ಗದಗ, ಏಪ್ರಿಲ್ 27: ಇಡೀ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ (Karnataka Drought) ಉಂಟಾಗಿದೆ. ನದಿ, ಹಳ್ಳ ಕೊಳ್ಳಗಳು ಬತ್ತಿ ಹೋಗಿವೆ. ಹನಿ ಹನಿ ನೀರಿಗಾಗಿ ಜನರು ಪರದಾಟ (Water Problem) ಮಾಡುತ್ತಿದ್ದಾರೆ. ಕುಡಿಯುವ ನೀರು ಕೂಡ ಸಿಗದ ಪರಿಸ್ಥಿತಿ ಇದೆ. ಕೃಷಿಗೆ ನೀರು ಸಿಗುವುದಂತೂ ಕನಸಿನ ಮಾತಾಗಿದೆ. ಆದರೆ, ಗದಗದ (Gadag) ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಜೀವ ಜಲ ಸಮೃದ್ಧವಾಗಿದೆ! ಅನ್ನದಾತರು ಬಿರು ಬಿಸಿಲಿನಲ್ಲಿ ಕೂಡ ಭೂಮಿಯನ್ನು ಹಸಿರು ಮಾಡುತ್ತಿದ್ದಾರೆ.
ಬಿರು ಬೇಸಿಗೆಯಲ್ಲೂ ಐತಿಹಾಸಿಕ ಗ್ರಾಮದ ಕೆರೆ ನೀರಿನಿಂದ ಕಂಗೊಳಿಸುತ್ತಿದೆ. ಪುಷ್ಕರಣಿ ಹಾಗೂ ಬಾವಿಯಲ್ಲಿ ಭರಪೂರ ನೀರು ಇದೆ. ಬಾವಿಯ ನೀರಿನಿಂದಲೇ ರೈತರು ನೀರಾವರಿ ಮಾಡುತ್ತಾ ಇದ್ದಾರೆ. ಬಿರು ಬಿಸಿಲಿನಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಳೆಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 101 ಬಾವಿ ಹಾಗೂ 101 ದೇವಸ್ಥಾನಗಳಿವೆ ಎಂಬ ಪ್ರತೀತಿ ಇದೆ. ಗ್ರಾಮದಲ್ಲಿ ಹೆಜ್ಜೆ ಹೆಜ್ಜೆಗೂ ಒಂದೊಂದು ಪುಷ್ಕರಣಿ ನೋಡಲು ಸಿಗುತ್ತದೆ. ಪುಷ್ಕರಣಿ ಹಾಗೂ ರೈತರ ಬಾವಿಯಲ್ಲಿ ಸದಾಕಾಲ ನೀರು ಇರುತ್ತದೆ. ಈ ಬಾರಿ ಭೀಕರ ಬರಗಾಲಕ್ಕೆ ರಾಜ್ಯದೆಲ್ಲಡೆ ಕೆರೆ, ಬಾವಿಗಳು ಬತ್ತಿ ಹೋಗಿದ್ದರೂ ಈ ಗ್ರಾಮದಲ್ಲಿ ದೊಡ್ಡ ಕೆರೆ ಕೂಡಾ ಸಂಪೂರ್ಣವಾಗಿ ಭರ್ತಿಯಾಗಿದೆ. ಹೀಗಾಗಿ ಈ ಗ್ರಾಮದಲ್ಲಿ ಅಂತರಗಂಗೆ ಸಮೃದ್ಧವಾಗಿದ್ದಾಳೆ. ತುಂಬಿದ ಬಾವಿಗೆ ಪಂಪ್ ಸೈಟ್ ಅಳವಡಿಕೆ ಮಾಡಿಕೊಂಡು ರೈತರು ಜಮೀನುಗಳಿಗೆ ನೀರು ಹರಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಇಂತಹ ಬಿರು ಬಿಸಿಲಿನಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಹಚ್ಚ ಹಸಿರಿನಿಂದ ಬೆಳೆಗಳು ಕಂಗೊಳಿಸುತ್ತಿವೆ. ನಮ್ಮ ಪೂರ್ವರು ಮಾಡಿದ ಪುಣ್ಯ ನಮಗೆ ನೀರಿನ ಸಮಸ್ಯೆ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಜಿಲ್ಲೆಯ ತುಂಗಭದ್ರಾ ನದಿಯೂ ಸಂಪೂರ್ಣ ಬತ್ತಿ ಹೋಗಿದೆ. ಅಷ್ಟೊ ಇಷ್ಟೋ ನೀರು ಇದ್ದರೂ ಕುಡಿಯಲು ಮಾತ್ರ ಉಪಯೋಗ ಮಾಡುವಂತೆ ಈಗಾಲೇ ಜಿಲ್ಲಾಡಳಿತ ಆದೇಶ ನೀಡಿದೆ. ನದಿಗಳಿಗೆ ಪೈಪ್ ಸೈಟ್ ಅಳವಡಿಕೆ ಮಾಡಿ ನೀರು ತೆಗೆದುಕೊಂಡರೆ ಕಾನೂನು ಕ್ರಮ ಕೈಗೊಳುತ್ತಿವೆ ಜಿಲ್ಲಾಡಳಿತಗಳು. ಅಷ್ಟೊಂದು ನೀರಿನ ಸಮಸ್ಯೆ ತಲೆದೋರಿದೆ. ರೈತರು ಬೆಳೆದ ಬೆಳೆಗಳು ಕೂಡಾ ಒಣಗಿ ಹೋಗುತ್ತಿವೆ. ಆದರೆ, ಲಕ್ಕುಂಡಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲವೇ ಇಲ್ಲ. ಕುಡಿಯುವ ನೀರು ಕೂಡಾ ಸಮರ್ಪಕವಾಗಿ ಬಿಡಲಾಗುತ್ತಿದೆ. ಹೀಗಾಗಿ ಬೋರವೇಲ್ ಹಾಗೂ ಬಾವಿಗಳ ನೀರಿನಿಂದ ಅನ್ನದಾತರು ಕೃಷಿ ಮಾಡುತ್ತಿದ್ದಾರೆ.
ಚಾಣಕ್ಯರು ಹಾಗೂ ಹೊಯ್ಸಳರ ಕಾಲದಲ್ಲಿ ಈ ಗ್ರಾಮದಲ್ಲಿ 101 ಬಾವಿ ಹಾಗೂ 101 ದೇವಸ್ಥಾನಗಳು ನಿರ್ಮಾಣವಾಗಿವೆ. ಎಲ್ಲಾ ದೇವಸ್ಥಾನಗಳ ಮುಂದೆ ಪುಷ್ಕರಣಿಗಳಿವೆ. ಇವುಗಳಲ್ಲಿ ಸದಾ ಕಾಲ ಜೀವಜಲ ಇರುತ್ತದೆ. ಇಂತಹ ಬಿಸಿಲಿನಲ್ಲಿ ನಮ್ಮ ಅಕ್ಕಪಕ್ಕದ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಆದರೆ ನಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ಲಾಲ್ ಬಾಗ್ನಲ್ಲಿ ನೀರಿಲ್ಲದೆ ಒಣಗುತ್ತಿವೆ ಗಿಡಗಳು: ತೋಟಗಾರಿಕೆ ಇಲಾಖೆಗೂ ತಟ್ಟಿದ ನೀರಿನ ಬಿಕ್ಕಟ್ಟಿನ ಬಿಸಿ
ಗದಗ ಬೆಟಗೇರಿ ಅವಳಿ ನಗರಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಈ ಮಧ್ಯೆ, ಲಕ್ಕುಂಡಿ ಗ್ರಾಮ ಭಿನ್ನವಾಗಿದ್ದು, ಗಮನ ಸೆಳೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ