ದಿಲ್ಲಿಯಲ್ಲಿ ರಾಜಕೀಯ ಆಟವಾಡುತ್ತಿರುವ ಯತ್ನಾಳ್ಗೆ ಮತ್ತೊಮ್ಮೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ
ಯತ್ನಾಳ್ ಹಾಗೂ ವಿಜಯೇಂದ್ರ ಬಣ ನಡುವಿನ ಕಿತ್ತಾಟ ತೀರ್ವ ಸ್ವರೂಪ ಪಡೆದುಕೊಂಡಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಯತ್ನಾಳ್ ಪಟ್ಟು ಹಿಡಿದಿದ್ದು, ಬಹಿರಂಗವಾಗಿಯೇ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಇದು ತಾರಕಕ್ಕೇರುತ್ತಿದ್ದಂತೆಯೇ ಇದೀಗ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಮಧ್ಯ ಪ್ರವೇಶ ಮಾಡಿದ್ದು, ಯತ್ನಾಳ್ಗೆ ಮತ್ತೊಮ್ಮೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಬೆಂಗಳೂರು, (ಫೆಬ್ರವರಿ 10): ಕರ್ನಾಟಕ ಬಿಜೆಪಿ ಬಣ ಬಡಿದಾಟ ಸದ್ಯ ದೆಹಲಿ ಅಂಗಳಕ್ಕೆ ತಲುಪಿದೆ. ಕೇಂದ್ರ ಸಚಿವ ವಿ ಸೋಮಣ್ಣ ಅವರ ಗೃಹ ಪ್ರವೇಶ ಹಿನ್ನೆಲೆಯಲ್ಲಿ ಎರಡೂ ಬಣದ ನಾಯಕರು ದೆಹಲಿಗೆ ತೆರಳಿದ್ದಾರೆ. ಆದ್ರೆ, ಗೃಹ ಪ್ರವೇಶ ನೆಪದಲ್ಲಿ ಯತ್ನಾಳ್ ಬಣ ಗೌಪ್ಯ ಸಭೆ ನಡೆಸಿದೆ. ಇನ್ನು ಯತ್ನಾಳ್ ಕಡೆ ತಟಸ್ಥ ಬಣಸವೂ ಸಹ ತಿರುಗಿದ್ದು, ಎರಡೂ ಬಣಗಳು ಮಹತ್ವದ ಸಭೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಯತ್ನಾಳ್ಗೆ ಬಿಜೆಪಿ ಹೈಕಮಾಂಡ್ ನ ಶಿಸ್ತು ಪಾಲನಾ ಸಮಿತಿ ಶೋಕಾಸ್ ನೋಟಿಸ್ ನೀಡಿದೆ. 72 ಗಂಟೆ ಒಳಗೆ ಉತ್ತರಿಸುವಂತೆ ಖಡ್ ಸೂಚನೆ ನೀಡಿದೆ.
ಜಾರಿ ಮಾಡಿದ್ದು, 72 ಗಂಟೆ ಒಳಗೆ ಕಾರಣ ನೀಡುವಂತೆ ಬಿಜೆಪಿ ಶಿಸ್ತು ಸಮಿತಿ ಸೂಚನೆ ನೀಡಿದೆ. ನಿಗದಿತ ಕಾಲಮಿತಿಯೊಳಗೆ ಉತ್ತರ ನೀಡದಿದ್ದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಶೋಕಾಸ್ ನೋಟಿಸ್ನಲ್ಲಿ ಖಡಕ್ ಆಗಿ ಉಲ್ಲೇಖಿಸಿದೆ. ಆದ್ರೆ, ಶೋಕಾಸ್ ನೋಟಿಸ್ ಇನ್ನೂ ಯತ್ನಾಳ್ ಕೈಸೇರಿಲ್ಲ. ಸದ್ಯ ಯತ್ನಾಳ್ ದೆಹಲಿಯಿಂದ ಹೈದರಾಬಾದ್ ಪ್ರಯಾಣದಲ್ಲಿದ್ದಾರೆ. ಇನ್ನು ವಿಜಯೇಂದ್ರ ದೆಹಲಿಯಲ್ಲಿರುವಾಗಲೇ ಯತ್ನಾಳ್ಗೆ ನೋಟಿಸ್ ಜಾರಿ ಮಾಡಿದ್ದು ಸಂಚಲನ ಮೂಡಿಸಿದೆ.
ಇದನ್ನೂ ಓದಿ: ವಿಜಯೇಂದ್ರಗೆ ಬಿಗ್ ಶಾಕ್: ಯತ್ನಾಳ್ ಕಡೆ ತಿರುಗಿದ ತಟಸ್ಥ ನಾಯಕರ ಬಣ, ದಿಲ್ಲಿಯಲ್ಲಿ ಗೌಪ್ಯ ಸಭೆ
ಶೋಕಾಸ್ ನೋಟಿಸ್ನಲ್ಲೇನಿದೆ?
ಭಾರತೀಯ ಜನತಾ ಪಕ್ಷದ ಸಂವಿಧಾನ ಮತ್ತು ಅದರ ಅಡಿಯಲ್ಲಿನ ನಿಯಮಗಳಲ್ಲಿ ಪ್ರತಿಪಾದಿಸಲಾದ ಶಿಸ್ತು ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ನಿಮ್ಮ ನಿರಂತರ ಟೀಕೆ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆಯನ್ನು ಪಕ್ಷವು ಗಮನಿಸಿದೆ. ಹಿಂದಿನ ಶೋಕಾಸ್ ಸೂಚನೆಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ಭರವಸೆಗಳ ಹೊರತಾಗಿಯೂ, ನೀವು ನಿಮ್ಮ ಸ್ವಂತ ಭರವಸೆಗಳನ್ನು ಉಲ್ಲಂಘಿಸುವುದನ್ನು ಮತ್ತೆ ಮುಂದುವರಿಸುತ್ತಿದ್ದೀರಿ. ಪಕ್ಷವು ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಾರದೇಕೆ ಎಂಬುದಕ್ಕೆ ಕಾರಣ ತಿಳಿಸಿ.
ಈ ಸೂಚನೆಯನ್ನು ಸ್ವೀಕರಿಸಿದ 72 ಗಂಟೆಗಳ ಒಳಗೆ ನಿಮ್ಮ ವಿವರಣೆಯು ಕೆಳಗೆ ಸಹಿ ಮಾಡಿದವರನ್ನು ತಲುಪಬೇಕು. ಗಮನಿಸಿ, ಇಲ್ಲಿ ನಿಗದಿಪಡಿಸಿದ ಸಮಯದೊಳಗೆ ನಿಮ್ಮ ವಿವರಣೆಯನ್ನು ಸ್ವೀಕರಿಸದಿದ್ದರೆ, ಕೇಂದ್ರ ಶಿಸ್ತು ಸಮಿತಿಯು ನಿಮಗೆ ಏನು ಹೇಳಲು ಇಲ್ಲ ಎಂದು ಭಾವಿಸಿ ಮುಂದಿನ ಕೊನೆಯ ಹಂತದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಶೋಕಸ್ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಯತ್ನಾಳ್ ಸಿಡಿದೆದ್ದಿದ್ದು, ಬಹಿರಂಗವಾಗಿಯೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಕಳೆದ ವರ್ಷ ಡಿಸೆಂಬರ್ ನಲ್ಲಿಯೂ ಯತ್ನಾಳ್ಗೆ ಶಿಸ್ತುಪಾಲನಾ ಸಮಿತಿ ಮೊದಲ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ಆ ನೋಟಿಸ್ ಗೆ ಯತ್ನಾಳ್ ಉತ್ತರ ಕೊಡದೇ ಖುದ್ದು ಶಿಸ್ತು ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಿದ್ದರು. ಒಂದು ರೀತಿಯಲ್ಲಿ ಯತ್ನಾಳ್ ಆ ನೋಟಿಸ್ ಕ್ಯಾರೇ ಎಂದಿರಲಿಲ್ಲ.
ಈಗ ಯತ್ನಾಳ್ ಟೀಕೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಈಗ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿದ್ದು, ಈ ನೋಟಿಸ್ನಲ್ಲಿ ಶಿಸ್ತು ಸಮಿತಿ ಖಡಕ್ ಆಗಿಯೇ ಕೆಲ ಅಂಶಗಳನ್ನು ಉಲ್ಲೇಖಿಸಿದೆ. ಇದರಿಂದ ಈ ನೋಟಿಸ್ಗೆ ಯತ್ನಾಳ್ ಶಿಸ್ತುಪಾಲನಾ ಸಮಿತಿಯ ಮುಂದೆ ಹಾಜರಾಗುತ್ತಾರೋ ಅಥವಾ ದೂರ ಉಳಿಯುತ್ತಾರೋ. ಹಾಗೊಂದು ವೇಳೆ ನೋಟೀಸ್ಗೆ ಯಾವುದೇ ಪ್ರತಿಕ್ರಿಯಿಸದಿದ್ದರೆ ಶಿಸ್ತು ಸಮಿತಿ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:53 pm, Mon, 10 February 25