ಗದಗ ನ.27: ಹಬ್ಬ-ಹರಿದಿಗಳು ಬಂದರೇ ಹೂವುಗಳಿಗೆ ಬಂಪರ್ ಬೆಲೆ. ಹೀಗಾಗಿ ರೈತರು ಹೂವು (Flower) ಬೆಳೆದು ಬಾದುಕು ಬಂಗಾರ ಮಾಡಿಕೊಳ್ಳಬೇಕು ಅಂತ ಕನಸು ಕಂಡಿದ್ದರು. ಆದರೆ ರೈತರ ಕನಸು ಅಕ್ಷರಶಃ ನುಚ್ಚು ನೂರಾಗಿದೆ. ಶ್ರಾವಣ ಮಾಸದಿಂದ ದೀಪಾವಳಿ (Deepavali) ಹಬ್ಬದವರೆಗೂ ಪಾತಾಳಕ್ಕೆ ಕುಸಿದ ಹೂವಿನ ಬೆಲೆ ಮತ್ತೆ ಮೇಲೆ ಎದ್ದಿಲ್ಲ. ಗೌರಿ ಹುಣ್ಣಿಮೆ ಬಂದರೂ ಉತ್ತಮ ಬೆಲೆ ಸಿಗದೆ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ಕ್ವಿಂಟಾಲ್ಗಟ್ಟಲೇ ಹೂವು ತಂದರೂ ಲಾಭವಿಲ್ಲದೆ ರೈತರು ರಸ್ತೆಗೆ ಹೂವು ಚೆಲ್ಲಿ ಸಪ್ಪೆ ಮುಖ ಮಾಡಿಕೊಂಡು ಊರಿಗೆ ವಾಪಸ್ ಆಗಿದ್ದಾರೆ.
ಇಂದು (ನ.27) ಗೌರಿ ಹುಣ್ಣಿಮೆ. ಹೀಗಾಗಿ ಜನರು ಪೂಜೆಗೆ ಹೂವು ಖರೀದಿ ಮಾಡುತ್ತಾರೆ. ಇವತ್ತಾದರೂ ಒಳ್ಳೆಯ ಬೆಲೆ ಸಿಗುತ್ತೆ ಅಂತ ಹೂವು ಬೆಳೆಗಾರರು ನಸುಕಿನಲ್ಲೇ ಹೂವು ಕಟಾವು ಮಾಡಿ ಎಪಿಎಂಸಿ ಯಾರ್ಡ್ ಹೂವಿನ ಮಾರುಕಟ್ಟೆಗೆ ಬಂದಿದ್ದರು. ಗದಗ ತಾಲೂಕಿನ ಲಕ್ಕುಂಡಿ, ಎಲಿಶಿರುಂಜ್, ಶಿರುಂಜ್, ನಾಗಾವಿ, ಸಂಭಾಪೂರ, ಪಾಪನಾಶಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ರೈತರು ವಿವಿಧ ತರಹದ ಅಪಾರ ಹೂವನ್ನು ಮಾರುಕಟ್ಟೆಗೆ ತಂದಿದ್ದರು. ಹೂವು ಕಟಾವು, ಸಾರಿಗೆ ವೆಚ್ಚ ಸೇರಿ ಮಾರುಕಟ್ಟೆಗೆ ಹೂವು ತರಲು ಸಾವಿರಾರು ರೂಪಾಯಿ ಖರ್ಚಾಗಿತ್ತು.
ಸಾವಿರಾರು ರೂಪಾಯಿ ಖರ್ಚು ಮಾಡಿ ಮಾರುಕಟ್ಟೆಗೆ ಹೂವು ತಂದ ರೈತರಿಗೆ ನೈಯಾಪೈಸೆ ಲಾಭ ಸಿಗದೆ ಖಾಲಿ ಕೈಯಿಂದ ಸಪ್ಪೆ ಮುಖಮಾಡಿಕೊಂಡು ಊರಿಗೆ ಹೋಗಿದ್ದಾರೆ. ಕೆಲ ರೈತರು ಊರಿಗೆ ಹೋಗಲು ಹಣ ಇಲ್ಲದೇ ಒದ್ದಾಡಿದ್ದಾರೆ. “ದಲ್ಲಾಲಿಗಳು ಹಣ ಕೊಟ್ಟರೇ ಬಸ್ಗೆ ಹೋಗುತ್ತೇವೆ ಇಲ್ಲವಾದರೇ ನಡೆದುಕೊಂಡು ಊರಿಗೆ ಹೋಗುತ್ತೇವೆ ಅಂತ ರೈತರು ಗೋಳಾಡಿದ್ದಾರೆ. ಒಂದು ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ರೈತರಿಗೆ ಲಾಭ ಸಿಗುತ್ತಿಲ್ಲ. ಹೀಗಾದರೇ ನಮ್ಮ ಬದುಕು ಹೇಗೆ” ಎಂದು ರೈತ ಶಂಕರಲಿಂಗ ಗೋಳಾಡುತ್ತಿದ್ದಾರೆ.
ಇದನ್ನೂ ಓದಿ: ಗದಗ: ದೀಪಾವಳಿ ಹಬ್ಬಕ್ಕೆಂದು ಬೆಳೆದ ಹೂವು; ಗಾಳಿ, ಮಳೆಗೆ ಸಂಪೂರ್ಣ ನಾಶ
ಕಳೆದು ವರ್ಷ ಶ್ರಾವಣ ಮಾಸದಿಂದ ದೀಪಾವಳಿ ಹಬ್ಬದವರೆಗೆ ಕೆಜಿ ಸೇವಂತಿಗೆ ಹೂವು 200-250 ರೂಪಾಯಿ, ಚೆಂಡೂ ಹೂವು ಕೆಜಿಗೆ 100-150 ರೂಪಾಯಿಗೆ ಮಾರಾಟ ಆಗಿತ್ತು. ಕಳೆದ ವರ್ಷ ಹೂವು ಬೆಳೆಗಾರರು ಭರ್ಜರಿ ಲಾಭ ಮಾಡಿಕೊಂಡಿದ್ದರು. ಆದರೆ ಈ ವರ್ಷ ಕಳೆದ ಐದು ತಿಂಗಳಿಂದ ಹೂವಿನ ದರ ಪಾತಾಳಕ್ಕೆ ಕುಸಿದಿದೆ. ಇವತ್ತು ಕೂಡ ಗದಗ ಹೂವಿನ ಮಾರುಕಟ್ಟೆಗೆ ವಿವಿಧ ನಮೂನೆಯ ನೂರಾರು ಕ್ವಿಂಟಾಲ್ ಹೂವು ರೈತರು ತಂದಿದ್ದರು. ಅದರೆ ಗ್ರಾಹಕರು ಇಲ್ಲದೇ ಅಪಾರ ಪ್ರಮಾಣದ ಹೂವು ಉಳಿದಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹೂವು ತಂದಿದ್ದ ರೈತರು ಬರಿಗೈಯಲ್ಲಿ ಊರಿಗೆ ವಾಪಸ್ಸಾಗಿದ್ದಾರೆ. ಇನ್ನೂ ಕೆಲ ರೈತರು ಅಪಾರ ಹೂವು ಮಾರಾಟ ಆಗದ ಕಾರಣ ಮಾರುಕಟ್ಟೆಯಲ್ಲೇ ಹೂವು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಒಳ್ಳೆಯ ಬೆಲೆ ಸಿಗುತ್ತೆ ಅಂತ ಬಂದಿದ್ದೇವೆ ಸರ್, ಆದರೆ, 5-10ರೂಪಾಯಿಗೆ ಕೆಜಿ ಕೊಟ್ರು ಖರೀದಿ ಮಾಡ್ತಾಯಿಲ್ಲ. ಕೆಲ ರೈತರು ಫ್ರೀ ತೆಗೆದುಕೊಂಡು ಹೋಗಿ ಅಂದರೂ ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ರಸ್ತೆಗೆ ಚೆಲ್ಲಿ ಹೋಗುವಂತ ಸ್ಥಿತಿ ಬಂದಿದೆ. ಲಕ್ಷಾಂತರ ಖರ್ಚು ಮಾಡಿ ಬೆಳೆದ ರೈತರ ಬದುಕು ಹೀಗಾದರೇ ಹೇಗೆ? ತೋಟಗಾರಿಕೆ ಇಲಾಖೆ ನಮ್ಮ ಹೂವಿಗೆ ಬೆಂಬಲ ಬೆಲೆ ನೀಡಬೇಕು. ಇಲ್ಲವೇ ಸರಿಯಾದ ಮಾರುಕಟ್ಟೆಯ ವ್ಯವಸ್ಥೆಯಾದರೂ ಮಾಡಬೇಕು” ಎಂದು ರೈತ ಸಿದ್ದಪ್ಪ ಒತ್ತಾಯಿಸಿದ್ದಾರೆ.
ಹೆಚ್ಚಿನ ಬೆಲೆಗೆ ಮಾರಾಟವಾಗಬೇಕಿದ್ದ ಸಮಯದಲ್ಲೇ ದರ ಪಾತಾಳಕ್ಕೆ ಕುಸಿದಿದೆ. ಯಾಕೇ ಅನ್ನೋದು ರೈತರಿಗೆ ತಿಳಿಯುತ್ತಿಲ್ಲ. ಬೇರೆ ಕಡೆ ಕಳಿಸಬೇಕು ಅಂದರೇ, ಅಲ್ಲು ಬೇಡಿಕೆ ಇಲ್ಲ. ಇದಕ್ಕೆಲ್ಲಾ ಬರಗಾಲವೇ ಕಾರಣ ಅಂತ ರೈತರು ಹೇಳಿದ್ದಾರೆ. ಒಂದೆಡೆ ಬರ ರೈತರ ಜೀವ ಹಿಂಡಿದರೇ. ಮತ್ತೊಂದೆಡೆ ಅಷ್ಟೊಇಷ್ಟು ನೀರಾವರಿ ಮಾಡಿ ಬೆಳೆದ ಬೆಳೆಗೆ ಬೆಲೆ ಸಿಗದೇ ರೈತರು ಒದ್ದಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ನಷ್ಟದಲ್ಲಿ ಇರುವ ಹೂವಿನ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಸಂಕಷ್ಟದಲ್ಲಿ ಸಿಲುಕಿರುವ ರೈತರ ನೆರವಿಗೆ ಬರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ