ಗದಗ: ಜಿಲ್ಲೆಯ ಮುಂಡರಗಿ ಪುರಸಭೆ ಆಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಜೊತೆಗೆ ಪುರಸಭೆಯ ಬಿಜೆಪಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅಂಧಾ ದರ್ಬಾರ್ ವಿರುದ್ಧ ಸ್ವಪಕ್ಷದ ಮುಖಂಡರೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಪಟ್ಟಣದಲ್ಲಿ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗಿತ್ತು. ಹೀಗಾಗಿ ಅಭಿವೃದ್ಧಿಗಾಗಿ ಬಿಜೆಪಿಗೆ ಜನರು ಸ್ಪಷ್ಟ ಬಹುಮತ ಕೊಟ್ಟು ಅಧಿಕಾರಕ್ಕೆ ತಂದಿದ್ದರು. ಆದರೆ ಅಧ್ಯಕ್ಷೆ ಹಾಗೂ ಪತಿಯ ಅಂಧಾ ದರ್ಬಾರ್ಗೆ ಆಡಳಿತ ಪಕ್ಷದ ಸದಸ್ಯರೇ ಬೆಸ್ತು ಹೋಗಿದ್ದಾರೆ. ಹೀಗಾಗಿ ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಬಹುತೇಕ ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೋತ್ತುವಳಿ ಮಂಡನೆ ಮಾಡಿದ್ದು, ಸೋಮವಾರ ಅವಿಶ್ವಾಸಕ್ಕೆ ಮಹೋರ್ತ ನಿಗದಿಯಾಗಿದೆ. ಈ ನಡುವೆ ಅಧ್ಯಕ್ಷೆ ಪತಿ ಧಮ್ಕಿ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ.
ಮೂಲಭೂತ ಸೌಕರ್ಯ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಂದ ಮುಂಡರಗಿ ಪಟ್ಟಣ ನರಳಾಡುತ್ತಿದೆ. 1080 ವಸತಿ ಯೋಜನೆಯಲ್ಲಿ ಮನೆಗಳು ಮಂಜೂರು ಆಗಿ ನಾಲ್ಕು ವರ್ಷಗಳಾಗಿವೆ. ಆದರೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಜೊತೆಗೆ 12ಕೋಟಿ ಹಣ ಅಭಿವೃದ್ಧಿಗೆ ಪುರಸಭೆ ಖಜಾನೆಗೆ ಬಂದಿದೆ. ಅದು ಖರ್ಚು ಆಗುತ್ತಿಲ್ಲ. ಹೀಗಾಗಿ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ವ ಸದಸ್ಯರು ಅಧ್ಯಕ್ಷೆ ವಿರುದ್ಧ ಸಿಡಿದೆದ್ದಿದ್ದಾರೆ.
ಬಿಜೆಪಿ ಸದಸ್ಯೆ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ವಿರುದ್ಧ ಆರು ತಿಂಗಳ ಹಿಂದೆ ಬಿಜೆಪಿ, ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಮಂಡನೆ ಮಾಡಿದ್ದರು. ಬಿಜೆಪಿ ಹೈಕಮಾಂಡ್ ಅಧ್ಯಕ್ಷೆ ಬದಲಾವಣೆ ಮಾಡಿ ಬೇರೆ ಸದಸ್ಯರ ಹೆಸರು ಸೂಚಿಸಿತ್ತು. ಆದರೆ ಶಾಸಕ ರಾಮಣ್ಣ ಲಮಾಣಿ ಗೈರು ಉಳಿದು ಪಕ್ಷದ ಅಭ್ಯರ್ಥಿ ಸೋಲುವಂತೆ ಮಾಡಿದ್ದರು ಎನ್ನುವ ಆರೋಪವಿದೆ. ಆಗ ಮತ್ತೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಪಕ್ಷದ ಮುಖಂಡರು ಬುದ್ದಿ ಹೇಳಿದರೂ ಆಕೆಯ ಗಂಡನ ದರ್ಬಾರ್ ಕಾಟ ಮುಂದುವರೆದಿದೆ. ಹೀಗಾಗಿ ಈಗ ಮತ್ತೆ ಸರ್ವ ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದ್ದು, ಸೋಮವಾರಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಈ ನಡುವೆ ಅಧ್ಯಕ್ಷೆ ಕವಿತಾ ಪತಿ ಅಂದಪ್ಪ ಉಳ್ಳಾಗಡ್ಡಿ ಬಿಜೆಪಿ ಸದಸ್ಯ ಪವನ ಮೇಟಿಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಮುಂಡರಗಿ ಪುರಸಭೆ ಒಟ್ಟು 23 ಸದಸ್ಯರ ಸಂಖ್ಯಾ ಬಲ ಹೊಂದಿದೆ. ಇದರಲ್ಲಿ ಬಿಜೆಪಿಯ 17 ಸದಸ್ಯರು, ಕಾಂಗ್ರೆಸ್ನ 6 ಸದಸ್ಯರು ಇದ್ದಾರೆ. ಬಿಜೆಪಿ ಫುಲ್ ಬಹುಮತ ಹೊಂದಿದ್ದರೂ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗಿತ್ತು. ಬರೀ ಕಾನೂನು ಬಾಹಿರ ಕೆಲಸದಲ್ಲಿ ಅಧ್ಯಕ್ಷೆ ಕವಿತಾ ಹಾಗೂ ಪತಿ ಅಂದಪ್ಪನ ದರ್ಬಾರ್ ಜೋರಾಗಿತ್ತು. ಅವಿಶ್ವಾಸ ಗೋತ್ತುವಳಿ ಮಾಡಿದರೂ ಬುದ್ಧಿ ಬಂದಿಲ್ಲ. ಹೀಗಾಗಿ ಗಂಡ, ಹೆಂಡತಿ ದರ್ಬಾರ್ಗೆ ಬೇಸತ್ತು ಈಗ ಮತ್ತೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೋತ್ತುವಳಿ ಮಂಡನೆ ಮಾಡಿದ್ದಾರೆ. ಮುಂಡರಗಿ ಬಿಜೆಪಿ ಆಡಳಿತದಲ್ಲಿ ಇಷ್ಟೆಲ್ಲಾ ರಾದ್ಧಾಂತ ನಡೀಯುತ್ತಿದ್ದರೂ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಗದಗ ಜಿಲ್ಲಾ ಬಿಜೆಪಿ ಮಾತ್ರ ಮೌನಕ್ಕೆ ಶರಣಾಗಿದೆ. ಇದು ಸ್ಥಳೀಯ ಬಿಜೆಪಿ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಅವಿಶ್ವಾಸ ಮಂಡನೆಗೆ ಬಿಜೆಪಿ ಪಕ್ಷದ 10 ಜನ ಸದಸ್ಯರು ಸಹಿ ಮಾಡಿದರೆ, ಕಾಂಗ್ರೆಸ್ನ ಆರು ಜನ ಸಹಿ ಮಾಡಿದ್ದಾರೆ. ಮುಂಡರಗಿ ಪಟ್ಟಣ ಜಿಲ್ಲೆಯಲ್ಲೇ ಅತೀ ಹಿಂದುಳಿದ ತಾಲೂಕು ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿದೆ. ಗದಗ ಬಿಜೆಪಿ ಇದ್ದು ಇಲ್ಲದಂತಾಗಿದೆ, ಹೀಗಾಗಿ ಬಿಜೆಪಿ ಹೈಕಮಾಂಡ್ ಇಂಥ ಅವ್ಯವಸ್ಥೆ ಆಡಳಿತಕ್ಕೆ ಸರ್ಜರಿ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವುದು ಜನರು ಹಾಗೂ ಬಿಜೆಪಿ ಮುಖಂಡರ ಒತ್ತಾಯವಾಗಿದೆ.
“ಅನುದಾನಗಳು ಬಂದಿದ್ದರೂ ನೀಡುತ್ತಿಲ್ಲ, ಈ ಹಿಂದೆ ಅವಿಶ್ವಾಸ ನಿರ್ಣಯ ಮಾಡಿದ್ದರೂ ಅಧ್ಯಕ್ಷರ ಪತಿಯ ಅಂಧಾ ದರ್ಬಾರ್ ಮುಂದುವರಿದಿದೆ. ಹೀಗಾಗಿ ಮತ್ತೆ ಅವಿಶ್ವಾಸ ಮಂಡನೆಗೆ ಪತ್ರ ನೀಡಿದ್ದೇವೆ. ಸೋಮವಾರ ಮಂಡನೆಯಾಗಲಿದೆ. ಬಿಜೆಪಿಯ 10 ಮತ್ತು ಕಾಂಗ್ರೆಸ್ನ ಎಲ್ಲಾ 6 ಸದಸ್ಯರು ಇದಕ್ಕೆ ಸಹಿಹಾಕಿದ್ದಾರೆ” -ನಾಗರಾಜ್ ಹೊಂಬಳಗಟ್ಟಿ, ಕಾಂಗ್ರೆಸ್ ಸದಸ್ಯ
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:03 am, Sun, 13 November 22