7 ವರ್ಷಗಳ ಹಿಂದೆ ನಾಪತ್ತೆಯಾಗಿ ಮಹಾರಾಷ್ಟ್ರದ ರಾಯಗಢದಲ್ಲಿದ್ದ ಬಾದಾಮಿ ಮಹಿಳೆ ಸಿನಿಮೀಯ ರೀತಿಯಲ್ಲಿ ವಾಪಸ್
ಕುಟುಂಬದವರಿಂದ, ಊರಿನಿಂದ, ಸಂಬಂಧಿಕರಿಂದ ದೂರವಾಗಿ ದೂರದ ಮುಂಬೈಯಲ್ಲಿ ಶೋಚನೀಯ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಏಳು ವರ್ಷಗಳ ನಂತರ ಸಿನಿಮೀಯ ರೀತಿಯಲ್ಲಿ ಮನೆಯವರನ್ನು ಸೇರಿದ ಅಪರೂಪದ ವಿದ್ಯಮಾನ ಕರ್ನಾಟಕದ ಬಾದಾಮಿಯಲ್ಲಿ ನಡೆದಿದೆ. ಅಷ್ಟಕ್ಕೂ ಆ ಮಹಿಳೆಗೆ ಆಗಿದ್ದೇನು? ಸಮಾಜಸೇವಾ ಸಂಸ್ಥೆಗೆ ಶೋಚನೀಯ ಸ್ಥಿತಿಯಲ್ಲಿ ಸಿಕ್ಕ ಆಕೆಯ ಗುರುತು 7 ವರ್ಷಗಳ ನಂತರ ಪತ್ತೆಯಾಗಿದ್ದು ಹೇಗೆ? ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬೆಂಗಳೂರು, ಫೆಬ್ರವರಿ 21: ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಕೊನೆಗೂ ಸಿನಿಮೀಯ ರೀತಿಯಲ್ಲಿ ಸಂಬಂಧಿಕರನ್ನು ಸೇರಿಕೊಂಡ ಅಪರೂಪದ ವಿದ್ಯಮಾನ ನಡೆದಿದೆ. ರಾಯಗಢದಲ್ಲಿ ದಯನೀಯ ಸ್ಥಿತಿಯಲ್ಲಿದ್ದ ಮಹಿಳೆ ಪನ್ವೇಲ್ ಮೂಲದ ಸಾಮಾಜಿಕ ಕಾರ್ಯಕರ್ತರ ಸಂಸ್ಥೆ ‘ಸೋಶಿಯಲ್ ಅಂಡ್ ಇವಾಂಜೆಲಿಕಲ್ ಅಸೋಸಿಯೇಷನ್ ಫಾರ್ ಲವ್ (ಸೀಲ್)’ ಕಣ್ಣಿಗೆ ಬಿದ್ದಿದ್ದರು. ತನ್ನ ಹೆಸರು ಕಸ್ತೂರಿ ಪಾಟೀಲ್ ಎಂದಷ್ಟೇ ಹೇಳಿದ್ದ ಮಹಿಳೆ, ಹೆಚ್ಚೇನೂ ಮಾಹಿತಿ ನೀಡುವ ಮಾನಸಿಕ ಹಾಗೂ ದೈಹಿಕ ಸ್ಥಿತಿಯಲ್ಲಿ ಇರಲಿಲ್ಲ. ಅವರನ್ನು ಸೀಲ್ ಆಶ್ರಯ ಕೇಂದ್ರಕ್ಕೆ ಕರೆದೊಯ್ದು ಆರೈಕೆ ಮಾಡಿ ನೋಡಿಕೊಳ್ಳಲಾಗುತ್ತಿತ್ತು.
ಶೋಚನೀಯ ಸ್ಥಿತಿಯಲ್ಲಿದ್ದ ಮಹಿಳೆ
‘ರಾಯಗಢ ಜಿಲ್ಲೆಯ ಪಾಲಿ ಪ್ರದೇಶದಲ್ಲಿ ಕಸ್ತೂರಿ ಪಾಟೀಲ್ ನಮ್ಮ ಕಾರ್ಯಕರ್ತರ ಕಣ್ಣಿಗೆ ಬಿದ್ದಾಗ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಹೆಣ್ಣೋ ಗಂಡೋ ಎಂಬುದೂ ತಿಳಿಯದ ಮಟ್ಟಿಗೆ ಅಸ್ವಸ್ಥರಾಗಿದ್ದರು. ಬಳಿಕ ನಮ್ಮ ಆಶ್ರಯ ನಿವಾಸಕ್ಕೆ ಕರೆತಂದು ಉಪಚರಿಸಿದೆವು. ಹೆಸರು ಕಸ್ತೂರಿ ಪಾಟೀಲ್ ಎಂದಷ್ಟೇ ಹೇಳಿದ್ದ ಆಕೆ, ಇನ್ನೇನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಆಕೆ ಎಲ್ಲಿಂದ ಬಂದಿದ್ದಾರೆ ಎಂಬುದೂ ತಿಳಿದಿರಲಿಲ್ಲ’ ಎಂದು ಸೋಶಿಯಲ್ ಅಂಡ್ ಇವಾಂಜೆಲಿಕಲ್ ಅಸೋಸಿಯೇಷನ್ ಫಾರ್ ಲವ್ ಸಂಸ್ಥಾಪಕ ಕೆಎಂ ಫಿಲಿಪ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
‘ಬಾದಾಮಿ’ ಎಂದ ಮಹಿಳೆ: ಆಮೇಲೆ ನಡೆದ್ದು ಪವಾಡ!
ಈ ವಾರದ ಆರಂಭದಲ್ಲಿ ಕಸ್ತೂರಿ ಪಾಟೀಲ್ ‘ಸೀಲ್’ ಕಾರ್ಯಕರ್ತರ ಬಳಿ ‘ಬಾದಾಮಿ’ ಎಂಬ ಪದ ಉಚ್ಚರಿಸಿದ್ದಾರೆ. ಬಾದಾಮಿ ಎಂಬುದು ಕರ್ನಾಟಕದ ಒಂದು ಸ್ಥಳ ಎಂಬದು ನಮಗೆ ತಿಳಿದಿತ್ತು. ತಕ್ಷಣವೇ ಬಾದಾಮಿಯ ಮುಖ್ಯ ಪೊಲೀಸ್ ಠಾಣೆಗೆ ಕರೆ ಮಾಡಿ ಕಸ್ತೂರಿ ಪಾಟೀಲ್ ಛಾಯಾಚಿತ್ರಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದೆವು. ಕೇವಲ ಎರಡು ಗಂಟೆಗಳಲ್ಲಿ, ಕಸ್ತೂರಿ ಅವರ ವಿವಾಹಿತ ಮಗಳು ದೇವಮ್ಮ ಭಿಂಗಾರಿ ಏಳು ವರ್ಷಗಳಿಂದ ಅವಳನ್ನು ಹುಡುಕುತ್ತಿದ್ದಾರೆ ಮತ್ತು ಕಾಣೆಯಾದ ಬಗ್ಗೆ ದೂರು ಕೂಡ ದಾಖಲಾಗಿದೆ ಎಂದು ಬಾದಾಮಿ ಪೊಲೀಸರು ನಮಗೆ ತಿಳಿಸಿದರು. ಇದನ್ನು ಕೇಳಿ ನಮಗೆ ತುಂಬಾ ಸಂತೋಷವಾಯಿತು ಎಂದು ಸೀಲ್‌ನ ಮತ್ತೊಬ್ಬ ಕಾರ್ಯಕರ್ತೆ ಎ ಜೈನಮ್ಮ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಊರು ತೊರೆದಿದ್ದೇಕೆ ಕಸ್ತೂರಿ ಪಾಟೀಲ್?
ಕಸ್ತೂರಿ ಪಾಟೀಲ್ ಪತಿ ಎರಡನೇ ವಿವಾಹವಾಗಿದ್ದರು. ಇದನ್ನು ತಿಳಿದ ಕಸ್ತೂರಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ನಂತರ ಗಂಡನ ಮನೆ ತೊರೆದು ಸಹೋದರಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ, ನಂತರದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ, ಹೇಗೋ ತನ್ನ ಮನೆಯಿಂದ ತಪ್ಪಿಸಿಕೊಂಡು ಮಹಾರಾಷ್ಟ್ರದ ರಾಯಗಢ ಜಿಲ್ಲೆಗೆ ತೆರಳಿದ್ದರು.
ಅಲೆಮಾರಿ ಜೀವನ: ಕಸದ ತೊಟ್ಟಿಯಲ್ಲಿ ಸಿಕ್ಕಿದ್ದೇ ಆಹಾರ
ಸೀಲ್ ಸಂಸ್ಥೆಯ ಕಾರ್ಯಕರ್ತರಿಗೆ ಸಿಕ್ಕಿದ ಸಂದರ್ಭದಲ್ಲಿ ಕಸ್ತೂರಿ ಪಾಟೀಲ್ ಅಲೆಮಾರಿಯಾಗಿದ್ದರು. ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಅಳಿದುಳಿದ ಆಹಾರ, ಪಾದಚಾರಿಗಳು ಅಥವಾ ಪ್ರಯಾಣಿಕರು ಕೊಟ್ಟ ತಿನಿಸು ಸೇವಿಸಿ ಜೀವನ ಮಾಡುತ್ತಿದ್ದರು. ಕೆಲವು ಮಂದಿ ಸ್ಥಳೀಯರು ಆಕೆಯನ್ನು ಗಮನಿಸಿ ಸೀಲ್ ಸಂಸ್ಥೆಗೆ ಮಾಹಿತಿ ನೀಡಿದರು. ಬಳಿಕ ಅಲ್ಲಿಗೆ ತೆರಳಿ ಆಕೆಯನ್ನು ಕರೆದಕೊಂಡು ಬಂದಿದ್ದೆವು ಎಂದು ಜೈನಮ್ಮ ತಿಳಿಸಿದ್ದಾರೆ.
ಇದನ್ನೂ ಓದಿ:
‘‘ಕಸ್ತೂರಿ ಕೊನೆಗೂ ಪತ್ತೆಯಾಗಿರುವುದರಿಂದ ನಮಗೆ ತುಂಬಾ ಸಂತೋಷವಾಗಿದೆ. ಅವರನ್ನು ಕಾಣದೆ ನನ್ನ ಸೊಸೆ ಹೆಚ್ಚು ಚಿಂತಿತಳಾಗಿದ್ದಳು’’ ಎಂದು ಕಸ್ತೂರಿ ಪಾಟೀಲ್ ಅವರ ಮಗಳ ಅತ್ತೆ ಇರಮ್ಮ ಭಿಂಗಾರಿ ‘ಟೈಮ್ಸ್ ಆಫ್ ಇಂಡಿಯಾ’ಗೆ ತಿಳಿಸಿದ್ದಾರೆ. ‘‘25 ವರ್ಷಗಳಿಗೂ ಹೆಚ್ಚು ಕಾಲ, ನಮ್ಮ ಆಶ್ರಯ ನಿವಾಸ ನಿರಾಶ್ರಿತರನ್ನು ರಕ್ಷಿಸಿ ಅವರ ಕುಟುಂಬಗಳೊಂದಿಗೆ ಮತ್ತೆ ಒಂದುಗೂಡಿಸುತ್ತಿದೆ. ಕಾಣೆಯಾದ ವ್ಯಕ್ತಿಗಳ ಕುಟುಂಬಗಳನ್ನು ಪತ್ತೆಹಚ್ಚಲು ಬಯೋಮೆಟ್ರಿಕ್ಸ್ ಅನ್ನು ಬಳಸಬಹುದಾದ ಹೈಟೆಕ್ ಡೇಟಾಬೇಸ್ ಅನ್ನು ರಚಿಸಬೇಕೆಂದು ನಾವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ, ವಿಶೇಷವಾಗಿ ಪೊಲೀಸರಿಗೆ ನಿರಂತರವಾಗಿ ವಿನಂತಿಸುತ್ತಿದ್ದೇವೆ’’ ಎಂದು ಫಿಲಿಪ್ ಹೇಳಿದ್ದಾರೆ.