ಸುದೀಪ್ ಬರ್ತ್ಡೇ ಪಾರ್ಟಿಯಲ್ಲಿ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ರಾ ಡಿಕೆ ಶಿವಕುಮಾರ್? ಬಿಜೆಪಿ ನಾಯಕರೊಂದಿಗಿನ ಫೋಟೋ ವೈರಲ್
ಈಗಾಗಲೇ ಆಪರೇಷನ್ ಹಸ್ತದ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪಕ್ಷ ಬಿಟ್ಟು ಹೋಗಿರುವ ಘಟಾನುಘಟಿ ನಾಯಕರನ್ನು ಮತ್ತೆ ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈಹಾಕಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಕಿಚ್ಚ ಸುದೀಪ್ ಬರ್ತ್ಡೇ ಪಾರ್ಟಿಯಲ್ಲಿ ಡಿಕೆ ಶಿವಕುಮಾರ್ ಆಪರೇಷನ್ ಹಸ್ತಕ್ಕೆ ಕೈಹಾಕಿದ್ರಾ? ಹೀಗೊಂದು ಅನುಮಾನಗಳಿಗೆ ಫೋಟೋಗಳು ಎಡೆಮಾಡಿಕೊಟ್ಟಿವೆ.
ಬೆಂಗಳೂರು, (ಸೆಪ್ಟೆಂಬರ್ 03): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಅರ್ಧ ಶತಕ ಪೂರೈಸಿದ್ದಾರೆ. ಮೊನ್ನೇ (ಸೆಪ್ಟೆಂಬರ್ 1) ರಾತ್ರಿಯಿಂದಲೇ ಸುದೀಪ್ ಅವರ 50ನೇ ವರ್ಷದ ಜನ್ಮದಿನದವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಅಭಿಮಾನಿಗಳ ಆಸೆಯಂತೆ ಈ ಬಾರಿ ಬಹಳ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕಿಚ್ಚ, ಇದೇ ಖುಷಿಯಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ನಿನ್ನೆ(ಸೆಪ್ಟೆಂಬರ್ 02) ರಾತ್ರಿ ಭರ್ಜರಿ ಪಾರ್ಟಿ ಸಹ ಕೊಟ್ಟಿದ್ದಾರೆ. ಈ ಬರ್ತಡೇ ಪಾರ್ಟಿಯಲ್ಲಿ (Birthday Party) ಸಾಕಷ್ಟು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಇನ್ನು ಈ ಪಾರ್ಟಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಹಾಗೂ ಬಿಜೆಪಿ ನಾಯಕರಾದ ಬಿಸಿ ಪಾಟೀಲ್, ರಾಜುಗೌಡ ಒಟ್ಟಿಗೆ ಕಾಣಿಸಿಕೊಂಡಿದ್ದು, ಮೂವರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಇದೀಗ ರಾಜ್ಯರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಹೌದು….ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದ ಬರ್ತಡೇ ಪಾರ್ಟಿಯಲ್ಲಿ ಈ ಮೂವರು ನಾಯಕರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಬಿಸಿ ಪಾಟೀಲ್ ಹೆಗಲ ಮೇಲೆ ಕೈ ಹಾಕಿ ಇಬ್ಬರ ಜತೆ ತುಂಬಾ ಆತ್ಮೀಯವಾಗಿ ಮಾತನಾಡಿದ್ದಾರೆ. ಇದರೊಂದಿಗೆ ಕಿಚ್ಚನ ಪಾರ್ಟಿಯಲ್ಲೂ ಡಿಕೆ ಶಿವಕುಮಾರ್ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ರಾ ಎನ್ನುವ ಚರ್ಚೆಗಳು ಶುರುವಾಗಿವೆ.
ಈಗಾಗಲೇ ಕಾಂಗ್ರೆಸ್ ಆಪರೇಷನ್ ಹಸ್ತ ಆರಂಭಿಸಿದ್ದು, ಸದ್ದಿಲ್ಲದೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಗಾಳ ಹಾಕುತ್ತಿದೆ. ಅದರಲ್ಲೂ ಡಿಕೆ ಶಿವಕುಮಾರ್ ಆಪರೇಷನ್ ಹಸ್ತ ನೇತೃತ್ವವಹಿಸಿಕೊಂಡಿದ್ದು, ಈಗಾಗಲೇ ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಸೇರಿದಂತೆ ಇತರೆ ನಾಯಕರಿನ್ನು ಕಾಂಗ್ರೆಸ್ಗೆ ಸೆಳೆಯುವ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಇದೀಗ ಸುದೀಪ್ ಬರ್ತ್ಡೇ ಪಾರ್ಟಿಯಲ್ಲೂ ಸಹ ಬಿಜೆಪಿ ನಾಯಕರ ಜೊತೆ ಗುಪ್ತ್ ಗುಪ್ತ್ ಮಾತುಕತೆ ನಡೆಸಿದ್ದು, ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಸ್ಪಷ್ಟನೆ ನೀಡಿದ ರಾಜೂಗೌಡ
ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜುಗೌಡ, ನಾನು ಆಪರೇಷನ್ ಆಗುವುದಕ್ಕೆ ನನಗೆ ಕ್ಯಾನ್ಸರ್ ಆಗಿಲ್ಲ, ನನಗೆ ಗಡ್ಡೆಯೂ ಆಗಿಲ್ಲ. ನಿನ್ನೆ ಸ್ಯಾಂಡಲ್ವುಡ್ ನಟ ಸುದೀಪ್ ಹುಟ್ಟುಹಬ್ಬ ಇತ್ತು. ಹೋಟೆಲ್‌ನಲ್ಲಿ ನಡೆದ ಪಾರ್ಟಿಗೆ ಬಿ.ಸಿ.ಪಾಟೀಲ್, ಡಿಕೆ ಶಿವಕುಮಾರ್ ಸಹ ಬಂದಿದ್ರು. ಪಾರ್ಟಿಯಲ್ಲಿ ಫಿಲ್ಮ್ ಪ್ರೊಡ್ಯೂಸರ್, ನಟರು ಕೂಡ ಇದ್ದರು. ಆ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಿಸಲ್ಟ್ ಬಗ್ಗೆ ವಿಚಾರಿಸಿದ್ರು. ರಾಜು ಚೆನ್ನಾಗಿ ಕೆಲಸ ಮಾಡಿದ್ದೆ. ಅದು ಹೇಗೆ ಸೋತೆ ಎಂದು ಕೇಳಿದ್ರು. ನಿಮ್ಮ ಪ್ರಭಾವ ಮತ್ತು ಸಿದ್ದರಾಮಯ್ಯನವರ ಪ್ರಭಾವ ಅಂತ ಹೇಳಿದೆ. ಸುದೀಪ್ ಹುಟ್ಟುಹಬ್ಬಕ್ಕಿಂತ ನಮ್ಮದೇ ಹೆಚ್ಚು ಸುದ್ದಿಯಾಗಿದೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಉತ್ತಮ ಸ್ಥಾನಮಾನ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ