ಕುರಿ ಕಳ್ಳತನ ಮಾಡಲು ಬಂದು ಕುರಿಗಾಯಿಯನ್ನೇ ಕೊಂದರು: ಆತ್ಮರಕ್ಷಣೆಗೆ ಗನ್ ಬೇಕೆಂದ ಕುರುಬರು
ಬಾಗಲಕೋಟೆ ಜಿಲ್ಲೆಯಲ್ಲಿ ಕುರಿಗಾಹಿಯೊಬ್ಬನ ಕೊಲೆಯಿಂದ ಕುರುಬ ಸಮುದಾಯ ಆಕ್ರೋಶಗೊಂಡಿದೆ. ಕುರಿ ಕಳ್ಳರ ದಾಳಿಯಲ್ಲಿ ಯುವಕ ಕೊಲೆಯಾಗಿದ್ದಾನೆ. ಈ ಘಟನೆಯಿಂದ ಆತ್ಮರಕ್ಷಣೆಗೆ ಗನ್ ನೀಡಬೇಕೆಂದು ಕುರುಬ ಸಮುದಾಯ ಒತ್ತಾಯಿಸಿದ್ದು, ಜಿಲ್ಲಾಡಳಿತ ಎದುರು ಪ್ರತಿಭಟನೆ ಮಾಡಲಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಲವಾಗಿ ಒತ್ತಾಯಿಸಲಾಗಿದೆ.

ಬಾಗಲಕೋಟೆ, ಮಾರ್ಚ್ 12: ಆತ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಕುರಿಗಾಹಿ. ನಿತ್ಯ ಕಾಡು, ಮೇಡು ತಿರುಗಿ ಕುರಿ (sheep) ಮೇಯಿಸುವುದು ಆತನ ಕಾಯಕ. ಆದರೆ ಕುರಿ ಕಳ್ಳರಿಂದ ಕೊಲೆಯಾಗಿ (kill) ಜೀವ ಕಳೆದುಕೊಂಡಿದ್ದಾನೆ. ಇದರಿಂದ ಕುರುಬ ಸಮುದಾಯದ ಜನರು ಆತ್ಮರಕ್ಷಣೆಗೆ ಗನ್ ಬೇಕೆಂದು ಹೋರಾಟದ ಹಾದಿ ಹಿಡಿದಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಾರ್ಚ್ 9 ರಂದು ರಾತ್ರಿ 9 ಗಂಟೆ ಸುಮಾರಿಗೆ ಶರಣಪ್ಪ ಜಮ್ಮನಕಟ್ಟಿ ಎಂಬ ಕುರಿಗಾಹಿಯ ಕೊಲೆಯಾಗಿದೆ. ಬಾದಾಮಿ ತಾಲ್ಲೂಕಿನ ಹಳಗೇರಿ ವ್ಯಾಪ್ತಿಯ ಹೊಲದಲ್ಲಿ ಘಟನೆ ನಡೆದಿದೆ. ಕುರಿ ದಡ್ಡಿಗೆ ಕುರಿಕಳ್ಳತನಕ್ಕೆ ಯಾಕುಬ್, ಸಲ್ಮಾನ್, ಸಚಿನ್ ಎಂಬ ಕುರಿಗಳ್ಳರು ಬಂದಿದ್ದರು. ಶರಣಪ್ಪ ಕುರಿ ಕದ್ದೊಯ್ಯುತ್ತಿದ್ದ ಅವರನ್ನು ಹಿಡಿಯಲು ಹೋದಾಗ ಆತನ ಕೊಡಲಿಯಿಂದಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದ ಕುರಿಗಾಹಿಗಳಿಗೆ ಆತಂಕ ಶುರುವಾಗಿದ್ದು, ರಕ್ಷಣೆ ನೀಡಬೇಕು. ಅವರ ಆತ್ಮರಕ್ಷಣೆಗೆ ಗನ್ ನೀಡಬೇಕೆಂದು ಕುರಿಗಾಹಿಗಳು ಹಾಗೂ ಕುರುಬ ಸಮುದಾಯದ ಡಿಸಿ ಹಾಗೂ ಎಸ್ಪಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಯಾದಗಿರಿ: ಬೈಕ್ ಕೊಡಿಸದ ಕಾರಣ ತಂದೆ ಕತೆ ಮುಗಿಸಿದ ಆರೋಪದಲ್ಲಿ ಪಾಪಿ ಮಗ ಜೈಲುಪಾಲು
ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಕುಟುಂಬಕ್ಕೆ ಆಸರೆಯಾಗಿದ್ದ. ಆತನ ಮೇಲೆಯೇ ಮನೆ ಅವಲಂಬಿತವಾಗಿತ್ತು. ಅಂತಹ ವ್ಯಕ್ತಿಯನ್ನೇ ದುಷ್ಟರು ಕೊಲೆ ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಲಾಗಿದೆ. ಮೃತನ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಲಾಗಿದೆ.
ಸದ್ಯ ಅಧಿವೇಶನ ನಡೆಯುತ್ತಿದ್ದು ಚರ್ಚಿಸಿ ಕುರುಬರ ಹಿತರಕ್ಷಣಾ ಆಯೋಗ ರಚಿಸಬೇಕೆಂದು ಮನವಿ ಮಾಡಲಾಗಿದೆ. ಕುರಿ ದಡ್ಡಿ ಇರುವ ಕಡೆ ಬೀಟ್ ಪೊಲೀಸರು ನಿಗಾ ಇರಿಸುವಂತೆ ಆದೇಶಿಸಬೇಕೆಂದು ಎಸ್ಪಿಗೆ ಆಗ್ರಹ ಮಾಡಿದರು.
ಎಸ್ಪಿ ಅಮರನಾಥ ರೆಡ್ಡಿ ಹೇಳಿದ್ದಿಷ್ಟು
ಇನ್ನು ಆತ್ಮರಕ್ಷಣೆಗೆ ಗನ್ ನೀಡಬೇಕೆಂಬ ಬೇಡಿಕೆಗೆ ಉತ್ತರಿಸಿದ ಎಸ್ಪಿ ಅಮರನಾಥ ರೆಡ್ಡಿ, ಏಪ್ರಿಲ್ 23 ರಿಂದ ಗನ್ ತರಬೇತಿ ಆರಂಭಿಸಲಾಗುವುದು. ಗನ್ ಅವಶ್ಯಕತೆಯಿದ್ದವರು ಅಲ್ಲಿ ಪ್ರವೇಶ ಪಡೆದು ತರಬೇತಿ ಪಡೆಯಿರಿ. ನಂತರ ಕಾನೂನಾತ್ಮಕವಾಗಿ ಗನ್ ನೀಡಲಾಗುವುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಓರ್ವ ಕುರಿಗಾಹಿ ಕೊಲೆ, ಕುರುಬರ ಗನ್ ಬೇಡಿಕೆಗೆ ನಾಂದಿ ಹಾಡಿದೆ. ಸರಕಾರ ಇವರ ಹೋರಾಟಕ್ಕೆ ಹೇಗೆ ಸ್ಪಂದಿಸುತ್ತದೆ ನೋಡಬೇಕಿದೆ.
ಲಾರಿ ಡಿಕ್ಕಿ: ಬೊಲೆರೊ ವಾಹನದಲ್ಲಿದ್ದ ಇಬ್ಬರು ಸಾವು
ಲಾರಿ ಡಿಕ್ಕಿಯಾಗಿ ಬೊಲೆರೊ ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಯಾದಗಿರಿ ತಾಲೂಕಿನ ಕಿಲ್ಲನಕೇರಾ ಬಳಿ ನಡೆದಿದೆ. ವನಜಾಪ್ರಸಾದ್(30), ನಾಗರಾಜ(35) ಮೃತ ದುರ್ದೈವಿಗಳು. ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಕುಂಭಮೇಳ ಪ್ರವಾಸದ ಹೆಸರಲ್ಲಿ ಅಮಾಯಕರಿಗೆ ಲಕ್ಷಾಂತರ ರೂ. ವಂಚನೆ
ಸೈದಾಪುರ ಪ್ರಣತಿ ಎಲೆಕ್ಟ್ರಾನಿಕ್ಸ್ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು, ಕೆಲಸ ಮುಗಿಸಿಕೊಂಡು ಯಾದಗಿರಿಯತ್ತ ತೆರಳುವಾಗ ಲಾರಿ ಡಿಕ್ಕಿ ಹೊಡೆದಿದೆ. ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.