ತರಹ ಆಕೆಯನ್ನು ನೋಡಿಕೊಂಡಿದ್ದೇವೆ. ಆಕೆಯನ್ನು ಕರೆದುಕೊಂಡು ದೇವಸ್ಥಾನ ಸೇರಿದಂತೆ ವಿವಿಧ ಕಡೆ ಹೋಗಿದ್ದೇವೆ. ಆಕೆಯ ಸಹೋದರಿ ಹಾಗೂ ಮಗನನ್ನು ನಮ್ಮ ಮಗನಂತೆ, ತಂಗಿಯಂತೆ ನೋಡಿಕೊಂಡಿದ್ದೇವೆ. ಆಕೆ ನಮ್ಮ ಜೊತೆ ಸಂತೋಷದಿಂದ ಇದ್ದಿರೋದಕ್ಕೆ ಫೋಟೋ, ವಿಡಿಯೋ ಸಾಕ್ಷಿ ಇವೆ ಎಂದು ಹೇಳಿದ್ದಾರೆ.
ಕಿಡ್ನಾಪ್ ಮಾಡುವವರು ಬಸ್ಲ್ಲಿ ಬರುತ್ತಾರಾ?
ಮೈಸೂರಿಂದ ನಾವು ಬಸ್‌ನಲ್ಲಿ ಬಂದಿದ್ದೇವೆ. ಕಿಡ್ನಾಪ್ ಮಾಡುವವರು ಬಸ್‌ನಲ್ಲಿ ಬರುತ್ತಾರಾ? ಕಿಡ್ನಾಪ್ ಅಂತ ಆಗಿದ್ದರೆ ಬಸ್‌ನಲ್ಲಿ ಕೂಗಾಡಬಹುದಿತ್ತು. ಮನೆಯಿಂದ ಬರುವಾಗಲೂ ಕೂಗಾಡಿ ಜನ ಸೇರಿಸಬಹುದಿತ್ತು. ವಿನಾಕಾರಣ ನಮ್ಮ ಮೇಲೆ ಕಿಡ್ನಾಪ್ ಕೇಸ್ ಹಾಕಿದ್ದಾರೆ. ನಾವು ಹನುಮಂತ ವಿರುದ್ಧ ಎಫ್ಐಆರ್ ಮಾಡುತ್ತೇವೆ. ಕಿಡ್ನಾಪ್ ಆರೋಪ ಸತ್ಯಕ್ಕೆ ದೂರ. ನಮ್ಮ ಹಣ ನಮಗೆ ವಾಪಸ್ ಕೊಡಿಸಿ ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ: ಐತಿಹಾಸಿಕ ಬೆಂಕಿ ಬಬಲಾದಿ ಮಠದ ಕಾಲಜ್ಞಾನ ವಾಣಿಗೆ ಅಪಸ್ವರ: ಏನದು?
ಜೊತೆಗೆ ಹಣ ಕೊಡುವ ವಿಡಿಯೋ ಹಂಚಿಕೊಂಡ ಆಶಾ, ನಾನು ಖುದ್ದಾಗಿ ಆಶಾ ಜೊತೆ ಹೋಗುತ್ತಿದ್ದೇನೆ ಎಂದು ಮಾದೇವಿ ಬರೆದ ಲೆಟರ್ ಕೂಡ ತೋರಿಸಿದ್ದಾರೆ. ಹನುಮಂತ ನನ್ನಂತೆ ಇನ್ನು ಅನೇಕ ಜನರಿಗೆ ನೌಕರಿ ಕೊಡಿಸೋದಾಗಿ ಮೋಸ ಮಾಡಿದ್ದಾನೆ. ಇದೊಂದು ವ್ಯವಸ್ಥಿತ ತಂಡ ಇದೆ. ಅವರಿಗೆ ಶಿಕ್ಷೆಯಾಗಬೇಕು, ನಮಗೆ ಹಣ ಸಿಗಬೇಕು ಎಂದರು. ಒಟ್ಟಿನಲ್ಲಿ ನೌಕರಿಯೂ ಇಲ್ಲ, ಹಣವೂ ಇಲ್ಲ. ಮೇಲಾಗಿ ಈಗ ಕಿಡ್ನಾಪ್ ಕೇಸ್ ಹಾಕಿಸಿಕೊಳ್ಳುವಂತಾಗಿದ್ದು ವಿಪರ್ಯಾಸವೇ ಸರಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.