ಕೋಗಿಲು ಲೇಔಟ್: ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ
ಹೈಕಮಾಂಡ್ ಒತ್ತಡಕ್ಕೆ ಸಿಲುಕಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೋಗಿಲು ಲೇಔಟ್ನಲ್ಲಿ ಅಕ್ರಮವಾಗಿ ವಾಸವಿದ್ದ ಜನರಿಗೆ ಮನೆ ಕೊಡಲು ಮುಂದಾಗಿದೆ. ಕಾನೂನಿನ ತೊಡಕು ಇದ್ದರೂ, ಮಾನವೀಯತೆ ಆಧಾರದ ಮೇಲೆ ಮನೆ ಕೊಡಲು ಮುಂದಾಗಿದೆ. ಮನೆ ಕಳೆದುಕೊಂಡವರೆಷ್ಟು ಎಂಬ ಫೈನಲ್ ರಿಪೋರ್ಟ್ ಜಿಬಿಎಗೆ ಸಲ್ಲಿಕೆಯಾಗಿದೆ. ಅತ್ತ ಮನೆ ಕೊಡಲು ವಿರೋಧವೂ ವ್ಯಕ್ತವಾಗ್ತಿದೆ.

ಬೆಂಗಳೂರು, ಜನವರಿ 3: ಕೋಗಿಲು ಲೇಔಟ್ನಲ್ಲಿ (Kogilu Layout) ಒತ್ತುವರಿ ತೆರವು ಸಂಬಂಧ ಮನೆ ಕಳೆದುಕೊಂಡವರಿಗೆ ಸರ್ಕಾರ ಫ್ಲಾಟ್ ನೀಡಲು ಮುಂದಾಗಿದೆ. ಈಗಾಗಲೇ ಲೇಔಟ್ಗೆ ತೆರಳಿ ಮನೆ ಕಳೆದುಕೊಂಡವರ ಮಾಹಿತಿ ಸಂಗ್ರಹಿಸಲಾಗಿದ್ದು, ಕಂದಾಯ ಇಲಾಖೆ ಮತ್ತು ಉತ್ತರ ಪಾಲಿಕೆ ಇಲಾಖೆ ಅಧಿಕಾರಿಗಳೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಅಂತಿಮ ವರದಿ ಸಲ್ಲಿಸಿದ್ದಾರೆ. ಕೋಗಿಲು ಲೇಔಟ್ನ ಒಟ್ಟು ಮೂರು ಕಾಲೋನಿಗಳಲ್ಲಿ ಮನೆ ತೆರವಿಯಿಂದ ಎಷ್ಟು ಜನ ನಿರಾಶ್ರಿತರಾಗಿದ್ದಾರೆ ಅನ್ನೋ ಕುರಿತು ವರದಿ ನೀಡಲಾಗಿದೆ.
ಜಿಬಿಎಗೆ ಸಲ್ಲಿಕೆಯಾಗಿರುವ ವರದಿಯಂತೆ, ಫಕೀರ್ ಕಾಲೋನಿಯ 40 ಮನೆ ತೆರವು ಮಾಡಲಾಗಿದ್ದು, 56 ಮಂದಿ ಮನೆಯ ಮುಖ್ಯಸ್ಥರಿದ್ದು, 96 ವಯಸ್ಕರಿದ್ದಾರೆ. 140 ಮಕ್ಕಳಿದ್ದು, ಒಟ್ಟು 292 ಜನರಿದ್ದಾರೆ. ಇನ್ನು ನ್ಯೂ ಫಕೀರ್ ಲೇಔಟ್ನಲ್ಲಿ ಒಟ್ಟು 45 ಮನೆ ತೆರವು ಮಾಡಲಾಗಿದ್ದು, 50 ಮಂದಿ ಮನೆಯ ಮುಖ್ಯಸ್ಥರಿದ್ದು, ವಯಸ್ಕರು 128, 116 ಮಕ್ಕಳಿದ್ದು, ಒಟ್ಟು 294 ಮಂದಿ ಇದ್ದಾರೆ. ಇನ್ನು ವಸೀಂ ಲೇಔಟ್ನಲ್ಲಿ, 82 ಮನೆ ತೆರವು ಮಾಡಲಾಗಿದ್ದು, ಮನೆ ಮುಖ್ಯಸ್ಥರು 82 ಜನರಿದ್ದಾರೆ. 201 ವಯಸ್ಕರು, 394 ಮಕ್ಕಳಿದ್ದು, ಒಟ್ಟು 394 ಜನರಿದ್ದಾರೆ. ಹೀಗೆ ಮೂರು ಕಾಲೋನಿಯ ಒಟ್ಟು ಒಂದು ಸಾವಿರ ಏಳು ಮಂದಿ ನಿರಾಶ್ರಿತರಾಗಿದ್ದಾರೆ. ಈ ಮೂರು ಲೇಔಟ್ಗಳಲ್ಲಿ 156 ಮುಸ್ಲಿಂ ಸಮುದಾಯದ ಕುಟುಂಬದವರಿದ್ದಾರೆ. 31 ಹಿಂದೂ ಕುಟುಂಬಗಳಿವೆ. ಒಂದು ಕುಟುಂಬ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದೆ.
ಸದ್ಯ ಈ ಕುರಿತು ಮತ್ತೊಂದು ಸುತ್ತಿನ ಪರಿಶೀಲನೆ ನಡೆಯಲಿದ್ದು, ಬಳಿಕ ಜಿಬಿಎ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಈ ಮಧ್ಯೆ ಇಂದು ಕೋಗಿಲು ಲೇಔಟ್ಗೆ ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ ನೀಡುತ್ತಿದೆ.
ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಅರ್ಜಿ ಸಲ್ಲಿಸಿ, ಮನೆ ಸಿಗದೇ ರೋಸಿ ಹೋಗಿದ್ದವರು ಈಗಾಗಲೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅವರು ಶನಿವಾರ ಕೂಡಾ ರಾಜೀವ್ ಗಾಂಧಿ ವಸತಿ ಕಚೇರಿಗೆ ಬಂದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಕನ್ನಡ ಸಂಘಟನೆಗಳು ಒತ್ತುವರಿದಾರರಿಗೆ ಮನೆ ಹಂಚಿಕೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿವೆ. ಸರ್ಕಾರ ನಿರ್ಧಾರ ಬದಲಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿವೆ. ಈ ಮಧ್ಯೆ ಶಾಸಕ ಎಸ್.ಟಿ.ಸೋಮಶೇಖರ್ ಸಹ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದ ನ್ಯಾಯ ಕೊಡಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ ಜಿಲ್ಲಾಡಳಿತ, ಪೊಲೀಸ್
ಇನ್ನು ಕೋಗಿಲು ಲೇಔಟ್ ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಅಕ್ರಮ ಮನೆಗಳ ತೆರವು ಪ್ರಕರಣ ಇಷ್ಟೊಂದು ಗಂಭೀರ ಸ್ವರೂಪ ಪಡೆದಿದ್ದರೂ, ಕಂದಾಯ ಸಚಿವರು ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹೀಗೆಂದು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ‘ಸಚಿವ ಕೃಷ್ಣ ಭೈರೇಗೌಡ ಕಾಣೆಯಾಗಿದ್ದಾರೆ’ ಎಂದು ಪೋಸ್ಟರ್ ಅಭಿಯಾನ ನಡೆಸಿದ್ದಾರೆ.



