ಬೆಂಗಳೂರು, (ಸೆಪ್ಟೆಂಬರ್ 03): ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಚೇತರಿಸಿಕೊಂಡಿದ್ದು, ಇದೀಗ ಅವರನ್ನು ಇಂದು (ಸೆಪ್ಟೆಂಬರ್ 03) ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ತೀವ್ರ ಜ್ವರ ಹಾಗೂ ಮೈಲ್ಡ್ ಸ್ಟ್ರೋಕ್ ಆಟ್ಯಾಕ್ ಆಗಿದ್ದರಿಂದ ಆಗಸ್ಟ್ 30 ನಸುಕಿನ ಜಾವ ಬೆಂಗಳೂರಿನ ಜನಯನಗರದಲ್ಲಿ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಎರಡು ದಿನಗಳ ಕಾಲ ಕುಮಾರಸ್ವಾಮಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಅವರನ್ನು ಶುಕ್ರವಾರ ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಕುಮಾರಸ್ವಾಮಿ ಗುಣಮುಖರಾಗಿದ್ದರಿಂದ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನು ಡಿಸ್ಚಾರ್ಜ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಭಗವಂತನ ದಯೆ ಹಾಗೂ ತಂದೆ, ತಾಯಿ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ. ಕಳೆದ 5 ದಿನಗಳಿಂದ ಸ್ನೇಹಿತರಲ್ಲಿ ಭಯದ ವಾತಾವರಣ ಇತ್ತು. ನಿಖರವಾದ ಆರೋಗ್ಯದ ಮಾಹಿತಿಯನ್ನೂ ನೀವು ಕೊಟ್ಟಿದ್ದೀರಿ. ತಂದೆ-ತಾಯಿ ಆಶೀರ್ವಾದದಿಂದ ಪುನರ್ಜನ್ಮ ಸಿಕ್ಕಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.
ರಾಜಕೀಯ ಹೊರತುಪಡಿಸಿ ಎರಡು ಮೂರು ವಿಚಾರ ಮಾತನಾಡುತ್ತೇನೆ ಎಂದು ತಮ್ಮ ಆರೋಗ್ಯದ ಬಗ್ಗೆ ವಿವರಿಸಿದ ಕುಮಾರಸ್ವಾಮಿ, ಆಸ್ಪತ್ರೆಗೆ ದಾಖಲಾಗುವ ಮೊದಲು ಫ್ಯಾಮಿಲಿ ವೈದ್ಯ ಮಂಜುನಾಥಗೆ ಫೋನ್ ಮಾಡಿದ್ದೆ. ನಂತರ ಅಫೋಲೋ ಆಸ್ಪತ್ರೆ ತಜ್ಞ ವೈದ್ಯ ಯತೀಂದ್ರ, ಸತೀಶ್ ಸಲಹೆಯಂತೆ ಬುಧವಾರ ಬೆಳಗ್ಗೆ 3:30ರ ಸುಮಾರಿಗೆ ಆಸ್ಪತ್ರೆಗೆ ದಾಖಲಾದೆ. ನನ್ನ ಅದೃಷ್ಟ ನುರಿತ ತಜ್ಞ ವೈದ್ಯರು ಬೆಂಗಳೂರಿನಲ್ಲೇ ಇದ್ರು ತಿಂಗಳಿನಲ್ಲಿ 15 ದಿನ ಅವರು ಹೊರ ದೇಶದಲ್ಲೇ ಇರುತ್ತಿದ್ದರು. ನಿರ್ಲಕ್ಷ್ಯ ಮಾಡದೆ ಕ್ಷಣಕ್ಷಣಕ್ಕೂ ನನ್ನ ಆರೋಗ್ಯ ಸ್ಥಿತಿ ಚೆನ್ನಾಗಿ ನೋಡಿಕೊಂಡರು. ಕೇವಲ 1 ಗಂಟೆಯಲ್ಲೇ ನನ್ನನ್ನ ಮೊದಲ ಸ್ಥಿತಿಗೆ ತಂದ್ರು ಎಂದು ವೈದ್ಯರ ಚಿಕಿತ್ಸೆ ಬಗ್ಗೆ ವಿವರಿಸಿದರು.
ಪಾರ್ಶ್ವವಾಯು ಆದಾಗ ಯಾವಾಗ ರೀತಿ ಸ್ಪಂದಿಸಬೇಕು ಎಂದು ಈಗಷ್ಟೇ ವೈದ್ಯರು ಹೇಳಿದ್ದಾರೆ. ಇದನ್ನ ನಿರ್ಲಕ್ಷ್ಯ ಮಾಡಬೇಡಿ. ಇದು ಗೋಲ್ಡನ್ ಟೈಂ. ಜೀವನ ಪರ್ಯಂತ ಕಾಡುವಂತೆ ಮಾಡಿಕೊಳ್ಳುವುದು ಬೇಡ. ಇದು ಮೂರನೇ ಜನ್ಮವನ್ನ ನನಗೆ ಭಗವಂತ ಕೊಟ್ಟಿದ್ದಾನೆ. 64 ವರ್ಷದಲ್ಲಿ ಮೂರು ಬಾರಿ ಮರುಜನ್ಮ ಪಡೆದಿದ್ದೇನೆ. ವೈದ್ಯಕೀಯ ಹಾಗೂ ಭಗವಂತನ ದಯೆಯಿಂದ ಇಳಿದಿದ್ದೇನೆ. ನಾನು ನಿರ್ಲಕ್ಷ್ಯ ಮಾಡಿದಿದ್ದರೆ ನಿಮ್ಮೊಂದಿಗೆ ಈಗ ಸಹಜವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಎರಡನೇ ಬಾರಿ ನನಗೆ ಪಾರ್ಶ್ವವಾಯು ಆಗಿದೆ. ಎರಡನೇ ಬಾರಿ ಸಿಎಂ ಆದಾಗ ವಾಲ್ಮೀಕಿ ಜಯಂತಿಯಂದು ಟಿವಿ ವಾಹಿನಿಯೊಂದರಲ್ಲಿ ಕತ್ತಲತ್ತ ತೆರಳಿದ ಕರ್ನಾಟಕ ಎಂದು ಒಂದು ಕಾರ್ಯಕ್ರಮದ ಪ್ರೋಮೊ ಬಂದಿತ್ತು. ಅದನ್ನು ನೋಡಿ ಆಗ ಆಘಾತಕ್ಕೆ ಒಳಗಾಗಿ ಎಡಭಾಗ ಸ್ವಾಧೀನ ಕಳೆದುಕೊಂಡಿದ್ದೆ. ಅವತ್ತು ವೈದ್ಯರು ನೋಡಿದಾಗ ಪಾರಾದೆ. ಆದ್ರೆ, ಈ ಬಾರಿ ಹೆಚ್ಚಾಗಿ ಡ್ಯಾಮೇಜ್ ಆಗಿದೆ. ಭಗವಂತನ ದಯೆಯಿಂದ ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ. ಪಾರ್ಶ್ವವಾಯುವನ್ನ ಒಂದು ಕ್ಷಣವನ್ನೂ ವ್ಯರ್ಥ ಮಾಡಬೇಡಿ. ಕುಟುಂಬದಲ್ಲಿ ಯಾರಿಗಾದ್ರೂ ಬಂದಾಗ ಕೂಡಲೇ ಚಿಕಿತ್ಸೆ ಕೊಡಿಸಿ. ಹಣದ ಬಗ್ಗೆ ಯೋಚಿಸಬೇಡಿ, ಜೀವ ಉಳಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ನಾನು ನಿರ್ಲಕ್ಷ್ಯ ಮಾಡಿದ್ರೆ ಶಾಶ್ವತವಾಗಿ ಬೆಡ್ ಮೇಲೆಯೇ ಇರಬೇಕಾಗಿತ್ತು. ನಾಲ್ಕು ಜನಕ್ಕೆ ಸಹಾಯ ಮಾಡಿದ್ದಕ್ಕೆ ಭಗವಂತ ಉಳಿಸಿದ್ದಾರೆ. ಯಾರೂ ಸಹ ಪಾರ್ಶ್ವವಾಯುವನ್ನ ನಿರ್ಲಕ್ಷಿಸಬೇಡಿ. ಗೋಲ್ಡನ್ ಪೀರಿಯಡ್ ಅವಧಿಯನ್ನ ಬಳಕೆ ಮಾಡಿಕೊಳ್ಳಿ ಹೇಳಿದರು.
Published On - 11:47 am, Sun, 3 September 23