
ಬೆಂಗಳೂರು, (ಅಕ್ಟೋಬರ್ 07): ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ (Former PM HD Devegowda) ಅವರು ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ (Bengaluru) ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ಸದ್ಯ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಗೆ ಹೆಚ್‌ಡಿ ದೇವೇಗೌಡರು ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಚಳಿ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದ್ದು, ನಿನ್ನೆ (ಅಕ್ಟೋಬರ್ 06) ರಾತ್ರಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಾ ಸುದರ್ಶನ್ ಬಲ್ಲಾಳ್ ಅವರು ದೇವೇಗೌಡ್ರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಅಷ್ಟೇ ಅಂದ್ರೆ 2024ರ ಫೆಬ್ರವರಿ 15ರಂದು ತೀವ್ರ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಇದೇ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಬಳಿಕ ಆರೋಗ್ಯವಾಗಿ ಡಿಸ್ಚಾರ್ಜ್ ಆಗಿದ್ದರು.
ಹೆಚ್‌ಡಿ ದೇವೇಗೌಡ ಅವರಿಗೆ 92 ವಯಸ್ಸಾಗಿದ್ದು, ವಯೋಸಹಜ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆಗಾಗ ಆರೋಗ್ಯ ಕೈಕೊಡುತ್ತಲೇ ಇದೆ. ಆದರೂ ಸಹ ದೊಡ್ಡಗೌಡರು ಸದ್ಯ ಸಕ್ರಿಯ ರಾಜಕಾರಣದಲ್ಲಿದ್ದು, ರಾಜ್ಯಸಭೆ ಸದಸ್ಯರಾಗಿದ್ದಾರೆ. ಈ ಇಳಿವಯಸ್ಸಿನಲ್ಲೂ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದರು. ಟ್ರಕ್ ಗಣೇಶ ಮೆರವಣಿಗೆ ಮೇಲೆ ಹರಿದು ದುರಂತ ಸಂಭವಿಸಿದ ಬಳಿಕ ಸಂತ್ರಸ್ಥರ ಕುಟುಂಬ ವರ್ಗವನ್ನು ದೇವೇಗೌಡ ಭೇಟಿಯಾಗಿದ್ದರು.
ಹಾಗೇ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಎಚ್‌ಡಿ ದೇವೇಗೌಡ ಅವರು ಪ್ರಮುಖ ಪಾತ್ರವಹಿಸಿದ್ದರು. ಮಾತ್ರವಲ್ಲದೇ, ಲೋಕಸಭೆ ಚುನಾವಣೆ ಪ್ರಚಾರ, ಸಭೆಗಳಿಗೆ ಓಡಾಟ ನಡೆಸಿದ್ದರು. ಇನ್ನು ಈ ವಯಸ್ಸಲ್ಲೂ ಸಂಸತ್ ಕಾರ್ಯಕಲಾಪಗಳಲ್ಲೂ ಭಾಗವಹಿಸಿ ಕರ್ನಾಟಕದ ಪರ ಧ್ವನಿ ಎತ್ತುವುದನ್ನು ಸ್ಮರಿಸಬಹುದು.
Published On - 4:17 pm, Tue, 7 October 25