Gadag: ತುಂಬಿದ ಕೆರೆ ನೀರು ಖಾಲಿ ಮಾಡುತ್ತಿರುವ ಶಾಸಕ ರಾಮಣ್ಣನ ಆಪ್ತ

| Updated By: Rakesh Nayak Manchi

Updated on: Nov 10, 2022 | 2:08 PM

ಜಲ್ಲಿಗೇರಿ ಗ್ರಾಮದಲ್ಲಿ 3 ದಶಕಗಳ ನಂತರ ಕೆರೆ ಭರ್ತಿಯಾಗಿದೆ. ಆದರೆ ಶಾಸಕನ ಆಪ್ತನ ದರ್ಬಾರ್​ಗೆ ಕೆರೆಯ ನೀರು ಖಾಲಿಯಾಗುತ್ತಿದೆ. ಇದನ್ನು ತಡೆಯುವಂತೆ ಸಣ್ಣ ನೀರಾವರಿ ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳು ಮೌನವಹಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Gadag: ತುಂಬಿದ ಕೆರೆ ನೀರು ಖಾಲಿ ಮಾಡುತ್ತಿರುವ ಶಾಸಕ ರಾಮಣ್ಣನ ಆಪ್ತ
ತುಂಬಿದ ಕೆರೆ ನೀರು ಖಾಲಿ ಮಾಡುತ್ತಿರುವ ಶಾಸಕ ರಾಮಣ್ಣನ ಆಪ್ತ
Follow us on

ಶಿರಹಟ್ಟಿ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದ ಹೊರವಲಯದಲ್ಲಿರುವ ಬೃಹತ್ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಜಲ್ಲಿಗ್ರಾಮ ಹಾಗೂ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳು ಹಾಗೂ ರೈತರಿಗೆ ಜೀವನಾಡಿಯಾಗಿದೆ. ಆದರೆ ಈ ಕೆರೆ ಮೇಲೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ (MLA Ramanna Lumani) ಆಪ್ತ ಪರಶುರಾಮ ಸಾಳುಂಕೆ ವಕ್ರದೃಷ್ಠಿ ಬಿದ್ದಿದೆ. ಕೆರೆಯ ಗೇಟ್ ಎತ್ತಿ ಅಪಾರ ನೀರು ಹಳ್ಳಕ್ಕೆ ಹರಿಬಿಟ್ಟಿದ್ದಾನೆ ಎಂದು ಇಡೀ ಗ್ರಾಮಸ್ಥರು ಆರೋಪಿಸಿದ್ದು, ಶಾಸಕ ರಾಮಣ್ಣ ವಿರುದ್ಧ ಕೆಂಡಕಾರಿದ್ದಾರೆ. ಶಾಸಕನ ದರ್ಬಾರ್ ಇಷ್ಟಕ್ಕೆ ಮುಗಿಯದೆ, ಕೆರೆಯ ಕೋಡಿ ಒಡೆದು ನೀರು ಖಾಲಿ ಮಾಡಿದ್ದಾನಂತೆ. ‌ಸಾಕಷ್ಟು ಪ್ರಮಾಣದ ನೀರು ಹರಿದು ಹೋಗಿದೆ. ಈವಾಗ ಕೆರೆಯಲ್ಲಿ ಗೇಟ್ ಓಪನ್ ಮಾಡಿ ನೀರು ಬಿಡುಗಡೆ ಮಾಡಲಾಗುತ್ತಿದೆ‌. ಸಣ್ಣ ನೀರಾವರಿ ಇಲಾಖೆ ಸೇರಿದ ಕೆರೆ ಒಡೆದು ನೀರು ಹಳ್ಳಕ್ಕೆ ಬಿಟ್ಟರೂ ಅಧಿಕಾರಿಗಳು, ತಹಶೀಲ್ದಾರ್ ಮಾತ್ರ ಕ್ಯಾರೇ ಅನ್ನುತ್ತಿಲ್ಲವಂತೆ. ಇದು ಗ್ರಾಮಸ್ಥರು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಒಬ್ಬನ ಹಿತಕ್ಕಾಗಿ ಗ್ರಾಮದ ಕೆರೆಯ ನೀರನ್ನು ಖಾಲಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೇ ಮಾಡಲಾಗುತ್ತಿದೆ‌. ಈ ವಿಚಾರದಲ್ಲಿ ರೈತರು ಹಾಗೂ ಶಾಸಕ ಆಪ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಹಳ್ಳ ಪಾಲಾಗುತ್ತಿರುವ ನೀರನ್ನು ನಿಲ್ಲಿಸಿ, ಗ್ರಾಮಸ್ಥರ ಹಿತವನ್ನು ಕಾಪಾಡಬೇಕು ಎಂದು ಜನರು ಮತ್ತು ರೈತರು ಒತ್ತಾಯ ಮಾಡಿದ್ದಾರೆ.

ಜಲ್ಲಿಕೇರಿ ಗ್ರಾಮದ ಹೊರವಲಯದಲ್ಲಿನ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದ್ದು, ಈ ಕೆರೆ ನೀರಿನಿಂದ ಜಲ್ಲಿಕೇರಿ, ಕಡಕೋಳ ಹಾಗೂ ಹೊಸಳ್ಳಿ ಗ್ರಾಮದ ನೂರಾರು ರೈತರು ನೀರಾವರಿ ಮಾಡಿಕೊಳ್ಳುತ್ತಾರೆ. ಆದರೆ ಶಾಸಕನ ಆಪ್ತ ಪರಶುರಾಮ ಸೂಳಂಕಿ, ಅವರ ಜಮೀನು ಕೆರೆಯ ಪಕ್ಕದಲ್ಲಿದೆ‌. ಅಷ್ಟೇ ಅಲ್ಲ ಕೆರೆ ಒತ್ತುವರಿ ಮಾಡಿ ಕೆರೆಯಲ್ಲಿ ಕಬ್ಬಿನ ತೋಟ ಮಾಡಿದ್ದಾನಂತೆ. ಆ ಕಬ್ಬು ಉಳಿಸಲು ಪರಶುರಾಮ ಸೂಳಂಕಿ, ಕೆರೆಯ ನೀರನ್ನು ಖಾಲಿ ಮಾಡಿಡುತ್ತಿದ್ದಾನೆ. ಇದಕ್ಕೆ ಶಿರಹಟ್ಟಿ ತಹಶೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶಾಸಕರು ತಹಶೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ಕೆರೆ ಖಾಲಿ ಮಾಡುಂತೆ ಹೇಳಿದ್ದಾರೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪ್ತನ ಹಿತಕ್ಕಾಗಿ ಇಡೀ ಗ್ರಾಮಸ್ಥರನ್ನು ಬಲಿ ಕೊಡುವುದು ಎಷ್ಟರ ಮಟ್ಟಿಗೆ ಸರಿ ಅಂತ ಕಿಡಿಕಾರಿದ್ದಾರೆ. ಈ ಬಗ್ಗೆ ಶಾಸಕನ ಆಪ್ತ ಪರಶುರಾಮ ಸಾಳುಂಕೆ ಅವರನ್ನು ಕೇಳಿದರೆ ನನ್ನ ಕಬ್ಬು ನೀರಲ್ಲಿ ನಿಂತಿದೆ. ಹೀಗಾಗಿ ಕೆರೆ ಖಾಲಿ ಮಾಡಲು ಸಣ್ಣ ನೀರಾವರಿ ಇಲಾಖೆಗೆ ಅರ್ಜಿ ನೀಡಿದ್ದೆ. ಅಧಿಕಾರಿಗಳು ಖಾಲಿ ಮಾಡುತ್ತಿದ್ದಾರೆ. ಇಲ್ಲವಾದರೆ ಕಬ್ಬಿಗೆ ಪರಿಹಾರ ನೀಡಿ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾಲ್ ಮಾಡಿ ಕೆರೆ ಖಾಲಿ ಮಾಡಿಸುವಂತೆ ಸೂಚನೆ ನೀಡಿದ್ದಾರಂತೆ‌. ಹೀಗಾಗಿ ಅಧಿಕಾರಿಗಳು ನೀರು ಖಾಲಿ ಮಾಡುತ್ತಾ ಇದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ. ಒಟ್ಟಾರೆ ಶಾಸನ ಅಂದಾ ದರ್ಬಾರ್​ನಿಂದ, ರೈತರಿಗೆ ಅನುಕೂಲವಾಗಬೇಕಾದ ಜೀವ ಜಲ ಹಳ್ಳದ ಪಾಲಾಗುತ್ತಿದೆ. ಸರ್ಕಾರಿ ಕೆರೆ ಖಾಲಿ ಮಾಡುತ್ತಾ ಇದ್ದಾರೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಕೆರೆ ಉಳಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಜನರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆಯೋ ಎಂದು ಕಾದು ನೋಡಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ