ಲಾಲ್ ಬಾಗ್ನಲ್ಲಿ ನೀರಿಲ್ಲದೆ ಒಣಗುತ್ತಿವೆ ಗಿಡಗಳು: ತೋಟಗಾರಿಕೆ ಇಲಾಖೆಗೂ ತಟ್ಟಿದ ನೀರಿನ ಬಿಕ್ಕಟ್ಟಿನ ಬಿಸಿ
ಬೆಂಗಳೂರಿನಲ್ಲಿ ಈ ವರ್ಷ ನೀರಿನ ಬಿಕ್ಕಟ್ಟು ತೀವ್ರವಾಗಿದೆ. ಇದೀಗ ಇದರ ಬಿಸಿ ತೋಟಗಾರಿಕೆ ಇಲಾಖೆಗೂ ತಟ್ಟಿದೆ. ಇಲಾಖೆ ವ್ಯಾಪ್ತಿಯ ಲಾಲ್ ಬಾಗ್ ಉದ್ಯಾನದಲ್ಲಿ ಗಿಡಗಳಿಗೆ ಹಾಕಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಸ್ಯ ಕಾಶಿ ನೀರಿಲ್ಲದೆ ಸೊರಗುತ್ತಿದೆ, ಒಣಗುತ್ತಿದೆ. ಜಲ ಮಂಡಳಿ ಜತೆ ಇಲಾಖೆ ಸಮಾಲೋಚನೆ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಬೆಂಗಳೂರು, ಏಪ್ರಿಲ್ 18: ಬಿಸಿಲಿನ ಅಬ್ಬರಕ್ಕೆ ಬೆಂಗಳೂರಿನ (Bengaluru) ಜನರು ಒಂದು ಕಡೆ ನಲುಗುತ್ತಿದ್ದರೆ, ಮತ್ತೊಂದೆಡೆ ನೀರಿನ ಸಮಸ್ಯೆ (Water Problem) ತೀವ್ರಗೊಂಡಿದೆ. ಇದೀಗ ನೀರಿನ ಬಿಕ್ಕಟ್ಟಿನ ಬಿಸಿ ತೋಟಗಾರಿಕೆ ಇಲಾಖೆಗೂ ತಟ್ಟುತ್ತಿದೆ. ಹಸಿರಿನ ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಒಣಗಿದ ಮರಗಿಡಗಳೇ ಕಾಣುತ್ತಿವೆ. ಲಾಲ್ ಬಾಗ್ ಒಟ್ಟು 240 ಎಕರೆಯಷ್ಟು ವಿಸ್ತಿರ್ಣ ಹೊಂದಿದೆ. ಈ ಪಾರ್ಕ್ನಲ್ಲಿ ಪ್ರತಿದಿನ ಗಿಡಗಳಿಗೆ ನೀರು ಹಾಕಬೇಕಾಗುತ್ತದೆ. ಸದ್ಯ ಪ್ರತಿದಿನ ನೀರು ಹಾಕಲು 1 ಲಕ್ಷ ಎಂಎಲ್ಡಿ ನಷ್ಟು ನೀರು ಬಳಕೆಯಾಗುತ್ತಿದ್ದು, ನಗರದಲ್ಲಿ ಬಿಸಿಲು ಜಾಸ್ತಿಯಾದ ನಂತರದಲ್ಲಿ, ನೀರಿನ ಬಳಕೆಯ ಪ್ರಮಾಣ1.5 ಎಂ ಎಲ್ಡಿಯಿಂದ 2 ಲಕ್ಷ ಮಿಲಿಮೀಟರ್ಗೆ ಏರಿಕೆಯಾಗಿದೆ. ಸದ್ಯ ಜಲಮಂಡಳಿಯಿಂದ 1ಲಕ್ಷ ಎಂಎಲ್ಡಿಯಷ್ಟು ಮಾತ್ರ ಪೂರೈಕೆಯಾಗುತ್ತಿದ್ದು, 1 ಎಂಎಲ್ಡಿಯಷ್ಟು ನೀರಿನ ಕೊರತೆ ಇದೆ.
ಪ್ರಸ್ತುತ, ಲಾಲ್ ಬಾಗ್ನಲ್ಲಿ ಎರಡು ಬೋರ್ವೆಲ್ ಹಾಗೂ 6 ಬಾವಿಗಳಿವೆ. ಅದ್ರಲ್ಲಿ ಬೋರ್ವೆಲ್ಗಳಲ್ಲಿನ ನೀರನ್ನು ಕುಡಿಯುವುದಕ್ಕೆ ಮಾತ್ರ ಬಳಸಲಾಗುತ್ತಿದೆ. 6 ಬಾವಿಗಳಿದ್ದು ಅಷ್ಟಾಗಿ ನೀರು ಇಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಕೊಟ್ಟು ಬೇರೆ ಭಾಗಗಳಿಂದ ತರಿಸಿದ್ದ ಗಿಡಗಳು ನೀರಿಲ್ಲದೇ ಸೊರಗಿ ಹೋಗುತ್ತಿವೆ. ಹಸಿರಿನಿಂದ ಕಂಗೊಳಿಸುತ್ತಿದ್ದ ಪಾರ್ಕ್ ನೀರಲ್ಲದೇ ಸೊರಗಿ ಹೋಗುತ್ತಿದ್ದು, ಮರಗಿಡಗಳು ಒಣಗಿ ಹೋಗಿವೆ.
ಬೇಸಿಗೆ ಆರಂಭವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಲಾಲ್ ಬಾಗ್ನತ್ತ ಬರುತ್ತಿದ್ದು, ಲಾಲ್ ಬಾಗ್ ತೋಟಗಾರಿಕೆ ಅಧಿಕಾರಿಗಳು ನೀರು ಒದಗಿಸುವ ಕುರಿತು ಕ್ರಮವಹಿಸಬೇಕು ಅಂತ ಲಾಲ್ ಬಾಗ್ ವಾಕರ್ಸ್ ಅಸೋಸಿಯೇಷನ್ ಮನವಿ ಮಾಡಿದೆ.
ಇತ್ತೀಚಿಗೆ ಲಾಲ್ ಬಾಗ್ ನೋಡುವುದಕ್ಕೆ ಬೇಸರವಾಗುತ್ತಿದೆ. ಹಸಿರಿನಿಂದ ತುಂಬಿರುತ್ತಿದ್ದ ಸಸ್ಯಕಾಶಿ ಇದೀಗ ಬರಿದಾಗಿ ಕಾಣುತ್ತಿದೆ. ಬೇರೆ ಬೇರೆ ಭಾಗದಿಂದ ತಂದಂತಹ ಗಿಡಗಳು ಒಣಗುತ್ತಿವೆ. ಬಿಸಿಲಿನ ಪ್ರಮಾಣವು ಜಾಸ್ತಿಯಾಗುತ್ತಿದೆ.ಗಿಡಗಳು ಒಣಗದಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಅಂತ ಪರಿಸರ ಪ್ರಿಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನೀರು ಕೊಡುವವರೆಗೂ ವೋಟ್ ಮಾಡಲ್ಲ: ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
ಹೆಚ್ಚುವರಿ ನೀರಿನ ಅವಶ್ಯಕತೆ ಬಗ್ಗೆ ತೋಟಗಾರಿಕೆ ಇಲಾಖೆ ಜಲಮಂಡಳಿ ಅಧಿಕಾರಿಗಳೊಂದೆಗೆ ಚರ್ಚೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗದಂತೆ ಪರ್ಯಾಯವಾಗಿ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುವುದರ ಕುರಿತಾಗಿ ಸಮಾಲೋಚನೆ ನಡೆಸುತ್ತಿದೆ ಎಂದು ಲಾಲ್ ಬಾಗ್ ಉಪನಿರ್ದೇಶಕಿ ಕುಸುಮ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:14 am, Thu, 18 April 24