ಗದಗ: ಫೇಸ್ಬುಕ್ನಲ್ಲಿ ಸಮಸ್ಯೆ ತೋಡಿಕೊಂಡ ಕಾಂಗ್ರೆಸ್ ಕಾರ್ಯಕರ್ತನನ್ನು ಕರೆಸಿಕೊಂಡ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಅವರು ಧಮ್ಕಿ ಹಾಕಿದ ಆಡಿಯೋ ವೈರಲ್ ಆಗುತ್ತಿದೆ. ಮಾಜಿ ಶಾಸಕ ಬಿ.ಆರ್ ಯಾವಗಲ್ ಅವರನ್ನು ತಲೆ ಮೇಲೆ ಹುತ್ತುಕೊಂಡು ಓಡಾಡು, ನಾನು ಬೇಡ ಎನ್ನುವುದಿಲ್ಲ. ಆದರೆ ನೀನು ನನ್ನ ವಿಚಾರದಲ್ಲಿ ಯಾಕೆ ಬರುತ್ತೀಯಾ? ನೀನೇನು ನಮ್ಮ ಪಕ್ಷದ (ಬಿಜೆಪಿ) ಕಾರ್ಯಕರ್ತನಾ ಎಂದು ಪ್ರಶ್ನಿಸಿ ತನ್ನ ಸುದ್ದಿಗೆ ಬರದಂತೆ ವಾರ್ನಿಂಗ್ ನೀಡಿರುವುದು ಆಡಿಯೋದಲ್ಲಿ ಕೇಳಿಸಬಹುದು. ಸಚಿವ ಸಿಸಿ ಪಾಟೀಲ್ ಕೈ ಕಾರ್ಯಕರ್ತ ಪ್ರವೀಣ್ಗೆ ನೀಡಿದ ವಾರ್ನಿಂಗ್ ಏನು ಎಂಬುದು ಇಲ್ಲಿದೆ ನೋಡಿ.
ಗದಗ ಜಿಲ್ಲೆ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಸಿ ಪಾಟೀಲ್, ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಕರಿಸಿ ಆವಾಜ್ ಹಾಕಿದ್ದಾರೆ. ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಜಿ ಶಾಸಕ ಬಿ.ಆರ್.ಯಾವಗಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸೂಕ್ತ ಕ್ರಮಕ್ಕೆ ಪೊಲೀಸರಿಗೆ ದೂರು ಕೂಡ ನೀಡಲಾಯಿತು. ನವೆಂಬರ್ 1 ರಂದು ಸಚಿವರು ಅವಾಜ್ ಹಾಕಿರುವ ಆರೋಪ ಕೇಳಿಬಂದಿದೆ. ಆಡಿಯೋದಲ್ಲಿ ಇರುವುದು ಇಷ್ಟೆ…
“ಇನ್ಮೊಮ್ಮೆ ಹೇಳ್ತಿನಿ, ಮತ್ತೊಮ್ಮೆ ಹೇಳ್ತಿನಿ ಮುಂದೆ ಆಸ್ಪತ್ರೆಯಲ್ಲಿ ಬಂದು ನೋಡ್ತಿನಿ” ಎಂದು ಪ್ರವೀಣ್ಗೆ ಸಚಿವ ಪಾಟೀಲ್ ಅವಾಜ್ ಹಾಕಿದ್ದಾರೆ. ಅಲ್ಲದೆ, “ಫೇಸ್ ಬುಕ್ನಲ್ಲಿ ಬಹಳ ಶಾನೆ ಆಗಬೇಡ, ಹೇಳುವಾಗ ಹೆಂಗ್ ಹೇಳಬೇಕು ಹಂಗ ಹೇಳ್ತಿನಿ, ಮಾಜಿ ಶಾಸಕ ಬಿ.ಆರ್ ಯಾವಗಲ್ ಅವರನ್ನು ತಲೆ ಮೇಲೆ ಹುತ್ತುಕೊಂಡು ಓಡಾಡು, ನಾನು ಬೇಡ ಅನ್ನೊದಿಲ್ಲ” ಎಂದಿದ್ದಾರೆ.
ಈ ವೇಳೆ ನಾನು ಏನು ತಪ್ಪು ಮಾಡಿದ್ದೇನೆ ಹೇಳಿ ಸರ್ ಎಂದು ಪ್ರವೀಣ್ ಪ್ರಶ್ನಿಸಿದ್ದಾನೆ. ಮಾತು ಮುಂದುವರಿಸಿದ ಸಚಿವರು, “ನನ್ನ ಉಸಾಬರಿಗೆ ಯಾಕೇ ಬರ್ತಿ, ನೀ ಏನು ನಮ್ಮ ಪಾರ್ಟಿ ಕಾರ್ಯಕರ್ತನಾ?” ಎಂದು ಅವಾಜ್ ಹಾಕಿದ್ದಾರೆ. ಈ ವೇಳೆ ಪ್ರವೀಣ್, ನೀವು ನಮ್ಮ ಕ್ಷೇತ್ರದ ಶಾಸಕರು ಅಂತಾ ಹೇಳಿದ್ದಾನೆ. ಇದಕ್ಕೆ, ಪೇಸ್ ಬುಕ್ನಲ್ಲಿ ಯಾಕೇ ಹೇಳ್ತಿಯಾ ಎಂದು ಸಚಿವರು ಅವ್ಯಾಚ್ಛ ಶಬ್ದ ಬಳಕೆ ಮಾಡಿ ಪ್ರಶ್ನಿಸಿದ್ದಾರೆ.
ಸಚಿವರ ಪ್ರಶ್ನೆಗೆ ಉತ್ತರಿಸಿದ ಪ್ರವೀಣ್, ಮನೆ ಬಿದ್ದಿದೆ ಎಂದು ಹೇಳಿದ್ದಾನೆ. ಇದಕ್ಕೆ ನಾನು ಬರಲ್ಲ ಎಂದು ಸಚಿವರು ಹೇಳಿದ್ದಾರೆ. ಅಲ್ಲದೆ ಸರ್ಕಾರದ ಕೆಲಸ ಇದ್ದರೆ ಬಾ ಎಂದು ಸಚಿವರು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಪ್ರವೀಣ್, ತಾನು ಕಾಂಗ್ರೆಸ್ ಪಕ್ಷದ ಪರವಾಗಿ ಯಾರಿದ್ದರೂ ನಾನು ಕೆಲಸ ಮಾಡುತ್ತೇನೆ ಎಂದಿದ್ದಾನೆ. ಇದಕ್ಕೆ ಸಚಿವರು “ನಿನ್ನಿಂದ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕೈದು ವೋಟ್ ಬರಬೇಕು” ಎಂದಿದ್ದಾರೆ. ಈ ವೇಳೆ ಪ್ರವೀಣ್ “ನೀವು ಕಾಂಗ್ರೆಸ್ ಬಂದ್ರೆ ನಿಮಗೆ ನನ್ನ ವೋಟ್ ಎಂದಿದ್ದಾನೆ. ಇದಕ್ಕೆ ಸಚಿವರು, ನಾನು ಕಾಂಗ್ರೆಸ್ ಬರಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Fri, 4 November 22