ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ದುರಂತ: ಗಾಯಗೊಂಡಿದ್ದ ಮೂವರು ಸಾವು, ಅನಾಥವಾದ ಹಸುಗೂಸು

| Updated By: Rakesh Nayak Manchi

Updated on: Feb 05, 2023 | 2:41 PM

ಜ.26ರಂದು ಮುಳಗುಂದದ ಚಿಂದಿಪೇಟಿ ಓಣಿಯಲ್ಲಿ ಅನಿಲ ಸೋರಿಕೆಯಾಗಿ ಅಗ್ನಿ ದುರಂತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇಂದು ಅವರು ಮೃತಪಟ್ಟಿದ್ದಾರೆ.

ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ದುರಂತ: ಗಾಯಗೊಂಡಿದ್ದ ಮೂವರು ಸಾವು, ಅನಾಥವಾದ ಹಸುಗೂಸು
ಸಾಂದರ್ಭಿಕ ಚಿತ್ರ
Follow us on

ಗದಗ: ಮುಳಗುಂದದ ಚಿಂದಿಪೇಟಿ ಓಣಿಯಲ್ಲಿ ನಡೆದಿದ್ದ ಅಡುಗೆ ಅನಿಲ ಸೋರಿಕೆ (Gas leak) ದುರಂತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮೂವರು ನಿನ್ನೆ (ಫೆಬ್ರವರಿ 4) ಕೊನೆಯುಸಿರೆಳೆದಿದ್ದಾರೆ. ಜ.26ರಂದು ಗದಗ (Gadag) ತಾಲೂಕಿನ ಮುಳಗುಂದದ ಚಿಂದಿಪೇಟಿ ಓಣಿಯಲ್ಲಿ ಜನವರಿ 26 ರಂದು ರಾತ್ರಿ ಈ ದುರ್ಘಟನೆ ಸಂಭವಿಸಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಸವಣ್ಣೆಪ್ಪ ಹಡಪದ, ಬಾಲಕ ಆದರ್ಶ ಮತ್ತು ಆತನ ತಾಯಿ ಬಾಣಂತಿ ಯಶೋಧಾ ಬೆಂತೂರ ಮೃತಪಟ್ಟಿದ್ದಾರೆ. ಯಶೋಧಾಗೆ ಮೂರು ತಿಂಗಳ ಮಗು ಇದೆ. ಇದೀಗ ಆ ಮಗು ತಾಯಿ ಇಲ್ಲದ ತಬ್ಬಲಿಯಾಗಿದ್ದು, ತಾಯಿಗಾಗಿ ಹಂಬಲಿಸುತ್ತಿದೆ. ಇದನ್ನು ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬಸವಣ್ಣೆಪ್ಪ ಹಡಪದ ಅವರ ಮನೆಯಲ್ಲಿ ಅಡುಗೆ ಸಿಲಿಂಡರ್ ಸೋರಿಕೆಯಾಗುತ್ತಿತ್ತು. ಈ ಬಗ್ಗೆ ವಾಸನೆ ತಿಳಿದ ಯಶೋಧ ತನ್ನ ಮಗ ಆದರ್ಶನ ಜೊತೆ ಬಸವಣ್ಣೆಪ್ಪ ಅವರ ಮನೆಗೆ ಹೋಗಿದ್ದಾರೆ. ಈ ವೇಳೆ ಸಿಲಿಡಂರ್ ಸ್ಫೋಟಗೊಂಡು ಹತ್ತಿಕೊಂಡ ಬೆಂಕಿ ಇಡೀ ಮನೆಯನ್ನು ಆವರಿಸಿದೆ. ಸ್ಪೋಟದ ತೀವ್ರತೆಗೆ ಮನೆ ಚಾವಣಿ ಹಾನಿಯಾಗಿದೆ. ಘಟನೆ ವೇಳೆ ಮನೆಯಲ್ಲಿದ್ದ ಬಸವಣ್ಣೆಪ್ಪ ಮತ್ತು ಗ್ಯಾಸ್ ಲೀಕ್ ಬಗ್ಗೆ ತಿಳಿಸಲು ಹೋಗಿದ್ದ ಯಶೋಧ ಹಾಗೂ ಮಗ ಆದರ್ಶ ಗಂಭೀರವಾಗಿ ಗಾಯಗೊಂಡಿದ್ದರು. ಮೈ ಚರ್ಮವೆಲ್ಲ ಬೆಂದು ಹೋಗಿದ್ದವು. ಇತ್ತ ಹಸುಗೂಸು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದೆ.

ಇದನ್ನೂ ಓದಿ: 2021ರಲ್ಲಿ ಕನಕಪುರದಲ್ಲಿ ನಡೆದ ಸ್ಫೋಟ ಪ್ರಕರಣ: ಇಬ್ಬರು ಅಂಗಡಿ ಮಾಲೀಕರು ದೋಷ ಮುಕ್ತ

ಕೂಡಲೇ ಕುಟುಂಬಸ್ಥರು, ಸ್ಥಳೀಯರು ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅದರಂತೆ ಒಂದು ವಾರ ಸಾವು ಬದುಕಿನ ನಡುವೆ ತೀವ್ರ ಹೋರಾಟ ನಡೆಸಿದ ಮೂವರು ವಿಧಿಯಾಟಕ್ಕೆ ಉಸಿರು ಚೆಲ್ಲಿದರು. ಇತ್ತ ತಾಯಿ ಕಳೆದುಕೊಂಡು ಅನಾಥವಾದ ಮೂರು ತಿಂಗಳ ಹಸುಗೂಸು ತಾಯಿಗಾಗಿ ಹಂಬಲಿಸುತ್ತಿದೆ. ಇದನ್ನು ನೋಡಿ ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Sun, 5 February 23