AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದಿನ ಗೊರಜು ಭೂಮಿಗೆ ಇಂದು ಬಂಗಾರದ ಬೆಲೆ: ಏನಿದು ನೂರಾರು ಕೋಟಿ ಬೆಲೆಬಾಳುವ ಭೂಮಿಯ ಕಥೆ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರ ಗ್ರಾಮದಲ್ಲಿ 250 ಕೋಟಿ ರೂ. ಬೆಲೆಬಾಳುವ 81 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ. 44 ವರ್ಷಗಳ ಹಿಂದೆ ಕೃಷಿಗೆ ಯೋಗ್ಯವಲ್ಲ ಎಂದು ತಿರಸ್ಕರಿಸಿದ್ದ ಭೂಮಿ ಇಂದು ಬಂಗಾರದ ಬೆಲೆ ಪಡೆದಿದೆ. ಅಧಿಕಾರಿಗಳು ಹಾಗೂ ಪ್ರಭಾವಿಗಳ ಶಾಮೀಲಾಗಿದ್ದಾರೆ ಎನ್ನಲಾಗಿದ್ದು, ಜಿಲ್ಲಾ ಸಚಿವರು ತನಿಖೆಗೆ ಆದೇಶಿಸಿದ್ದಾರೆ.

ಅಂದಿನ ಗೊರಜು ಭೂಮಿಗೆ ಇಂದು ಬಂಗಾರದ ಬೆಲೆ: ಏನಿದು ನೂರಾರು ಕೋಟಿ ಬೆಲೆಬಾಳುವ ಭೂಮಿಯ ಕಥೆ
ಜಮೀನು Image Credit source: tv9 kannada
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Mar 06, 2026 | 7:51 PM

Share

ಕೋಲಾರ, ಮಾರ್ಚ್​​ 06: ಅದು ಬೆಟ್ಟಗುಡ್ಡಗಳಿರುವ ಭೂಮಿ (land). ಅಲ್ಲಿ ಕೃಷಿ ಮಾಡಲು ಯೋಗ್ಯವಲ್ಲ, ಹಾಗಾಗಿ ಅದನ್ನು ರೈತರಿಗೆ ಮಂಜೂರು ಮಾಡುವುದು ಬೇಡ ಎಂದು ಅಧಿಕಾರಿಗಳೇ ತಿರಸ್ಕರಿಸಿದ್ದರು. ಆದರೆ ಇಂದು ಆ ಭೂಮಿಗೆ ಬಂಗಾರದ ಬೆಲೆ ಬಂದ ಹಿನ್ನಲೆ ಅಧಿಕಾರಿಗಳೇ ಶಾಮೀಲಾಗಿ ನೂರಾರು ಕೋಟಿ ರೂ ಬೆಲೆಬಾಳುವ ಭೂಮಿಯನ್ನು ಅಕ್ರಮವಾಗಿ ರಾತ್ರೋರಾತ್ರಿ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ.

ಕೋಲಾರ ಜಿಲ್ಲೆಯ ಮಾಲೂರು ಬಹುತೇಕ ಬೆಂಗಳೂರಿಗೆ ಹೊಂದಿಕೊಂಡಿರುವ ತಾಲ್ಲೂಕು. ಹಾಗಾಗಿ ಮಾಲೂರು ತಾಲ್ಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಕಳೆದ ಕೆಲವು ದಿನಗಳಿಂದ ಮಾಲೂರು ತಾಲ್ಲೂಕಿನಲ್ಲಿ ಮೇಲಿಂದ ಮೇಲೆ ಭೂ ಹಗರಣಗಳು ನಡೆಯುತ್ತಿವೆ. ಅದರಂತೆ ಮಾಲೂರು ತಾಲ್ಲೂಕು ಚೆನ್ನಿಗರಾಯಪುರ ಗ್ರಾಮದ ಸರ್ವೆ ನಂ-6ರಲ್ಲಿನ ಸುಮಾರು 250 ಕೋಟಿ ರೂ ಬೆಲೆಬಾಳುವ ಸುಮಾರು 81 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ಕೆಲವೊಂದು ಪ್ರಭಾವಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೇ ಶಾಮೀಲಾಗಿರುವ ಆರೋಪವೂ ಇದೆ.

ಕೂಲಂಕುಷವಾಗಿ ತನಿಖೆಗೆ ಸೂಚನೆ

ಸದ್ಯ ನೂರಾರು ಕೋಟಿಯ ಭೂ ಅಕ್ರಮ ಕುರಿತು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ವಿಚಾರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯ ವಿಷಯವಾಗಿದ್ದು ಸ್ವತ: ಜಿಲ್ಲಾ ಉಸ್ತವಾರಿ ಸಚಿವರೇ ಚೆನ್ನಿಗರಾಯಪುರ ಭೂ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಜಮೀನು ಮಂಜೂರಾತಿಗೆ ತಡೆಯಾಜ್ಞೆ ನೀಡಿ ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮವಹಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ಎರಡೇ ವರ್ಷಗಳಲ್ಲಿ 90 ಸಾವಿರ ಸರ್ಕಾರಿ ಭೂಮಿ ಅಕ್ರಮ ಒತ್ತುವರಿ!

ಅಷ್ಟಕ್ಕೂ ಏನಿದು ಚೆನ್ನಿಗರಾಯಪುರ ಗ್ರಾಮದ ನೂರಾರು ಕೋಟಿ ರೂ ಬೆಲೆಬಾಳುವ ಭೂಮಿಯ ಕಥೆ ಅಂತ ನೋಡುವುದಾರೆ ಅದು ಸುಮಾರು 44 ವರ್ಷಗಳ ಹಿಂದೆ ಅಂದರೆ 1982ರಲ್ಲಿ ಚೆನ್ನಿಗರಾಯಪುರ ಗ್ರಾಮದ ಸರ್ವೆ ನಂ-6 ರಲ್ಲಿದ್ದ ಗೊರಜು ಹಾಗೂ ಮಣ್ಣು ಗುಡ್ಡವಿದ್ದ ಭೂಮಿಯನ್ನು ಮಂಜೂರು ಮಾಡುವಂತೆ 27 ಜನರು ತಲಾ ಮೂರು ಎಕರೆಯಂತೆ 81 ಎಕರೆ ಭೂಮಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಅಂದಿನ ಭೂ ವಿತರಣಾ ಸಲಹಾ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಈ ಭೂಮಿ ವ್ಯವಸಾಯ ಮಾಡಲು ಯೋಗ್ಯವಿಲ್ಲ, ಅಲ್ಲಿ ಕಲ್ಲುಗುಡ್ಡ, ಬೆಟ್ಟಗಳಿದ್ದು ಅಲ್ಲಿ ವ್ಯವಸಾಯ ಮಾಡಲು ಆಗೋದಿಲ್ಲ. ಅದನ್ನು ಅರಣ್ಯ ಬೆಳೆಸಲು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿತ್ತು. ಅದರಂತೆ ಜಿಲ್ಲಾಧಿಕಾರಿಗಳು ತಾಲ್ಲೂಕು ಅಭಿವೃದ್ದಿ ಮಂಡಳಿಗೆ ನಿರ್ದೇಶನ ನೀಡಿ ಆದೇಶಿಸಿದ್ದರು. ಆದರೆ ಈ ಆದೇಶವನ್ನು ಪ್ರಶ್ನಿಸಿ ಭೂ ಮಂಜೂರಾತಿಗೆ ಅರ್ಜಿಸಲ್ಲಿಸಿದ್ದ ಅರ್ಜಿದಾರರು ಎ.ಸಿ. ಅವರಿಗೆ ಮೇಲ್ಮನವಿ ಸಲ್ಲಿಸಿದ್ದರು. ನಂತರ ಎಸಿ ಅವರು ಕೂಡ ಅವರ ಮನವಿಯನ್ನು ತಿರಸ್ಕರಿಸಿದ್ದರು.

ಎಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​ 2011-12 ರಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ 2017ರಲ್ಲಿ ಭೂ ಮಂಜೂರಾತಿ ಕಮಿಟಿಯವರು ಅರ್ಜಿದಾರರಿಗೆ ನೋಟಿಸ್ ನೀಡಿ. ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶ ನೀಡಿತ್ತು. 2017ರಿಂದ ಬಂದಂತ ಯಾವುದೇ ಅಧಿಕಾರಿಗಳು ಈ ಪ್ರಕರಣವನ್ನು ಕೈಗೆತ್ತುಕೊಂಡಿರಲಿಲ್ಲ. 2025 ಅಕ್ಟೋಬರ್​​ನಲ್ಲಿ ಎಸಿ ಅವರು ಏಕಾಏಕಿ ಮಂಜೂರಾತಿ ಆದೇಶವನ್ನು ಮಾಡಿದ್ದಾರೆ. ಆದರೆ ಮಂಜೂರಾತಿ ಮಾಡುವ ವೇಳೆಯಲ್ಲಿ ಮಂಜೂರಾತಿಗೆ ಅರ್ಜಿಸಲ್ಲಿಸಿದ್ದ ಅರ್ಜಿದಾರರಿಗೆ ನೋಟಿಸ್​ ನೀಡಿಲ್ಲ. 44 ವರ್ಷದ ಹಿಂದಿನ ಪ್ರಕರಣವಾಗಿದ್ದ ಹಿನ್ನೆಲೆ ಅವರ ಪ್ರಸ್ತುತ ಪರಿಸ್ಥಿತಿ ಸ್ಥಿತಿಗತಿ, ಎಲ್ಲಿ ವಾಸವಿದ್ದಾರೆ ಅನ್ನೋದರ ಕುರಿತು ವರದಿ ಪಡೆದಿಲ್ಲ. ಅವರ ಹೇಳಿಕೆಗಳನ್ನು ದಾಖಲಿಸದೆ ಏಕಾಏಕಿ ಆದೇಶ ಮಾಡಿದ್ದಾರೆ. ಇದು ಅಕ್ರಮ ಮಂಜೂರಾತಿಗೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಇನ್ನು 44 ವರ್ಷಗಳ ಹಿಂದೆ ಈ ಪ್ರದೇಶ ಬೆಟ್ಟ, ಗುಡ್ಡಗಳಿಂದ ಕೂಡಿದ್ದ ಗೊರಜು ಪ್ರದೇಶವಾಗಿತ್ತು, ಆದರೆ ಈಗ ಅಲ್ಲಿದ್ದ ಬೆಟ್ಟಗುಡ್ಡವನ್ನು ಹೆದ್ದಾರಿ ಕಾಮಗಾರಿಗೆ ಹಾಗೂ ಅಕ್ರಮ ಮಣ್ಣು ಮಾಫಿಯಾ ಮಣ್ಣನ್ನೇ ಲೂಟಿ ಮಾಡಿದ್ದು, ಅಲ್ಲಿದ್ದ ಬೆಟ್ಟವೇ ನಾಪತ್ತೆಯಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಕೂಗಳತೆ ದೂರದಲ್ಲಿದ್ದು, ಸದ್ಯ ಅದು ರಿಯಲ್​ ಎಸ್ಟೇಟ್​ ಉದ್ಯಮಿಗಳ ಕಣ್ಣುಕುಕ್ಕುವ ಸ್ಥಳವಾಗಿ ಮಾರ್ಪಟ್ಟಿದೆ. ಹಾಗಾಗಿ ಇಂದಿಗೆ ಆ ಪ್ರದೇಶದಲ್ಲಿ ಒಂದು ಎಕರೆಗೆ ನಾಲ್ಕರಿಂದ ಐದು ಕೋಟಿ ರೂ ಮಾರುಕಟ್ಟೆ ಬೆಲೆ ಇದ್ದು 81 ಎಕರೆ ಭೂಮಿ ಮಂಜೂರಾತಿ ಹಿಂದೆ ಪ್ರಭಾವಿಗಳು ಹಾಗೂ ರಿಯಲ್ ಎಸ್ಟೇಟ್​ ಉದ್ಯಮಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಆ ಭೂಮಿಯನ್ನು ಪ್ರಸ್ತುತ ಅನುಭೋಗದಲ್ಲಿರುವವರಿಗೆ ಮಂಜೂರು ಮಾಡಬೇಕು. ಇಲ್ಲ ಅದನ್ನು ಸರ್ಕಾರ ವಾಪಸ್​ ಪಡೆಯಬೇಕು. ಅದರ ಜೊತೆಗೆ ಅಕ್ರಮದ ತನಿಖೆ ನಡೆಸಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.

ಇದನ್ನೂ ಓದಿ: ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ

ಒಟ್ಟಾರೆ ಕಾಲ ಬದಲಾದಂತೆ ಅಲ್ಲಿನ ಪರಿಸ್ಥಿತಿಯೂ ಬದಲಾಗುತ್ತದೆ ಎನ್ನುವಂತೆ 44 ವರ್ಷಗಳ ಹಿಂದೆ ಯಾವುದಕ್ಕೂ ಯೋಗ್ಯವಲ್ಲದ ಭೂಮಿಗೆ ಇಂದು ಬಂಗಾರದ ಬೆಲೆ ಬಂದಿದೆ. ತಿರಸ್ಕರವಾಗಿದ್ದ ಭೂಮಿಯನ್ನು ಪಡೆಯಲು ಇಂದು ನೂರಾರು ಕೋಟಿ ರೂ ಅಕ್ರಮ ಮಾಡಲು ಮುಂದಾಗಿರುವುದು ನಿಜಕ್ಕೂ ಆಶ್ಚರ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅಕ್ರಮ ಬಯಲಿಗೆಳೆಯಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us