Ramesh Jarkiholi CD Controversy: ರಮೇಶ್ ಜಾರಕಿಹೊಳಿ ವಿರುದ್ಧದ ದೂರು ಹಿಂಪಡೆಯಲು ದಿನೇಶ್ ಕಲ್ಲಹಳ್ಳಿ ನಿರ್ಧಾರ

Ramesh Jarkiholi CD Controversy: ರಮೇಶ್ ಜಾರಕಿಹೊಳಿ ವಿರುದ್ದ ನೀಡಿದ್ದ ದೂರನ್ನು ಅಚ್ಚರಿಯ ಬೆಳವಣಿಗೆಯಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಾಸ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಉಲ್ಟಾ ಹೊಡೆದಿದೆ.

Ramesh Jarkiholi CD Controversy: ರಮೇಶ್ ಜಾರಕಿಹೊಳಿ ವಿರುದ್ಧದ ದೂರು ಹಿಂಪಡೆಯಲು ದಿನೇಶ್ ಕಲ್ಲಹಳ್ಳಿ ನಿರ್ಧಾರ
ದಿನೇಶ್ ಕಲ್ಲಹಳ್ಳಿ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 07, 2021 | 5:26 PM

ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ದ ನೀಡಿದ್ದ ದೂರನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಾಸ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮಾರ್ಚ್ 2 ರಂದು ನೀಡಿದ್ದ ದೂರನ್ನು ದಿನೇಶ್ ಕಲ್ಲಹಳ್ಳಿ ಹಿಂಪಡೆಯುವ ಮೂಲಕ ಪ್ರಕರಣ ಉಲ್ಟಾ ಹೊಡೆದಿದೆ. ವಕೀಲ ಕುಮಾರ್ ಪಾಟೀಲ್ ಮೂಲಕ ದೂರು ಹಿಂಪಡೆಯುವ ಪತ್ರವನ್ನು ದಿನೇಶ್ ಕಲ್ಲಹಳ್ಳಿ ರವಾನಿಸಿದ್ದಾರೆ. ‘ದಿನೇಶ್ ಕಲ್ಲಹಳ್ಳಿ ಈಗೇಕೆ ದೂರು ಹಿಂಪಡೆಯಲು ನಿರ್ಧರಿಸಿದ್ದಾರೆ? ಅವರೇ ಏಕೆ ಪೊಲೀಸ್ ಠಾಣೆಗೆ ಹೋಗುತ್ತಿಲ್ಲ’ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಕೀಲರು, ‘ಅವರು ಕೊಟ್ಟ ದೂರಿನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದವು. ಹೀಗಾಗಿ ಹಿಂಪಡೆಯುತ್ತಿದ್ದೇವೆ. ಸಂತ್ರಸ್ತೆಗೆ ಸಾಮಾಜಿಕ ಮಾಧ್ಯಮ, ಮಾಧ್ಯಮಗಳಿಂದ ಅನ್ಯಾಯ ಆಗ್ತಿದೆ. ಅಂಗಿ ಮೇಲೆ ಮುಳ್ಳುಬಿದ್ದರೂ, ಮುಳ್ಳಿನ ಮೇಲೆ ಅಂಗಿ ಬಿದ್ದರೂ ಹರಿಯೋದು ಅಂಗಿಯೇ. ದಿನೇಶ್ ಕಲ್ಲಹಳ್ಳಿ ಅವರ ಸೂಚನೆಯಂತೆ ದೂರು ಹಿಂಪಡೆಯುತ್ತಿದ್ದೇನೆ’ ಎಂದು ವಕೀಲ ಕುಮಾರ್ ಪಾಟೀಲ್ ಪ್ರತಿಕ್ರಿಯಿಸಿದರು.

‘ದಿನೇಶ್ ಕಲ್ಲಹಳ್ಳಿ ದೂರು ನೀಡಿರುವುದು ನಿಜ. ಆದರೆ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ದೂರು ಹಿಂಪಡೆಯಲು ಅವಕಾಶವಿದೆ. ದಿನೇಶ್ ಕಲ್ಲಹಳ್ಳಿ ಅವರು ದೂರು ಹಿಂಪಡೆಯುವಂತೆ ನನಗೆ ಪತ್ರ ಕೊಟ್ಟಿದ್ದಾರೆ. ಪೊಲೀಸರು ಏನು ನಿರ್ಧಾರ ಮಾಡ್ತಾರೆ ನೋಡೋಣ. ಬಹುಶಃ ದಿನೇಶ್ ಕಲ್ಲಹಳ್ಳಿ ಅವರಿಗೆ ಹುಷಾರು ಇಲ್ಲದೆ ಇರಬಹುದು. ಹೀಗಾಗಿ ಅವರು ಬಾರದಿರಬಹುದು. ನಾನು ಪೊಲೀಸ್ ಠಾಣೆಗೆ ಹೋಗ್ತಿದ್ದೀನಿ’ ಎಂದು ದಿನೇಶ್ ಕಲ್ಲಹಳ್ಳಿ ಪರ ವಕೀಲರು ಹೇಳಿದರು.

ದಿನೇಶ್ ಕಲ್ಲಹಳ್ಳಿ ಮೇಲೆ ಒತ್ತಡವಿಲ್ಲ ನನ್ನ ಕಕ್ಷಿದಾರ ದಿನೇಶ್ ಕಲ್ಲಹಳ್ಳಿ ಮೇಲೆ ಯಾವುದೇ ಒತ್ತಡವಿಲ್ಲ. ದೂರಿನಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿವೆ, ಹೀಗಾಗಿ ಹಿಂದಕ್ಕೆ ಪಡೆಯುತ್ತಿದ್ದೇವೆ. ಅವರು ಭಯಪಟ್ಟಿದ್ದಾರೆ ಎನ್ನೋದು ಸುಳ್ಳು. ಅವರೊಬ್ಬ ಸಾಮಾಜಿಕ ಹೋರಾಟ ಎಂದು ದಿನೇಶ್ ಕಲ್ಲಹಳ್ಳಿ ಪರ ವಕೀಲ ಕುಮಾರ್ ಪಾಟೀಲ್ ಟಿವಿ9ಗೆ ಪ್ರತಿಕ್ರಿಯಿಸಿದರು.

ದೂರು ಹಿಂಪಡೆಯಲು ಕುಮಾರಸ್ವಾಮಿ ಕಾರಣ: ದಿನೇಶ್ ಕಲ್ಲಹಳ್ಳಿ ಈ ಪ್ರಕರಣದಲ್ಲಿ ಮಾಹಿತಿ ಕೊಡೋರೋನ್ನೇ ಟಾರ್ಗೆಟ್ ಮಾಡಿರೋದು. ಕುಮಾರಣ್ಣ ಹೇಳಿಕೆಯಿಂದ ನನಗೆ ನೋವಾಗಿದೆ. ಹೀಗಾಗಿ ದೂರು ಹಿಂಪಡೆಯುತ್ತಿದ್ದೇನೆ ಎಂದು ದಿನೇಶ್ ಹೇಳಿದ್ದಾರೆ.

ಕುಮಾರಸ್ವಾಮಿ ಏನು ಹೇಳಿದ್ದರು? ‘ಈ ಪ್ರಕರಣದಲ್ಲಿ ₹ 5 ಕೋಟಿ ಪರಭಾರೆ ಆಗಿದೆ ಅಂತ ನನಗೆ ಮಾಹಿತಿಯಿದೆ. ಈ ರೀತಿಯ ಬ್ಲಾಕ್​ಮೇಲ್ ಮಾಡುವ ವ್ಯಕ್ತಿಗಳನ್ನು ಸರ್ಕಾರ ಬಂಧಿಸಬೇಕು. ಆ ಮಾಹಿತಿಯನ್ನು ಸರ್ಕಾರವೇ ತಗೊಂಡು ಜನರ ಮುಂದೆ ಇಟ್ಟುಬಿಡಲಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದರು.

4 ಗಂಟೆ ವಿಚಾರಣೆ ಎದುರಿಸಿದ್ದ ದಿನೇಶ್ ಕಲ್ಲಹಳ್ಳಿ ರಮೇಶ್ ಜಾರಕಿಹೊಳಿ ಕಾಮಕಾಂಡಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನ ಬಗ್ಗೆ ಸತತ 4 ಗಂಟೆಗಳ ಕಾಲ ದಿನೇಶ್ ಕಲ್ಲಹಳ್ಳಿ ಪೊಲೀಸರ ವಿಚಾರಣೆ ಎದುರಿಸಿದ್ದರು.

‘ತನಿಖೆಗೆ ಪೂರಕವಾಗಿ ಪೊಲೀಸರಿಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೇನೆ. ತನಿಖೆ ನಡೆಯುತ್ತಿರುವುದರಿಂದ ನಾನು ಏನನ್ನೂ ಹೇಳಲು ಬರುವುದಿಲ್ಲ. ಮುಚ್ಚಿದ ಲಕೋಟೆಯಲ್ಲಿ ನನಗೆ ಕೊಟ್ಟ ಸಿಡಿಯನ್ನೇ ಪೊಲೀಸರಿಗೆ ಕೊಟ್ಟಿದ್ದೇನೆ. ಅವತ್ತು ಕೊಟ್ಟ ದೂರಿಗೆ ನಾನು ಬದ್ಧನಾಗಿದ್ದೇನೆ. ನನ್ನ ದೂರಿನ ಬಗ್ಗೆ ಮೊದಲ ದಿನವೇ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದೇನೆ. ಈ ಸಿಡಿಯ ಸತ್ಯಾಸತ್ಯತೆ ಬಯಲಿಗೆಳೆಯಿರಿ ಅಂತ ಪೊಲೀಸರಿಗೆ ಹೇಳಿದ್ದೇನೆ’ ಎಂದು ಈಚೆಗೆ ದಿನೇಶ್ ಕಲ್ಲಹಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

‘ಆ ವಿಡಿಯೊದಲ್ಲಿ ಇರುವ ಮಹಿಳೆ ನನಗೆ ಪರಿಚಯವಿಲ್ಲ. ಆಕೆಯ ಕುಟುಂಬಸ್ಥರು ನನ್ನನ್ನು ಭೇಟಿ ಮಾಡಿದ್ದರು. ಅವರ ಕುಟುಂಬದಲ್ಲಿ ನನಗೆ ಯಾರು ಪರಿಚಯ ಅಂತ ಬಹಿರಂಗಪಡಿಸಲು ಆಗಲ್ಲ. ಪೊಲೀಸರು ಎಫ್​ಐಆರ್ ಮಾಡ್ತಾರಾ ಇಲ್ವಾ ಅಂತ ಗೊತ್ತಿಲ್ಲ, ತನಿಖೆ ಮಾಡ್ತೀವಿ ಅಂತ ಹೇಳಿದ್ದಾರೆ. ಕೆಲವು ವಿಷಯಗಳನ್ನು ಮಾಧ್ಯಮಗಳ ಮೂಲಕ ಹೇಳಲು ಆಗುವುದಿಲ್ಲ. ನನಗೆ ಗೊತ್ತಿರುವುದನ್ನು ಪೊಲೀಸರಿಗೆ ಹೇಳಿದ್ದೇನೆ ಎಂದು ಕಬ್ಬನ್​ ಪಾರ್ಕ್​ ಠಾಣೆ ಪೊಲೀಸರಿಂದ ಸುದೀರ್ಘ ವಿಚಾರಣೆಯ ನಂತರ ಮಾಧ್ಯಮಗಳಿಗೆ ದಿನೇಶ್ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: 6 ಮಂದಿ ಸಚಿವರು ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆಂದು ನನಗೆ ಗೊತ್ತಿಲ್ಲ: ದಿನೇಶ್ ಕಲ್ಲಹಳ್ಳಿ

ಇದನ್ನೂ ಓದಿ: ಸಿಡಿ ಇಟ್ಕೊಂಡು ಬ್ಲ್ಯಾಕ್​ಮೇಲ್​ ಮಾಡೋರನ್ನು ಬಂಧಿಸಲಿ, ನಾನು ತನಿಖೆಗೆ ಸಹಕಾರ ಕೊಡ್ತೀನಿ: ದಿನೇಶ್ ಕಲ್ಲಹಳ್ಳಿ

Published On - 2:51 pm, Sun, 7 March 21