ಬೆಳಗಾವಿ, ಮಹಾರಾಷ್ಟ್ರ ಗಡಿಯಲ್ಲಿ ಕುರಿಗಳ್ಳರ ಹಾವಳಿ: ಒಂದೂವರೆ ತಿಂಗಳಲ್ಲಿ 160ಕ್ಕೂ ಹೆಚ್ಚು ಕುರಿಗಳು ಕಳವು
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 150ಕ್ಕೂ ಹೆಚ್ಚು ಕುರಿಗಳು ಕಳುವಾಗಿವೆ. ಇದರಿಂದಾಗಿ ಊರು ಊರು ಅಲೆಯುವ ಕುರುಬರು ಆತಂಕಕ್ಕೀಡಾಗಿದ್ದಾರೆ. ಕುರಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕುರುಬರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿ ಕಳ್ಳರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

ಬೆಳಗಾವಿ, ಫೆಬ್ರವರಿ 03: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇತ್ತಿಚೀನ ದಿನಗಳಲ್ಲಿ ಕುರಿಗಳ್ಳರ ಹಾವಳಿ (Sheep Theft) ಹೆಚ್ಚಾಗಿದು, ಸಂಚಾರಿ ಕುರುಬರು ಬೆಚ್ಚಿ ಬಿದ್ದಿದ್ದಾರೆ. ಊರು ಊರು ಅಲೆಯುತ್ತ ಕುರಿ ಸಾಕಿ ಬದುಕು ಕಟ್ಟಿಕೊಳ್ಳುವ ಇವರಿಗೆ ಅದೊಂದು ಕತರ್ನಾಗ್ ಗ್ಯಾಂಗ್ ಬೇತಾಳನಂತೆ ಬೆನ್ನು ಬಿದ್ದಿದೆ. ಮಧ್ಯರಾತ್ರಿ ಎಂಟ್ರಿಕೊಡುವ ಈ ಗ್ಯಾಂಗ್ ಕ್ಷಣಾರ್ಧದಲ್ಲೇ ಕುರಿಗಳನ್ನ ಅಬೆಸ್ ಮಾಡಿ ಬೀಡುತ್ತೆ. ಒಂದೂವರೆ ತಿಂಗಳಲ್ಲಿ ಎಷ್ಟು ಕುರಿ ಕಳ್ಳತನ ಆಗಿವೆ? ಕುರುಬರು ಕುರಿ ಬಿಟ್ಟು ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದು ಯಾಕೆ? ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಹೇಳಿದ್ದೇನು ಗೊತ್ತಾ? ಮುಂದೆ ಓದಿ.
160ಕ್ಕೂ ಹೆಚ್ಚು ಕುರಿಗಳ ಕಳ್ಳತನ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಹತ್ತಲ್ಲ ಇಪ್ಪತ್ತಲ್ಲ ಸುಮಾರು 150ರಿಂದ 160ಕ್ಕೂ ಅಧಿಕ ಕುರಿಗಳ ಕಳ್ಳತನ ಆಗಿದ್ದು ಇದರಿಂದ ಕುರುಬರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಒಂದೇ ಭಾಗದಲ್ಲಿ ನಿರಂತರವಾಗಿ ಕುರಿಗಳ ಕಳ್ಳತನ ಆಗ್ತಿದ್ದು, ಹೇಗೆ ತಮ್ಮ ಕುರಿಗಳನ್ನ ಉಳಿಸಿಕೊಳ್ಳಬೇಕು ಅಂತಾ ಗೊತ್ತಾಗದ ಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳು ಸೀಜ್
ಬೆಳಗಾವಿ ತಾಲೂಕಿನ ಬೆಳಗುಂದಿ, ಕಡೋಲಿ, ಕಾಕತಿ, ಕುದ್ರೆಮನಿ ಸೇರಿದಂತೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಗ್ರಾಮದಲ್ಲಿ ಕುರಿಗಳು ಕಳ್ಳತನವಾಗಿವೆ. ಈ ಬಗ್ಗೆ ಬೆಳಗಾವಿ ಗ್ರಾಮೀಣ ಮತ್ತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ನೀಡಿದ್ರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ಇದರಿಂದ ನೊಂದುಕೊಂಡ ಕುರುಬರು ಇಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದರು. ಕುರಿಗಳ್ಳರನ್ನ ಹಿಡಿಯುವಂತೆ ಒತ್ತಾಯಿಸಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
15 ಲಕ್ಷಕ್ಕೂ ಅಧಿಕ ಮೌಲ್ಯದ ಕುರಿಗಳು ಕಳ್ಳತನ
ಅಷ್ಟಕ್ಕೂ ಮಹಾರಾಷ್ಟ್ರದಿಂದ ಬರುವ ಈ ಗ್ಯಾಂಗ್ನಲ್ಲಿ ಎಂಟರಿಂದ ಹತ್ತು ಜನ ಖದೀಮರಿದ್ದಾರಂತೆ. ಮಧ್ಯರಾತ್ರಿ ಕುರಿಗಾಹಿಗಳು ಮಲಗಿದ ಮೇಲೆ ದೊಡ್ಡಿಗೆ ಎಂಟ್ರಿಕೊಟ್ಟು ದೂರದಲ್ಲಿ ವಾಹನ ನಿಲ್ಲಿಸಿ ನಡೆದುಕೊಂಡು ಬಂದು ಒದೊಂದು ತಂಡದಿಂದ ಎಂಟು ಹತ್ತು ಕುರಿಗಳನ್ನ ಎಗರಿಸಿಕೊಂಡು ಎಸ್ಕೇಪ್ ಆಗ್ತಾರಂತೆ. ಹೀಗೆ ಹತ್ತು ಕುರಿಗಳ ತಂಡದಲ್ಲಿ ಕಳ್ಳತನ ಆಗಿದ್ದು ಈವರೆಗೂ ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಕುರಿಗಳು ಕಳ್ಳತನವಾಗಿವೆ.
ಪೊಲೀಸ್ ಕಮಿಷನ್ ಯಡಾ ಮಾರ್ಟಿನ್ ಹೇಳಿದ್ದಿಷ್ಟು
ಈ ಗ್ಯಾಂಗ್ ಗಡಿ ಭಾಗದಲ್ಲಿ ಸಕ್ರೀಯವಾಗಿದ್ದು, ಒಮ್ಮೆ ಬೆಳಗಾವಿ ಭಾಗದಲ್ಲಿ ಕಳ್ಳತನ ಮಾಡಿ ಮಹಾರಾಷ್ಟ್ರದಲ್ಲಿ ಕದ್ದ ಕುರಿ ಮಾರಾಟ ಮಾಡುತ್ತೆ. ಮಹಾರಾಷ್ಟ್ರದಲ್ಲಿ ಕಳ್ಳತನ ಮಾಡಿಕೊಂಡು ಬಂದು ಬೆಳಗಾವಿ ಮಾರ್ಕೆಟ್ನಲ್ಲಿ ಕುರಿಗಳನ್ನ ಮಾರಾಟ ಮಾಡ್ತಾರಂತೆ. ಈಗಾಗಲೇ ಮಹಾರಾಷ್ಟ್ರ ಪೊಲೀಸರು ಕೆಲ ಆರೋಪಿಗಳನ್ನ ಹಿಡಿದಿದ್ದು ಅವರನ್ನ ರಾಜ್ಯಕ್ಕೆ ತಂದು ವಿಚಾರಣೆ ನಡೆಸಿದ್ರೇ ಕುರಿ ಕದ್ದ ಬಗ್ಗೆ ಹೊರ ಬರುತ್ತೆ ಎಂಬುದು ಕುರಿಗಾಹಿಗಳ ಆಗ್ರಹವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನ್ ಯಡಾ ಮಾರ್ಟಿನ್, ಎರಡು ಠಾಣೆಗಳಲ್ಲಿ ಕುರಿ ಕಳ್ಳತನ ಬಗ್ಗೆ ಕೇಸ್ ದಾಖಲಾಗಿದ್ದು ಆರೋಪಿಗಳ ಬಗ್ಗೆ ಕೆಲ ಸುಳಿವುಗಳಿದ್ದು ಆದಷ್ಟು ಬೇಗ ಬಂಧಿಸುತ್ತೇವೆ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿಂದು ಒಂದೇ ದಿನ 7 ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ: ಯಾವ್ಯಾವ ಜಿಲ್ಲೆಯಲ್ಲಿ..?
ಸದ್ಯ ಕುರಿ ಕಳ್ಳತನ ಪ್ರಕರಣವನ್ನ ನಗರ ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದು, ಖದೀಮರ ಬೆನ್ನು ಬಿದ್ದಿದ್ದಾರೆ. ಇತ್ತ ರಾತ್ರಿ ಹಗಲು-ಮಳೆ ಗಾಳಿ ಲೆಕ್ಕಿಸದೇ ಕುರಿಗಳನ್ನ ಕಟ್ಟಿಕೊಂಡು ಊರೂರು, ಜಮೀನುಗಳನ್ನ ಸುತ್ತಿ ಸಾಕಿ ಬದುಕು ಕಟ್ಟಿಕೊಳ್ತಿರುವ ಕುರುಬರ ಕಣ್ಣಿಗೆ ಮಣ್ಣೆರಚುವ ಕೆಲಸ ಕಳ್ಳರು ಮಾಡ್ತಿದ್ದು, ಆದಷ್ಟು ಬೇಗ ಈ ಖದೀಮರನ್ನ ಹೆಡೆಮುರಿ ಕಟ್ಟಿ ಮಟ್ಟ ಹಾಕುವ ಕೆಲಸವನ್ನ ಪೊಲೀಸರು ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:04 pm, Mon, 3 February 25