- Kannada News Photo gallery Cricket photos IPL 2025: Points Table After Match 7, Lucknow Triumphs, Orange, Purple Cap Updates
IPL 2025 Points Table: ಪಂದ್ಯವನ್ನಾಡದೆ ಮತ್ತೆ ಅಗ್ರಸ್ಥಾನಕ್ಕೇರಿದ ಆರ್ಸಿಬಿ; ಉಳಿದ ತಂಡಗಳ ಸ್ಥಾನ ಹೀಗಿದೆ
IPL 2025 Points Table: ಐಪಿಎಲ್ 2025 ರ ಏಳನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಹೈದರಾಬಾದ್ ತಂಡವನ್ನು ಸೋಲಿಸಿ ಮೊದಲ ಗೆಲುವು ಸಾಧಿಸಿತು. ಇದರಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಆರ್ಸಿಬಿ ಮೊದಲ ಸ್ಥಾನದಲ್ಲಿದ್ದರೆ, ಲಕ್ನೋ ಎರಡನೇ ಸ್ಥಾನಕ್ಕೇರಿದೆ. ನಿಕೋಲಸ್ ಪೂರನ್ ಆರೆಂಜ್ ಕ್ಯಾಪ್ ಮತ್ತು ಶಾರ್ದೂಲ್ ಠಾಕೂರ್ ಪರ್ಪಲ್ ಕ್ಯಾಪ್ ಗಳಿಸಿದ್ದಾರೆ.
Updated on: Mar 28, 2025 | 10:02 AM

ಐಪಿಎಲ್ 2025 ರಲ್ಲಿ ಇದುವರೆಗೆ 7 ಪಂದ್ಯಗಳು ನಡೆದಿವೆ. ಈ ಸೀಸನ್ನ ಏಳನೇ ಪಂದ್ಯ ಮಾರ್ಚ್ 27 ರಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್ ತಂಡವನ್ನು ಮಣಿಸಿದ ಲಕ್ನೋ ಮೊದಲ ಗೆಲುವಿನ ಸಿಹಿ ಉಂಡಿದೆ. ಇದರೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿಯೂ ಭಾರಿ ಬದಲಾವಣೆಯಾಗಿದೆ.

ಲಕ್ನೋ ತಂಡವು ಹೈದರಾಬಾದ್ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸುವ ಮೂಲಕ ತನ್ನ ಮೊದಲ ಗೆಲುವು ಸಾಧಿಸಿತು. ಕೇವಲ 16.1 ಓವರ್‌ಗಳಲ್ಲಿ 191 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ ಪಾಯಿಂಟ್ ಪಟ್ಟಿಯಲ್ಲಿ ಲಾಭ ಗಳಿಸಿದರೆ, ಮತ್ತೊಂದೆಡೆ, ಈ ಹೀನಾಯ ಸೋಲಿನಿಂದಾಗಿ ಹೈದರಾಬಾದ್ ಭಾರಿ ನಷ್ಟವನ್ನು ಅನುಭವಿಸಿದೆ. ಎರಡೂ ತಂಡಗಳ ನಡುವಿನ ಪಂದ್ಯದ ನಂತರ ಪ್ಲೇಆಫ್ ರೇಸ್‌ನಲ್ಲಿ ಯಾವ ತಂಡ ಮುಂದಿದೆ ಎಂಬುದರ ವಿವರ ಹೀಗಿದೆ.

7ನೇ ಪಂದ್ಯದ ನಂತರ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಮತ್ತೆ ನಂಬರ್ 1 ಸ್ಥಾನಕ್ಕೇರಿದೆ. ಇದುವರೆಗೆ ಒಂದೇ ಒಂದು ಪಂದ್ಯ ಆಡಿರುವ ಆರ್ಸಿಬಿ, ಕೆಕೆಆರ್ ತಂಡವನ್ನು ಹೀನಾಯವಾಗಿ ಸೋಲಿಸಿ 2 ಅಂಕಗಳನ್ನು ಗಳಿಸಿತ್ತು. ಕೇವಲ 16.2 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿದ್ದರಿಂದ, ರಜತ್ ಪಡೆ 2 ಅಂಕಗಳೊಂದಿಗೆ +2.137 ನೆಟ್ ರನ್ ರೆಟ್ ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿದ್ದ ಲಕ್ನೋ ತಂಡ ಕಳಪೆ ಆರಂಭ ಪಡೆದಿತ್ತು. ಆದರೆ ಹೈದರಾಬಾದ್ ವಿರುದ್ಧದ ಭಾರಿ ಗೆಲುವಿನೊಂದಿಗೆ 2 ಪಂದ್ಯಗಳಲ್ಲಿ 2 ಅಂಕಗಳೊಂದಿಗೆ ನೇರವಾಗಿ 2 ನೇ ಸ್ಥಾನಕ್ಕೆ ಏರಿದೆ. ಪಂದ್ಯವನ್ನು ಇನ್ನೂ 23 ಎಸೆತಗಳು ಬಾಕಿ ಇರುವಾಗಲೇ ಮುಗಿಸಿದ್ದರಿಂದ ಲಕ್ನೋ ತಂಡದ ನೆಟ್ ರನ್ ರೇಟ್ (+0.963) ಗಮನಾರ್ಹವಾಗಿ ಸುಧಾರಿಸಿದೆ.

ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ನಂಬರ್ 1 ಮತ್ತು ಲಕ್ನೋ ನಂಬರ್ 2 ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ಈಗ ಮೂರನೇ ಸ್ಥಾನದಲ್ಲಿದೆ. ಒಂದು ಪಂದ್ಯವನ್ನು ಆಡಿ ಗೆದ್ದಿರುವ ಪಂಜಾಬ್ ತಂಡದ ನೆಟ್ ರನ್ ರೇಟ್ +0.550 ಆಗಿದೆ.

ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಒಂದು ಗೆಲುವಿನೊಂದಿಗೆ 2 ಅಂಕಗಳು ಮತ್ತು +0.493 ನೆಟ್ ರನ್ ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಎರಡು ಅಂಕ ಮತ್ತು +0.371 ನೆಟ್ ರನ್ ರೇಟ್ ಹೊಂದಿದೆ.

ರಾಜಸ್ಥಾನ ರಾಯಲ್ಸ್ ತಂಡವನ್ನು ಅವರ ತವರು ನೆಲದಲ್ಲಿ 44 ರನ್‌ಗಳಿಂದ ಸೋಲಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ 2 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಆದರೆ ಎರಡನೇ ಪಂದ್ಯದಲ್ಲಿ ಲಕ್ನೋ ವಿರುದ್ಧದ ಸೋಲಿನ ನಂತರ ಅದು 5 ಸ್ಥಾನಗಳನ್ನು ಕಳೆದುಕೊಂಡು ಆರನೇ ಸ್ಥಾನಕ್ಕೆ ಕುಸಿದಿದೆ. ಹೈದರಾಬಾದ್ 2 ಪಂದ್ಯಗಳಲ್ಲಿ 2 ಅಂಕ ಮತ್ತು -0.128 ನೆಟ್ ರನ್ ರೇಟ್ ಹೊಂದಿದೆ.

ಸನ್‌ರೈಸರ್ಸ್ ಹೈದರಾಬಾದ್ ಆರನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಏಳನೇ ಸ್ಥಾನದಲ್ಲಿದೆ. ಕೆಕೆಆರ್ 2 ಅಂಕಗಳನ್ನು ಹೊಂದಿದ್ದು, ಅದರ ನೆಟ್ ರನ್ ರೇಟ್ -0.493 ಆಗಿದೆ. ಏತನ್ಮಧ್ಯೆ, ಮುಂಬೈ ಇಂಡಿಯನ್ಸ್ ತನ್ನ ಗೆಲುವಿನ ಖಾತೆ ತೆರೆಯಲು ಕಾಯುತ್ತಿದ್ದು, ಪ್ರಸ್ತುತ 8 ನೇ ಸ್ಥಾನದಲ್ಲಿದೆ. ಇದಲ್ಲದೆ, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ಇನ್ನೂ ತಮ್ಮ ಖಾತೆಯನ್ನು ತೆರೆದಿಲ್ಲ. ಗುಜರಾತ್ 9 ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ಕೊನೆಯ ಸ್ಥಾನದಲ್ಲಿದೆ.

ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತಿದ್ದು, ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಪ್ರಸ್ತುತ, ಲಕ್ನೋ ಸೂಪರ್ ಜೈಂಟ್ಸ್‌ನ ಶಾರ್ದೂಲ್ ಠಾಕೂರ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ (6) ಮತ್ತು ಪರ್ಪಲ್ ಕ್ಯಾಪ್ ಹೊಂದಿದ್ದಾರೆ

ಮತ್ತೊಂದೆಡೆ, ಲಕ್ನೋ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹೈದರಾಬಾದ್ ವಿರುದ್ಧ 26 ಎಸೆತಗಳಲ್ಲಿ 70 ರನ್ ಗಳಿಸಿದ್ದ ಅವರು ಈಗ 2 ಪಂದ್ಯಗಳಲ್ಲಿ 145 ರನ್ ಗಳಿಸಿದ್ದಾರೆ. ಪಂದ್ಯದ ನಂತರ, ಅವರಿಗೆ ಆರೆಂಜ್ ಕ್ಯಾಪ್ ನೀಡಲಾಯಿತು.



















