ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧದ ದೂರನ್ನು ದಿನೇಶ್ ಕಲ್ಲಹಳ್ಳಿ ಹಿಂಪಡೆದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಟಿವಿಯಲ್ಲಿ ಬಂದಿರುವುದು ವಾಪಸ್ ತೆಗೆದುಕೊಳ್ಳಲು ಆಗುತ್ತಾ? ಎಂದು ಜಿಲ್ಲೆಯ ಮಧುಗಿರಿಯಲ್ಲಿ ಪ್ರಶ್ನಿಸಿದ್ದಾರೆ. ದೂರು ವಾಪಸ್ ಪಡೆದ ವಿಚಾರವನ್ನು ಪ್ರಶ್ನಿಸಿದ ಮಾಧ್ಯಮ ಸಿಬ್ಬಂದಿಗಳಿಗೆ ಮರು ಪ್ರಶ್ನೆ ಹಾಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ದೂರು ವಾಪಸ್ ತೆಗೆದುಕೊಂಡಿದ್ದಾರೆ. ಆದರೆ ಟಿವಿಯಲ್ಲಿ ಪ್ರಸಾರವಾಗಿರುವುದನ್ನು ಹಿಂಪಡೆಯಲು ಆಗುತ್ತದೆಯೇ? ಎಂದು ಸವಾಲೆಸೆದಿದ್ದಾರೆ.
‘ಈಗಾಗಲೇ ದೃಶ್ಯ ಮಾಧ್ಯಮಗಳಲ್ಲಿ ಸಿಡಿ ಹಗರಣದ ಕುರಿತು ವಿಡಿಯೋ ಪ್ರಸಾರವಾಗಿದೆ. ಈಗ ದೂರು ಹಿಂಪಡೆದ ಮಾತ್ರಕ್ಕೆ ಹರಾಜಾದ ಮರ್ಯಾದೆ ಮರಳಿ ಬರುವುದೇ’ ಎಂಬ ಅರ್ಥದಲ್ಲಿ ಮಾಜಿ ಮುಖ್ಯಮಂತ್ರಿ ಕುಹಕವಾಡಿದ್ದಾರೆ.
ಬಿಜೆಪಿ ಸರ್ಕಾರದ ಹಲವು ಸಚಿವರು ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಅವರಿಗೆ ತಮ್ಮ ಕುರಿತು ಸಿಡಿ ಇದೆ ಎಂಬ ಭಯ ಇದೆ. ಇಂಥವರು ಮಂತ್ರಿ ಪದವಿ ಏರಬೇಕೆ ಎಂದು ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ವಿರುದ್ಧದ ದೂರು ಹಿಂಪಡೆದ ಘಟನೆ ಕುರಿತು ವ್ಯಂಗ್ಯವಾಡಿದ್ದಾರೆ, ‘ಬಿಜೆಪಿಗರು ನಾವು ರಾಮನ ಭಕ್ತರು ಎನ್ನುತ್ತ ಮಾನಗೇಡಿ ಕೆಲಸ ಮಾಡೋರು ಅಸೆಂಬ್ಲಿಯಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಬಿಜೆಪಿಗೆ ಬದಲಾವಣೆ ಇಷ್ಟವಿಲ್ಲ’
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಬಗ್ಗೆ ಬದ್ದತೆ ಗೌರವ ಇದೆ. ಆದರೆ, ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಮತ್ತು ಬದ್ದತೆ ಇಲ್ಲ. ಬಡವರು ಬಡವರಾಗಿಯೇ ಇರುವುದು, ಶ್ರೀಮಂತರು ಶ್ರೀಮಂತರಾಗಿಯೇ ಇರುವುದನ್ನು ಬಿಜೆಪಿ ಇಷ್ಟಪಡುತ್ತದೆ. ಬದಲಾವಣೆ ಅವರಿಗೆ ಇಷ್ಟ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಏನ್ಲಾ ಇಷ್ಟು ಎತ್ತರಕ್ಕೆ ಬೆಳೆದು ಬಿಟ್ಟೆ’ ಎಂದು ಹಳ್ಳಿಗಳಲ್ಲಿ ಹೇಳುತ್ತಾರೆ. ಕೆಲವು ವರ್ಗದವರು ಬೆಳೆಯೋದು ಕೆಲವರಿಗೆ ಇಷ್ಟ ಇಲ್ಲ. ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡುವ ಮಾತನಾಡುತ್ತಾರೆ. ದುರದೃಷ್ಟವಶಾತ್ ಸಂವಿಧಾನಕ್ಕೆ ತದ್ವಿರುದ್ದವಾದವರೇ ಎರಡೂ ಕಡೆ ಅಧಿಕಾರದಲ್ಲಿ ಇದ್ದಾರೆ. ಯಡಿಯೂರಪ್ಪ ಜನರಿಂದ ಲೂಟಿ ಮಾಡಿರುವ ದುಡ್ಡಿನಲ್ಲಿ ಹಿಂಬಾಗಿಲಿನಿಂದ ಮುಖ್ಯಮಂತ್ರಿ ಆಗಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಖಜಾನೆ ತುಂಬಿ ತುಳುಕುತ್ತಿತ್ತು. ಆದರೆ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ನಷ್ಟವಾಗುತ್ತಿದೆ. ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಈಗ ನನ್ನ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಎನ್ನುತ್ತಾರೆ. ನನ್ನ ಅಧಿಕಾರಾವಧಿಯಲ್ಲಿ ಸಾಲ ಮನ್ನಾ ಮಾಡಿದ್ದೆ. ಆದರೆ,ಈಗ ಯಡಿಯೂರಪ್ಪನವರಿಗೆ ಸಾಲ ಮನ್ನಾ ಮಾಡಲು ಏನಾಗಿದೆ? ಎಂದು ಅವರು ಸವಾಲೆಸೆದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ.ವಿಜಯೇಂದ್ರರ ಕಚೇರಿಯಲ್ಲಿ ಹೊಟೆಲ್ನಲ್ಲಿ ತಿಂಡಿ ದರ ಹಾಕಿದ ಹಾಗೆ ಅಧಿಕಾರಿಗಳ ವರ್ಗಾವಣೆಯ ದರದ ಬೋರ್ಡ್ ಹಾಕಿದ್ದಾರೆ. ನಾನು ಸಿಎಂ ಆಗಿದ್ದಾಗ ನನಗೆ ಯಾರಾದರೂ ದುಡ್ಡು ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: Ramesh Jarkiholi CD Controversy: ರಮೇಶ್ ಜಾರಕಿಹೊಳಿ ವಿರುದ್ಧದ ದೂರು ಹಿಂಪಡೆಯಲು ದಿನೇಶ್ ಕಲ್ಲಹಳ್ಳಿ ನಿರ್ಧಾರ
Ramesh Jarkiholi CD Controversy: ಸಂತ್ರಸ್ತೆಗೆ ಸಾಮಾಜಿಕ ಮಾಧ್ಯಮ, ಮಾಧ್ಯಮಗಳಿಂದ ಅನ್ಯಾಯ ಆಗ್ತಿದೆ; ದಿನೇಶ್ ಕಲ್ಲಹಳ್ಳಿ ಪರ ವಕೀಲ
Published On - 4:29 pm, Sun, 7 March 21