ರಾಮನ ಆಡಳಿತ ವಿಶ್ವಕ್ಕೇ ಮಾದರಿ ಎಂದ ಜಿ ಪರಮೇಶ್ವರ: ಸಿಎಂ ಬೆನ್ನಲ್ಲೇ ಗೃಹ ಸಚಿವರಿಂದ ರಾಮ ಮಂದಿರ ಪರ ಹೇಳಿಕೆ

ರಾಮ ಮಂದಿರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಗೃಹ ಸಚಿವರಿಂದ ಈ ಹೇಳಿಕೆ ಮೂಡಿಬಂದಿದೆ. ಪರಮೇಶ್ವರ ಹೇಳಿಕೆಯನ್ನು ಸ್ವಾಗತಿಸಿರುವ ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ, ಕೊನೆಗೂ ಕಾಂಗ್ರೆಸ್ ರಾಮನ ಮಹತ್ವವನ್ನು ಅರ್ಥ ಮಾಡಿಕೊಂಡಂತಿದೆ ಎಂದಿದ್ದಾರೆ.

ರಾಮನ ಆಡಳಿತ ವಿಶ್ವಕ್ಕೇ ಮಾದರಿ ಎಂದ ಜಿ ಪರಮೇಶ್ವರ: ಸಿಎಂ ಬೆನ್ನಲ್ಲೇ ಗೃಹ ಸಚಿವರಿಂದ ರಾಮ ಮಂದಿರ ಪರ ಹೇಳಿಕೆ
ಜಿ ಪರಮೇಶ್ವರ

Updated on: Jan 02, 2024 | 7:15 AM

ಬೆಂಗಳೂರು, ಜನವರಿ 2: ಭಗವಾನ್ ರಾಮನ ಆಡಳಿತ ಕೇವಲ ಬಿಜೆಪಿ ನಾಯಕರಿಗೆ ಸಂಬಂಧಿಸಿದ್ದಲ್ಲ. ಅದು ವಿಶ್ವಕ್ಕೇ ಮಾದರಿ ಎಂದು ಗೃಹ ಸಚಿವ ಜಿ ಪರಮೇಶ್ವರ (G Parameshwara) ಹೇಳಿದ್ದಾರೆ. ನಮ್ಮ ಸರ್ಕಾರ ಮತ್ತು ಪಕ್ಷ ರಾಮ ಮಂದಿರದ ಪರವಾಗಿದೆ. ರಾಮ ಮಂದಿರಕ್ಕೆ (Ram Mandir) ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಗೃಹ ಸಚಿವರಿಂದ ಈ ಹೇಳಿಕೆ ಮೂಡಿಬಂದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ರಾಮರಾಜ್ಯದ ಪರಿಕಲ್ಪನೆಯು ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಅರ್ಥೈಸುತ್ತದೆ. ಇದು ನಮ್ಮ ಸಂವಿಧಾನದ ಆಧಾರವೂ ಆಗಿದೆ ಎಂದು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಸಂವಿಧಾನವನ್ನು ರೂಪಿಸಲು ಬಯಸಿದಾಗ, ಅದಕ್ಕೆ ರಾಮರಾಜ್ಯ ಮಾದರಿಯ ಸಾರವನ್ನು ತೆಗೆದುಕೊಂಡಿದ್ದರು. ಹಾಗಾಗಿ, ರಾಮರಾಜ್ಯ ಮಾದರಿಯು ಬಿಜೆಪಿ ಅಥವಾ ಸ್ಥಳೀಯ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಜಾಗತಿಕ ಮಾದರಿಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಪರಮೇಶ್ವರ ಹೇಳಿದ್ದಾರೆ.

ಆದರೆ, ರಾಮ ಮಂದಿರ ವಿಚಾರದಲ್ಲಿ ಪಕ್ಷದ ನಿಲುವು ಏನು ಎಂಬುದು ನನಗೆ ತಿಳಿದಿಲ್ಲ ಎಂದು ಪರಮೇಶ್ವರ ಹೇಳಿದ್ದಾರೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಪಕ್ಷವು ಭಾಗವಹಿಸಲು ನಿರ್ಧರಿಸಿದರೆ ನಾವು ಖಂಡಿತವಾಗಿಯೂ ಹೋಗುತ್ತೇವೆ. ನಾವೇಕೆ ಹೋಗಬಾರದು, ಶ್ರೀರಾಮ ಕೇವಲ ಬಿಜೆಪಿಯ ದೇವರಲ್ಲ, ಎಲ್ಲರಿಗೂ ಪೂಜ್ಯ ಎಂದು ಅವರು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ನಲ್ಲೂ ಹಿಂದೂಗಳಿದ್ದಾರೆ. ಬಿಜೆಪಿಯಲ್ಲಿರುವವರನ್ನು ಹಿಂದೂಗಳು ಮತ್ತು ಇತರ ಪಕ್ಷಗಳಲ್ಲಿರುವವರನ್ನು ಹಿಂದೂಗಳಲ್ಲದವರು ಎಂದು ವರ್ಗೀಕರಿಸುವುದು ತಪ್ಪು. ಭಾರತದ ಬಹುಪಾಲು ಜನಸಂಖ್ಯೆ ಹಿಂದೂಗಳು. ಇದು ಎಲ್ಲಾ ಪಕ್ಷಗಳಲ್ಲಿ ಪ್ರತಿಫಲಿಸುತ್ತದೆ. ಆದ್ದರಿಂದ, ಶ್ರೀರಾಮನು ಎಲ್ಲರಿಗೂ ಸೇರಿದವನು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾವು ಅಯೋಧ್ಯೆ ರಾಮ ಮಂದಿರದ ಪರ: ಸಿಎಂ ಸಿದ್ದರಾಮಯ್ಯ ಹೀಗೆನ್ನಲು ಕಾರಣವಿದೆ!

ಈ ಮಧ್ಯೆ, ಪರಮೇಶ್ವರ ಹೇಳಿಕೆಯನ್ನು ಸ್ವಾಗತಿಸಿರುವ ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ, ಕೊನೆಗೂ ಕಾಂಗ್ರೆಸ್ ರಾಮನ ಮಹತ್ವವನ್ನು ಅರ್ಥ ಮಾಡಿಕೊಂಡಂತಿದೆ. ಕಾಂಗ್ರೆಸ್ ನಾಯಕರ ಮನ ಪರಿವರ್ತನೆಯನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us