ಗದಗ, ಅ.17: ಮಾಜಿ ಸಚಿವರಾದ ಸಿಸಿ ಪಾಟೀಲ್ (CC Patil) ಹಾಗೂ ಬಿಆರ್ ಯಾವಗಲ್ (BR Yavagal) ನಡುವಿನ ವಾಕ್ಸಮರ ತಾರಕ್ಕೇರಿದ್ದು, ಪರಸ್ಪರ ವೈಯಕ್ತಿಕ ಟೀಕೆ ನಡೆಸಲು ಆರಂಭಿಸಿದ್ದಾರೆ. PWD ಇಲಾಖೆಯಲ್ಲಿ 500 ಕೋಟಿ ಹಗರಣ ಬಗ್ಗೆ ಯಾವಗಲ್ ತನಿಖೆಗೆ ಆಗ್ರಹಿಸಿದ್ದರು. ಇದು ಪಾಟೀಲ್ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಹೀಗಾಗಿ ಸುದ್ದಿಗೋಷ್ಠಿ ಮಾಡಿದ ಪಾಟೀಲ್ ಮಾತಿನ ಭರದಲ್ಲಿ ಯಾವಗಲ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಯಾವಗಲ್, ಕೂಡ ಪಾಟೀಲ್ ವಿರುದ್ಧ ವೈಯಕ್ತಿಕ ಟೀಕಾಪ್ರಹಾರ ನಡೆಸಿದ್ದಾರೆ.
ಪವಿತ್ರ ಸ್ಥಾನದಲ್ಲಿ ಕುಳಿತು ದೇಶದಲ್ಲಿ ನರಗುಂದ ಕ್ಷೇತ್ರ ಮರ್ಯಾದ ಕಳೆದಿದ್ದು ಮರೆತುಬಿಟ್ಟಿದ್ದೀರಾ ಎಂದು ಹೇಳುವ ಮೂಲಕ ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದನ್ನು ಕೆಣಕಿದ್ದಾರೆ. ಅಷ್ಟೇ ಅಲ್ಲದೆ, ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿ ಗೆಲುವು ಸಾಧಿಸಿದ್ದಾರೆ. ನೀವು ಎಷ್ಟು ಮನೆ ಕಟ್ಟಿದ್ದೀರಿ ಎಷ್ಟು ಫ್ಲ್ಯಾಟ್ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ ಯಾವಗಲ್, ನಿಮಗೆ ಧೈರ್ಯ ಇದ್ದರೆ ನನ್ನ ಹಾಗೂ ನಿಮ್ಮ ಇಬ್ಬರ ಆಸ್ತಿ ಬಗ್ಗೆ ತನಿಖೆ ನಡೆಸುವಂತೆ ಸವಾಲ ಹಾಕಿದ್ದಾರೆ.
ಪಿಡ್ಲ್ಯೂಡಿ ಇಲಾಖೆಯಲ್ಲಿ 500 ಕೋಟಿ ಹಗರಣ ಆರೋಪ ರಾಜ್ಯದಲ್ಲಿ ಈಗ ಭಾರಿ ಸಂಚಲನ ಮೂಡಿಸಿದೆ. ಯಾವಗಲ್ ದೂರಿನ ಹಿನ್ನಲೆಯಲ್ಲಿ ಸರ್ಕಾರ, ನರಗುಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ 500 ಕೋಟಿ ಹಗರಣ ತನಿಖೆಗೆ ಈಗಾಗಲೇ ಆದೇಶ ಮಾಡಿದ್ದು, ತನಿಖಾ ತಂಡ ಕ್ಷೇತ್ರದಲ್ಲಿ ತನಿಖೆ ಶುರು ಮಾಡಿದೆ. idu ಸಿ ಸಿ ಪಾಟೀಲ್ ಅವರನ್ನು ಕೆರಳುವಂತೆ ಮಾಡಿದೆ.
ಉಭಯ ಮಾಜಿ ಸಚಿವರ ನಡುವೆ ಜಿಲ್ಲೆಯಲ್ಲಿ ಮಾತಿನ ಯುದ್ಧವೇ ನಡೆಯುತ್ತಿದೆ. 500 ಕೋಟಿ ಯಾವಗಲ್ ಆರೋಪಕ್ಕೆ ಅಕ್ಟೋಬರ್ 12 ರಂದು ಕೌಂಟರ್ ಪ್ರೆಸ್ ಮೀಟ್ ಮಾಡಿ ಸಿಸಿ ಪಾಟೀಲ್ ತೀರುಗೇಟು ನೀಡಿದ್ದರು. ಯಾವುದೇ ಹಗರಣ ನಡೆದಿಲ್ಲ. ಯಾವಗಲ್ ಸೋಲಿನ ಹತಾಶೆಯಿಂದ ಆರೋಪ ಮಾಡಿದ್ದಾರೆ ಎಂದಿದ್ದರು.
ಇದನ್ನೂ ಓದಿ: ಗದಗ: PWD ಇಲಾಖೆಯಲ್ಲಿ 500 ಕೋಟಿ ರೂ. ಹಗರಣ, ಆರೋಪ ತಳ್ಳಿ ಹಾಕಿದ ಮಾಜಿ ಸಚಿವ ಸಿಸಿ ಪಾಟೀಲ್
ಅಷ್ಟೇ ಅಲ್ಲದೆ, ಯಾವಗಲ್ ಅವರನ್ನು ನರಗುಂದದ ಭೂತ ಅಂತ ವೈಯಕ್ತಿಕ ಆರೋಪ ಮಾಡಿದ್ದರು. ಯಾವಗಲ್ ಬೆಂಗಳೂರಿನಲ್ಲಿ ದೊಡ್ಡ ಬಂಗಲೆ ನಿರ್ಮಾಣ ಮಾಡಿದ್ದಾರೆ, ಆಸ್ತಿ ಮಾಡಿದ್ದಾರೆ. ಯಾವಲಗ್ ಅಭಿವೃದ್ಧಿ ವಿರೋಧಿ ಅಂತಾ ಹೇಳಿದ್ದರು.
ಇದು ಯಾವಗಲ್ ಅವರನ್ನು ಕೆರಳುವಂತೆ ಮಾಡಿತ್ತು. ನಾನು ಅಭಿವೃದ್ಧಿ ವಿರೋಧಿ ಅಲ್ಲ. ಅಭಿವೃದ್ಧಿ ಕೆಲಸದಿಂದಲೇ ಐದು ಬಾರಿ ಶಾಸಕನಾಗಿದ್ದೇನೆ. ಭ್ರಷ್ಟಾಚಾರವಾನ್ನ ಸಾರ್ವತ್ರಿಕವಾಗಿ ಮಾಡುವ ವ್ಯವಸ್ಥೆಯ ವಿರೋಧಿ ನಾನು. 500 ಕೋಟಿ ಆರೋಪ ಮಾಡಿದ್ದು ಸತ್ಯ. ರಾಜಕೀಯ ಆರೋಪ ಮಾಡಿದ್ದೇನೆ. ಸಿಸಿ ಪಾಟೀಲ್ ವಿರುದ್ಧ ನಾನು ವೈಯಕ್ತಿಕ ಆರೋಪ ಮಾಡಿಲ್ಲ ಅಂತಾ ಹೇಳಿಕೆ ನೀಡಿದ್ದಾರೆ.
ಸಿಸಿ ಪಾಟೀಲ್ ದುಡ್ಡಿನ ಪ್ರಭಾವದ ಮಧ್ಯೆಯೂ ಜನ ನನಗೆ 71 ಸಾವಿರ ವೋಟ್ ಕೊಟ್ಟಿದ್ದಾರೆ. ಸಿ ಸಿ ಪಾಟೀಲ್ ಹಣ ಹಂಚಿ ಗೆಲುವು ಸಾಧಿಸಿದ್ದಾರೆ. ಸಿಸಿ ಪಾಟೀಲರ ದಬ್ಬಾಳಿಕೆ, ದೌರ್ಜನ್ಯ ಮೀರಿ ಜನ ನನಗೆ ಮತ ನೀಡಿದ್ದಾರೆ ಅಂತ ಯಾವಗಲ್ ವಾಗ್ದಾಳಿ ಮಾಡಿದ್ದಾರೆ. ಗೆಲುವಿನ ಅಂತರ ಕೇವಲ 1791 ಮತಗಳು ಇವೆ. ಹಣ ಹಂಚಿ ನೀವು ಗೆಲುವು ಸಾಧಿಸಿದ್ದೀರಿ ಅಂತ ಯಾವಗಲ್ ಆರೋಪಿಸಿದ್ದಾರೆ.
ನಾನೂ ಅಭಿವೃದ್ಧಿ ವಿರೋಧಿಯಲ್ಲಿ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. 11 ನೂರು ಕೋಟಿ ನೀರಾವರಿ ಯೋಜನೆ ತಂದಿದ್ದೇನೆ. 450 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಮಾಡಿದ್ದೇನೆ. ನರಗುಂದ ಕುಡಿಯುವ ನೀರಿನ ಯೋಜನೆಯನ್ನ 65 ಕೋಟಿ ತಂದಿದ್ದೇನೆ. ಕೆರೆ, ನಮ್ಮ ಹೊಲ ಯೋಜನೆಯಡಿ ರಸ್ತೆ ಮಾಡಿದ್ದೇವೆ. ನೀವೇನು ಮಾಡಿದ್ದೀರಿ ಅನ್ನೋದನ್ನ ನಮಗೂ ವಿವರಣೆ ಕೊಡಿ. ಕಳೆದ ವರ್ಷ 500 ಕೋಟಿ ಖರ್ಚು ಮಾಡಿದ್ದೀರಿ. ಹೇಗೆ ಮಾಡಿದ್ದೀರಿ? ಕೆಲಸ ಆಗಲು ಸಮಯ ಬೇಡವೇ? ಎಷ್ಟು ಜನ ಇಂಜಿನಿಯರ್ ಆ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ ಅಂತ ಪ್ರಶ್ನಿಸಿದ್ದಾರೆ.
ನರಗುಂದದಲ್ಲಿ 200 ಜನ ಕಾಂಟ್ರ್ಯಾಕ್ಟರ್ ಇದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರಿಗೆ ಕೆಲಸ ಕೊಡಲಾಗಿದೆ. ಅವರಿಗೆ ಹೇಗೆ ಕೊಟ್ಟಿದ್ದೀರಿ? ಅವರಿಗೆ ಅರ್ಹತೆ ಬೇಕಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಐದು ವರ್ಷ ಯಾವ ಹಳ್ಳಿಗೂ ಹೋಗಲಿಲ್ಲ. ಕೊರೊನಾ ಸಂದರ್ಭದಲ್ಲಿ ಗೇಟ್ಗೆ ಕೀಲಿ ಹಾಕಿಸಿ ಮನೆ ಒಳಗೆ ಕೂತಿದ್ದಿರಿ. ಈಗ ವರ್ಷದ ಲೆಕ್ಕ ಕೇಳಿದರೆ ವೈಯಕ್ತಿಕವಾಗಿ ಮಾತನಾಡುತ್ತಾರೆ ಎಂದು ಪಾಟೀಲ್ ವಿರುದ್ಧ ಯಾವಗಲ್ ಆಕ್ರೋಶ ಹೊರಹಾಕಿದ್ದಾರೆ.
25 ಸಾವಿರ ವೋಟ್ನಿಂದ ಆರಿಸಿ ಬರುತ್ತೇನೆ ಅಂತ ಹೇಳಿದ್ದಿರಿ. ಡಿಸಿಎಂ ಆಗುತ್ತೇನೆ ಅಂತ ಹೇಳುತ್ತಿದ್ದಿರಿ. ನಿಮ್ಮ ಹಣೆಯಬರಹಕ್ಕೆ ಅಲ್ಪಮತದಿಂದ ಆರಿಸಿ ಬಂದಿದ್ದೀರಿ. ಬೊಮ್ಮಾಯಿ ಸಿಎಂ, ನಾನು ಡಿಸಿಎಂ ಆಗೋದು ಸತ್ಯ ಅಂತಾ ಹೇಳಿದ್ದಿರಿ. ಬಡಾಯಿ ಕೊಚ್ಚಿಕೊಂಡಿದ್ದಿರಿ. ಆಗದಿದ್ದಕ್ಕೆ ನಿಮಗೆ ನಿರಾಸೆಯಾಗಿದೆ ಅಂತ ಮಾತ್ ಮಾತಲ್ಲೂ ಯಾವಗಲ್ ಸಿಸಿ ಪಾಟೀಲರಿಗೆ ಟಾಂಗ್ ಕೊಟ್ಟರು.
ಮಹದಾಯಿ ಹೋರಾಟದಲ್ಲಿ ಹರಕು ಕೋಟ್ ಹಾಕಿಕೊಂಡು ಬಂದಿದ್ದರು ಅಂತೀರಿ. ನಾನು 80 ರ ದಶಕದಲ್ಲಿ ಹೋರಾಟ ಮಾಡಿ ತಾರ್ಕಿಕ ಅಂತ್ಯಕ್ಕೆ ತಂದಿದ್ದೇನೆ. ರೈತರ ವಿರುದ್ಧದ ಕೇಸ್ ಹಿಂತೆಗೆಸಿದೆ. ಪಾದಯಾತ್ರೆ, ಹೋರಾಟ ಮಾಡಿದ್ದೆವು. ನನ್ನ ಮೇಲೆ ಕೇಸ್ ಇದೆ ಅಂತಾರೆ. ನಿಮಗೆ ಮಾನ ಮರ್ಯಾದೆ ಇದ್ದರೆ ಯಾವ ಕೇಸ್ ಅಂತಾ ಹೇಳಿ. ಕ್ರಿಮಿನಲ್ ಹಿನ್ನೆಲೆ ಇಟ್ಟುಕೊಂಡು ರಾಜಕೀಯಕ್ಕೆ ಬಂದಿಲ್ಲ. ಯಾರನ್ನೂ ಮರ್ಡರ್ ಮಾಡಿಲ್ಲ ಎಂದರು.
ಕಾಂಟ್ರ್ಯಾಕ್ಟರ್ ಜೊತೆ ಹೊಂದಾಣಿಕೆ ಬಗ್ಗೆ ಸಿಸಿ ಪಾಟೀಲ್ ಆರೋಪಕ್ಕೆ ಆಕ್ರೋಶಗೊಂಡ ಯಾವಗಲ್, ನಾನು ಅವರನ್ನ ಭೇಟಿಯಾಗಲು ಹೋಗಿಲ್ಲ. ಸಿಸಿ ಪಾಟೀಲರೇ ಅವರನ್ನ ನನ್ನ ಬಳಿ ಕಳುಹಿಸಿದ್ದರು. ತನಿಖೆ ಮುಂದುವರೆಸುವುದಾಗಿ ಗುತ್ತಿಗೆದಾರರಿಗೆ ಹೇಳಿ ಕಳುಹಿಸಿದ್ದೇನೆ. ಸಿಸಿ ಪಾಟೀಲ ಅವರದ್ದು ಬ್ಲ್ಯಾಕ್ ಮೇಲೆ ಪ್ರವೃತ್ತಿ ಅಂತ ವಾಗ್ದಾಳಿ ಮಾಡಿದ್ದಾರೆ. ಉಭಯ ಮಾಜಿ ಸಚಿವರ ಮಾತಿನ ಯುದ್ಧ ಮುಂದೆ ಯಾವ ಹಂತಕ್ಕೆ ತಲುಪುತ್ತೋ ಕಾದು ನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ