ಗದಗ, ಮಾ.1: ಕಳೆದ ಬಾರಿ ಸರಿಯಾಗಿ ಮಳೆ ಬಾರದ ಪರಿಣಾಮ ಕರ್ನಾಟಕದ ಹಲವೆಡೆ ಬರಗಾಲ ಉಂಟಾಗಿದ್ದು, ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಉಂಟಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಇದೀಗ ಶುದ್ಧ ನೀರಿನ ಹರಿಕಾರ ಎಚ್ ಕೆ ಪಾಟೀಲ್ (HK Patil) ತವರು ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ (Drinking Water) ಹಾಹಾಕಾರ ಶುರುವಾಗಿದೆ. ಗದಗ ತಾಲೂಕಿನ ಮುಳಗುಂದ ಪಟ್ಟಣದ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರು ಗೋಳಾಡುತ್ತಿದ್ದಾರೆ.
ಮುಳಗುಂದ ಪಟ್ಟಣದ ಹಲವು ಪ್ರದೇಶಗಳಲ್ಲಿ ಬರಗಾಲ ಉಂಟಾಗಿದ್ದು, ಕುಡಿಯಲು ನೀರು ಸಿಗದ ಹಿನ್ನೆಲೆ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಫ್ಲೋರೈಡಯುಕ್ತ ನೀರು ಕುಡಿಯುವ ಕೆಟ್ಟ ಸ್ಥಿತಿ ಬಂದಿದೆ. ಮಂಡಿ ನೋವಿನಿಂದ ಜನರು ನರಳಾಡುತ್ತಿದ್ದೇವೆ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Drinking Water Problem: ಯಶವಂತಪುರದಲ್ಲಿ ಕುಡಿಯುವ ನೀರಿಗೆ ತತ್ವಾರ: ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಾಹಾಕಾರ
ನಮ್ಮ ಶಾಸಕ ಎಚ್ ಕೆ ಪಾಟೀಲ್ ನಮ್ಮ ಸಮಸ್ಯೆಯೇ ಕೇಳಲಿಲ್ಲ. ಅವರ ಮುಖವೇ ನೋಡಿಲ್ಲ. ಪೋಸ್ಟರ್, ಟಿವಿಯಲ್ಲಿ ಮಾತ್ರ ನೋಡಿದ್ದೇವೆ. ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಬರುತ್ತಾರೆ. ಆದರೆ ಸಮಸ್ಯೆ ಯಾರೂ ಕೇಳುತ್ತಿಲ್ಲ ಅಂತ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
10-15 ದಿನಕ್ಕೊಮ್ಮ ನೀರು ಬರುತ್ತದೆ. ಅದು ಸವಳು ನೀರಾಗಿದ್ದು, ಕುಡಿಯಲು ಯೋಗ್ಯವಿಲ್ಲ. ಇಂಥ ನೀರು ಕುಡಿದು ಹೊಟ್ಟೆ ನೋವು, ಮಂಡಿ ನೋವಿನಿಂದ ಒದ್ದಾಡುತ್ತಿದ್ದೇವೆ. ಕ್ಷೇತ್ರದ ಜನರು ಕುಡಿಯುವ ನೀರಿಗಾಗಿ ಗೋಳಾಡುತ್ತಾ ಇದ್ದರೂ ಶಾಸಕರು, ಸ್ಥಳೀಯ ನಾಯಕರು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ