
ಎಲ್ಲರಿಗೂ ಹಾಡಬಹುದಾ? ಎಂದು ಕೇಳಿದರೆ ಹೌದು ಅಂತಾರೆ ಸುನಿಲ್ ಕೋಶಿ (Sunil Koshy). ಎಲ್ಲರಲ್ಲೂ ಒಂದೊಂದು ಕಲೆ ಅಡಗಿರುತ್ತದೆ. ಅದನ್ನು ಗುರುತಿಸಿ ಹೊರತರಬೇಕು, ಪಾಲಿಶ್ ಮಾಡಬೇಕು. ಅದು ಆ ವ್ಯಕ್ತಿಗಳಲ್ಲಿ ಆತ್ಮ ವಿಶ್ವಾಸವನ್ನು ಹುಟ್ಟು ಹಾಕುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ಹಾಡಬೇಕು ಎಂದು ಇರುತ್ತದೆ. ಮನೆಯಲ್ಲಿ ಅದೂ ಬಾತ್ ರೂಮಿನಲ್ಲಿ ಹಾಡಿದವರೇ ಹೆಚ್ಚು. ಅಳುಕು ಒಂದೆಡೆಯಾದರೆ ನಾವು ಹಾಡುವುದನ್ನು ಕೇಳಿ ಜನ ಏನಂತಾರೋ ಎಂಬ ಭಯ. ಹೀಗೆ ಅಂಜಿಕೆಯಿಂದಾಗಿಯೇ ಎಷ್ಟೋ ಪ್ರತಿಭೆಗಳು ಎಲೆ ಮರೆ ಕಾಯಿಯಂತೆ ಇದ್ದು ಬಿಡುತ್ತವೆ. ನಿಮಗೂ ಹಾಡಬಹುದು ಎಂದು ಅವರಲ್ಲಿ ಹುರುಪು ತುಂಬಿದರೆ ಮಾತ್ರ ಅವರ ಪ್ರತಿಭೆಯನ್ನು ಹೊರ ತರಲು ಸಾಧ್ಯ. ನಾನು ಹಾಡಬಲ್ಲೆ, ನಿಮಗೂ ಅದು ಸಾಧ್ಯ ಎಂಬ ಪಾಸಿಟಿವ್ ಸಂದೇಶವನ್ನು ನೀಡುವ ಉದ್ದೇಶದಿಂದಲೇ ಈ From Mug to Mike ಎಂಬ ಸ್ಟಾರ್ಟ್ ಅಪ್ ಶುರು ಮಾಡಿದ್ದು ಎಂದು ಸುನಿಲ್ ಕೋಶಿ ಮಾತು ಶುರು ಮಾಡಿದರು. ಏನಿದು ಫ್ರಂ ಮಗ್ ಟು ಮೈಕ್ ಸ್ಟಾರ್ಟ್ ಅಪ್? ಸುನಿಲ್ ಕೋಶಿಯೆಂಬ ಟೆಕ್ಕಿ ಈ ಸ್ಟಾರ್ಟ್ ಅಪ್ ಮೂಲಕ ಹಾಡುಗಾರಿಕೆಯಲ್ಲಿ ‘ಕ್ರಾಂತಿ’ ಮಾಡಿದ್ದು ಹೇಗೆ? ಇಲ್ಲಿದೆ ಅವರ ಸಾಧನೆಯ ಕತೆ. ಹುಟ್ಟಿದ ಊರು ಕೇರಳ. ದುಬೈನಲ್ಲಿ ಶಿಕ್ಷಣ ಪಡೆದು ಕರ್ನಾಟಕದ ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಮುಗಿಸಿ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಸುನಿಲ್ ಕೋಶಿ ಸಂಗೀತಲೋಕಕ್ಕೆ ಹೊರಳಿದರ ಹಿಂದೆ ಒಂದು ಕತೆಯಿದೆ. ಹಾಡುಗಳಲ್ಲಿ ಅತೀವ ಆಸಕ್ತಿ ಇದ್ದ ಸುನಿಲ್, ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗ ಕನ್ನಡ ಹಾಡುಗಳತ್ತ ಆಕರ್ಷಿತರಾದರು. ಅಲ್ಲಿ ಕನ್ನಡ...