- TV9 Kannada Photo gallery CWG 2026: Lovpreet Singh Wins Weightlifting Silver, India's Medal Tally Reaches 17
CWG 2026: ಬೆಳ್ಳಿ ಗೆದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಲವ್‌ಪ್ರೀತ್ ಸಿಂಗ್
Commonwealth Games 2026: ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲವ್‌ಪ್ರೀತ್ ಸಿಂಗ್ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 176 ಕೆಜಿ ಸ್ನ್ಯಾಚ್‌ನೊಂದಿಗೆ ಹೊಸ ದಾಖಲೆ ನಿರ್ಮಿಸಿದ ಲವ್‌ಪ್ರೀತ್, 388 ಕೆಜಿ ಎತ್ತಿ ಬೆಳ್ಳಿ ಗಳಿಸಿದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 17ಕ್ಕೇರಿದೆ. ಆದರೆ, ಚಿನ್ನದ ಪದಕಗಳ ಕೊರತೆಯಿಂದ ಭಾರತವು ಪದಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
Updated on: Jul 31, 2026 | 3:38 PM

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 17ಕ್ಕೇರಿದೆ. ಆದಾಗ್ಯೂ ಪದಕಗಳಲ್ಲಿ ಪಟ್ಟಿಯಲ್ಲಿ ಭಾರತ 10ನೇ ಸ್ಥಾನಕ್ಕೆ ಜಾರಿದೆ. ಇದಕ್ಕೆ ಕಾರಣ ಚಿನ್ನದ ಪದಕಗಳ ಸಂಖ್ಯೆ ಕಡಿಮೆ ಇರುವುದು. ಕ್ರೀಡಾಕೂಟದ 8ನೇ ದಿನದಂದು ವೇಟ್‌ಲಿಫ್ಟಿಂಗ್ 110+ ಕೆಜಿ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು(PC-PTI).

ಇದರೊಂದಿಗೆ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟಿಂಗ್ ಪ್ರಯಾಣವು ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಲವ್‌ಪ್ರೀತ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿ 176 ಕೆಜಿ ಸ್ನ್ಯಾಚ್‌ನೊಂದಿಗೆ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ಮುರಿದರು ಮತ್ತು ಒಟ್ಟು 388 ಕೆಜಿ (176 ಕೆಜಿ + 212 ಕೆಜಿ) ತೂಕ ಎತ್ತಿ ಬೆಳ್ಳಿ ಪದಕ ಗೆದ್ದರು(PC-PTI).

ಬೇಸರದ ಸಂಗತಿಯೆಂದರೆ ಚಿನ್ನದ ಪದಕ ಗೆದ್ದ ನ್ಯೂಜಿಲೆಂಡ್‌ನ ಡೇವಿಡ್ ಆಂಡ್ರ್ಯೂ ಲಿಟಿಗಿಂತ ಕೇವಲ ಒಂದು ಕಿಲೋಗ್ರಾಂ ತೂಕವನ್ನು ಕಡಿಮೆ ಎತ್ತಿದರ ಪರಿಣಾಮವಾಗಿ ಲವ್‌ಪ್ರೀತ್ ಚಿನ್ನದ ಪದಕದಿಂದ ವಂಚಿತರಾದರು ಡೇವಿಡ್ ಆಂಡ್ರ್ಯೂ ಒಟ್ಟು 389 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರೆ, ಲವ್‌ಪ್ರೀತ್ ಒಟ್ಟು 388 ಕೆಜಿ ತೂಕ ಎತ್ತಿ ಬೆಳ್ಳಿ ಪದಕ ಗೆದ್ದರು(PC-PTI).

ಭಾರತೀಯ ನೌಕಾಪಡೆಯ ಅಧಿಕಾರಿಯಾಗಿರುವ ಲವ್‌ಪ್ರೀತ್ ಎರಡನೇ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕೊನೆಯ ಬಾರಿಗೆ 2022 ರ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದಿದ್ದ ಇದೇ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದ ಲವ್‌ಪ್ರೀತ್ ಈ ಬಾರಿ ತಮ್ಮ ಪ್ರದರ್ಶನವನ್ನು ಸುಧಾರಿಸುವಲ್ಲಿ ಯಶಸ್ವಿಯಾದರು(PC-PTI).

ಮೂರು ಸ್ನ್ಯಾಚ್ ಪ್ರಯತ್ನಗಳಲ್ಲಿ ಲವ್‌ಪ್ರೀತ್ ಕ್ರಮವಾಗಿ 168, 173 ಮತ್ತು 176 ಕೆಜಿ ತೂಕ ಎತ್ತುವ ಮೂಲಕ ಸ್ನ್ಯಾಚ್‌ನಲ್ಲಿ ಹೊಸ ಕಾಮನ್‌ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ನಿರ್ಮಿಸಿದರು. ನಂತರ ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ 205 ಕೆಜಿ, 212 ಕೆಜಿ ಹಾಗೂ ಕೊನೆಯ ಪ್ರಯತ್ನದಲ್ಲಿ 217 ಕೆಜಿ ಭಾರ ಎತ್ತಲು ಪ್ರಯತ್ನಿಸಿದರಾದರೂ ಅದರಲ್ಲಿ ವಿಫಲರಾದರು(PC-PTI).




