ಕ್ವಿಂಟಲ್​ಗೆ 70, 199 ರೂಪಾಯಿ ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ, ಹೊಸ ವರ್ಷಕ್ಕೆ ಬಂಪರ್ ಬೆಳೆ ಮಾರಾಟ ಮಾಡಿದ ರೈತ

| Updated By: ಆಯೇಷಾ ಬಾನು

Updated on: Jan 03, 2023 | 9:40 AM

ಗದಗದ ರೈತ ಶರಣಪ್ಪ ಶನಿವಾರ(ಡಿ.31) ಪ್ರತಿ ಕ್ವಿಂಟಲ್ ಮೆಣಸಿನಕಾಯಿಗೆ ದಾಖಲೆಯ ಬೆಲೆ 70,199 ರೂ ಮಾರಾಟ ಮಾಡಿದ್ದಾರೆ.

ಕ್ವಿಂಟಲ್​ಗೆ 70, 199 ರೂಪಾಯಿ ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ, ಹೊಸ ವರ್ಷಕ್ಕೆ ಬಂಪರ್ ಬೆಳೆ ಮಾರಾಟ ಮಾಡಿದ ರೈತ
Follow us on

ಗದಗ: ಈ ವರ್ಷ ರಾಜ್ಯದಲ್ಲಿ ಮಳೆ, ನೆರೆ ಉಂಟಾಗಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತ ಪರಿಸ್ಥಿತಿ ಎದುರಾಗಿತ್ತು. ಉತ್ತಮ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕಿಡಾಗಿದ್ದರು. ಸದ್ಯ ಗದಗದಲ್ಲಿ ರೈತನೋರ್ವನಿಗೆ ಅದೃಷ್ಟ ಲಕ್ಷ್ಮಿಯೇ ಹುಡುಕಿಕೊಂಡು ಬಂದಿದ್ದಾಳೆ. ಗದಗದ ಕೋಟಮಚಗಿಯ ರೈತ ಶರಣಪ್ಪ ಜಗ್ಗಲ್(Sharanappa Jaggal) ಎಂಬುವವರು ಮೆಣಸಿನಕಾಯಿಯನ್ನು(Red Chilli) ದಾಖಲೆ ಬೆಲೆಗೆ ಮಾರಾಟ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಶರಣಪ್ಪ ಅವರು ಕ್ವಿಂಟಲ್​ಗೆ 70, 199 ರೂಪಾಯಿ ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿಯನ್ನು ಮಾರಾಟ ಮಾಡಿದ್ದಾರೆ.

ಗದಗದ ರೈತ ಶರಣಪ್ಪ ಶನಿವಾರ(ಡಿ.31) ಪ್ರತಿ ಕ್ವಿಂಟಲ್ ಮೆಣಸಿನಕಾಯಿಗೆ ದಾಖಲೆಯ ಬೆಲೆ 70,199 ರೂ ಮಾರಾಟ ಮಾಡಿದ್ದಾರೆ. ಶರಣಪ್ಪನವರು 4 ಎಕರೆ ಜಾಗದಲ್ಲಿ ಮೆಣಸಿನಕಾಯಿಯನ್ನು ಬೆಳೆದಿದ್ದು ಈಗಾಗಲೇ ಸುಮಾರು 1ಲಕ್ಷ ರೂಪಾಯಿಯ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ. ಶರಣಪ್ಪ ಅವರು ಕಾಶ್ಮೀರ ಡಬ್ಬಿ ತಳಿಯ ಮೆಣಸಿನ ಬೀಜ ಬಿತ್ತನೆ ಮಾಡಿ ದಾಖಲೆ ಬೆಲೆ ಕಂಡಿದ್ದಾರೆ. ಇವರು ಬೆಲೆ ಬೆಳೆಸಲು ಹಸುವಿನ ಸಗಣಿಯನ್ನು ಗೊಬ್ಬರವಾಗಿ ಬಳಸುತ್ತಿದ್ದರಂತೆ. ಇನ್ನು ತಾವು ಬೆಳೆದ ಮೆಣಸಿನಕಾಯಿಯನ್ನು ಸ್ಟಾಕ್ ಇಟ್ಟಿರುವ ಶರಣಪ್ಪ ಇನ್ನಷ್ಟು ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಕಾಶ್ಮೀರ ಡಬ್ಬಿ ತಳಿಯ ಮೆಣಸಿನಕಾಯಿಗೆ ಭಾರೀ ಡಿಮ್ಯಾಂಡ್

ಸಾಮಾನ್ಯವಾಗಿ, ಮೆಣಸಿನಕಾಯಿ ಬೆಲೆಯು ಅದರ ಗುಣಮಟ್ಟವನ್ನು ಅವಲಂಬಿಸಿ ಕ್ವಿಂಟಲ್‌ಗೆ 35,000-50,000 ರೂ ಎಂದು ನಿಗದಿ ಮಾಡಿ ನೀಡಲಾಗುತ್ತದೆ. ಆದ್ರೆ ಶರಣಪ್ಪನವರು ಬೆಳೆದ ಮೆಣಸಿನಕಾಯಿಯ ಈ ತಳಿಯು ದಪ್ಪ, ಉದ್ದ ಮತ್ತು ಎಣ್ಣೆಯ ಅಂಶವನ್ನು ಹೊಂದಿದ್ದು ದಾಖಲೆ ಪ್ರಮಾಣದ ಬೆಲೆಯಲ್ಲಿ ಮಾರಾಟವಾಗಿದೆ. ಇದನ್ನು ಮುಖ್ಯವಾಗಿ ಮೆಣಸಿನ ಪುಡಿ ಮಾಡಲು ಬಳಸಲಾಗುತ್ತದೆ. ಗದಗ, ಹುಬ್ಬಳ್ಳಿ ಮತ್ತು ಹಾವೇರಿಯ ಏಜೆಂಟ್‌ಗಳು ಇದನ್ನು ಉತ್ತಮ ಬೆಲೆ ನೀಡಿ ಇತರ ರಾಜ್ಯಗಳಿಂದ ಖರೀದಿಸುತ್ತಾರೆ.

ಈ ಹಿಂದೆ 2020ರಲ್ಲಿ ರೈತರೊಬ್ಬರು ಕ್ವಿಂಟಲ್ ಮೆಣಸಿನಕಾಯಿಗೆ 41,101 ರೂ.ಗೆ ಮಾರಾಟ ಮಾಡಿದ್ದರು. ನವೆಂಬರ್ 2022ರಲ್ಲಿ ಮಾರುಕಟ್ಟೆ ಬೆಲೆ 45,000 ಆಗಿತ್ತು ಎಂದು ರೈತರು ತಿಳಿಸಿದ್ದಾರೆ. ಶರಣಪ್ಪ ಅವರ ಮೆಣಸಿನಕಾಯಿಯನ್ನು ಅಂಗಡಿ ಮಾಲೀಕ ಅಶೋಕ ಗಡಾದ್ ಅವರು ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಖರೀದಿಸಿದರು. ಕಳೆದ ವಾರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಶರಣಪ್ಪನವರು ಇದೇ ಮೆಣಸಿನಕಾಯಿಯನ್ನು ಕ್ವಿಂಟಲ್ ಗೆ 59 ಸಾವಿರ ರೂಗೆ ಮಾರಾಟ ಮಾಡಿದ್ದರು. ಈ ಬೆಳೆಯನ್ನು ಗಮನಿಸಿದ್ದ ಗಡಾದ್ ಅವರು ಮೆಣಸಿನಕಾಯಿಯನ್ನು ನೋಡಿ ಉತ್ತಮ ಬೆಲೆಯನ್ನು ನೀಡಿ ಖರೀದಿಸಿದ್ದಾರೆ.

ಕಳೆದ ವರ್ಷ ಎಡೆಬಿಡದೆ ಸುರಿದ ಮಳೆಯಿಂದಾಗಿ ಬಹುತೇಕ ಮೆಣಸಿನಕಾಯಿ ಬೆಳೆ ನಾಶವಾಗಿ ಬೆಲೆ ಏರಿಕೆಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಈ ಹಣವನ್ನು ನನ್ನ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ನಿರ್ಧರಿಸಿದ್ದೇನೆ ಎಂದು ಶರಣಪ್ಪ ಜಗ್ಗಲ್ ತಿಳಿಸಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಹೊಸ ವರ್ಷದ ಉಡುಗೊರೆಯಾಗಿದೆ. ಈ ವಿಶೇಷ ಮೆಣಸಿನಕಾಯಿಯನ್ನು ಬೆಳೆಯಲು ನಮಗೆ ಸಹಾಯ ಮಾಡಿದ ಮತ್ತು ನಮಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ನಮ್ಮ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ