ಗದಗ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವ ಕಾಲವೊಂದಿತ್ತು. ಆದರೆ ಇತ್ತೀಚೆಗೆ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ವಿಭಿನ್ನ ಥೀಮ್ನಲ್ಲಿ ಸರ್ಕಾರಿ ಶಾಲೆಗಳನ್ನ ರೆಡಿ ಮಾಡಲಾಗುತ್ತಿದೆ. ಹೀಗಾಗಿ ಮಕ್ಕಳು ಸರ್ಕಾರಿ ಶಾಲೆಗಳತ್ತ ವಾಲುತ್ತಿದ್ದಾರೆ. ಗದಗ ಜಿಲ್ಲೆಯಲ್ಲೂ ವಿಭಿನ್ನ ಥೀಮ್ ಇಟ್ಟುಕೊಂಡು ಸರ್ಕಾರಿ ಶಾಲೆಯೊಂದಕ್ಕೆ ಹೈಟೆಕ್ ಟಚ್ ಕೊಟ್ಟಿದ್ದಾರೆ. ಈ ಶಾಲೆ ನೋಡಿದರೆ ಇದು ಸರ್ಕಾರಿ ಶಾಲೆನಾ ಎನ್ನುವಷ್ಟು ಸುಂದರವಾಗಿದೆ.
ಗೋಡೆ ಮೇಲೆ ಸೃಷ್ಟಿಯಾಗಿರುವ ಕಲಾ ಲೋಕದಲ್ಲಿ ಮಕ್ಕಳಂತೂ ಕಳೆದು ಹೋಗಿದ್ದಾರೆ. ಈ ‘ಕಲಾ ಕಲರವ’ ಸೃಷ್ಟಿಯಾಗಿರುವುದು ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಗೋಡೆ ಮೇಲೆ. ಶತಮಾನದ ಶಾಲೆಗೆ ಸದ್ಯ ಹೈಟೆಕ್ ಟಚ್ ನೀಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಶಾಲೆ ಪ್ರವೇಶವಾಗುತ್ತಿದ್ದಂತೆ ಐತಿಹಾಸಿಕ ಸ್ಥಳಗಳ ಚಿತ್ರ ಕಣ್ಣಿಗೆ ಮುದ ನೀಡುತ್ತದೆ. ಹಂಪಿ, ಮೈಸೂರು ದಸರಾ ವೈಭವ, ಗದಗನ ವೀರನಾರಾಯಣ ದೇವಸ್ಥಾನ ಸೇರಿದಂತೆ ಅನೇಕ ಚಿತ್ರಗಳನ್ನ ಬಿಡಿಸಲಾಗಿದೆ.
ಶಾಲೆ ಕಾಂಪೌಂಡ್ ನೋಡುತ್ತಿದ್ದರೆ ರಾಜ್ಯ ಸುತ್ತಿದ ಅನುಭವ ನೀಡುತ್ತದೆ. ದ್ವಾರದ ಕಮಾನಿಗೆ ಡೂಡಲ್ ಶೈಲಿಯ ಚಿತ್ರಕಲೆ ಬಿಡಿಸಲಾಗಿದ್ದು, ಹೆಚ್ಚು ಆಕರ್ಷಿಸುತ್ತಿದೆ. ಒಳ ಭಾಗದಲ್ಲಿ ಇಂಡಿಯನ್ ಹಾಗೂ ವೆಸ್ಟರ್ನ್ ಶೈಲಿಯ ಸರಸ್ವತಿ ವರ್ಣ ಚಿತ್ರ, ವರ್ಣಮಾಲೆಯ ಚಿತ್ರ ಹಾಗೂ ಚಿತ್ರ ಸಹಿತ ಮಹಾನ್ ನಾಯಕರ ನುಡಿಮುತ್ತುಗಳು ರಾರಾಜಿಸುತ್ತವೆ. ಶಾಲೆಯ ಎದುರು ಗೋಡೆಯ ಮೇಲಿರುವ ಡೂಡಲ್ ಶೈಲಿಯ ಪೇಂಟಿಂಗ್ ಮಕ್ಕಳನ್ನ ಹೆಚ್ಚು ಆಕರ್ಷಿಸುತ್ತದೆ.
ಚಿತ್ರಕಲೆಯಲ್ಲಿನ ಅಕ್ಷರ ಗುರುತಿಸುವ ಮೂಲಕ ಮಕ್ಕಳ ಐಕ್ಯೂ ಹೆಚ್ಚು ಮಾಡುವ ವ್ಯವಸ್ಥೆ ಇಲ್ಲಿದೆ. ಗೋಡೆ ಬರಹದ ಚಿತ್ರಗಳು ಮಕ್ಕಳನ್ನ ಶಾಲೆಯತ್ತ ಕೈ ಬೀಸಿ ಕರೆಯುತ್ತವೆ.
1881 ರಲ್ಲೇ ಸ್ಥಾಪನೆಯಾದ ಶಾಲೆಗೆ ಹೈಟೆಕ್ ಟಚ್ ನೀಡಬೇಕು ಅಂತಾ ಶಾಲೆ ಶಿಕ್ಷಕರು ಯೋಜನೆ ರೂಪಿಸಿದ್ದರು. ಐದು ಲಕ್ಷ ರೂಪಾಯಿ ಅನುದಾನದಲ್ಲಿ ಹೈಟೆಕ್ ಲ್ಯಾಬ್ ಸ್ಥಾಪಿಸಲಾಗಿದೆ. ಶಾಮ್ ಪ್ರಕಾಶ್ ಮುಖರ್ಜಿ ರೂರಲ್ ಡೆವೆಲಪ್ಮೆಂಟ್ ಟ್ರಸ್ಟ್ನಿಂದ 5 ಲಕ್ಷ ಅನುದಾನ ಬಂದಿದೆ. ಈ ಅನುದಾನದಲ್ಲಿ ಎರಡು ಹೈಟೆಕ್ ಸೈನ್ಸ್ ಲ್ಯಾಬ್ ಮಾಡಲಾಗಿದೆ. ಸ್ಮಾರ್ಟ್ ಕ್ಲಾಸ್, ಗಣಿತವನ್ನ ಪರಿಣಾಮಕಾರಿ ಬೋಧಿಸುವ ನಿಟ್ಟಿನಲ್ಲಿ ಮ್ಯಾಥ್ಸ್ ಮಾಡಲ್ಗಳನ್ನ ಇರಿಸಲಾಗಿದೆ. ಕಬ್ಬಿಣದ ಕಡಲೆ ಎನ್ನುವ ಗಣಿತ ಇಲ್ಲಿನ ಮಕ್ಕಳು ಸಲಿಸಾಗಿ ಕಲಿಯುತ್ತಿದ್ದಾರೆ.
ಶಿಕ್ಷಣ ತರಬೇತಿ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ‘ಕಲಾ ಕಲರವ’ ಎನ್ನುವ ಪರಿಕಲ್ಪನೆಯಲ್ಲಿ ಗೋಡೆಗಳ ಮೇಲೆ ಚಿತ್ರಗಳನ್ನ ಬಿಡಿಸಲಾಗಿದೆ. ಗ್ರಾಮಾಂತರ ವಿಭಾಗದ 12 ಕಲಾ ಶಿಕ್ಷಕರು ಕೊರೊನಾ ರಜೆಯಲ್ಲಿ ಶಾಲೆ ಪೇಂಟಿಂಗ್ ಕೆಲಸ ಮಾಡಿದಾರೆ. ಪೇಟಿಂಗ್ಗಾಗಿ 1 ಲಕ್ಷ 50 ಸಾವಿರ ರೂಪಾಯಿ ವ್ಯಯವಾಗಿದೆ. ಜಿಲ್ಲಾ ಪಂಚಾಯತಿ ಅಡಿಯಲ್ಲಿ ಫ್ಲಡ್ ರಿಲೀಫ್ಗೆ ಅಂತಾ ಬಂದಿದ್ದ ಅನುದಾನದಲ್ಲಿ ಉಳಿತಾಯವಾದ ಹಣವನ್ನ ಬಣ್ಣದ ಖರ್ಚಿಗೆ ಬಳಸಲಾಗಿದೆ. ಉಳಿದಂತೆ ಇಲಾಖೆ ಆದೇಶದ ಮೇರೆಗೆ ಕಲಾ ಶಿಕ್ಷಕರು ಕೆಲಸ ಮಾಡಿದಾರೆ. ಸದ್ಯ ಬಹುತೇಕ ಪೇಂಟಿಂಗ್ ಕೆಲಸ ಮುಗಿದಿದ್ದು, ಕಲರ್ ಫುಲ್ ಶಾಲೆಗೆ ದಾಖಲಾತಿ ಹಾಜರಾತಿ ಗಣನೀಯವಗಾಗಿ ಏರಿಕೆಯಾಗಿದೆ ಅಂತ ಶಿಕ್ಷಕಿ ಎನ್ ಎಸ್ ಕಮತ ತಿಳಿಸಿದರು.
ವರದಿ: ಸಂಜೀವ ಪಾಂಡ್ರೆ
ಇದನ್ನೂ ಓದಿ
ಕಾಂಗ್ರೆಸ್ ಶಾಸಕರಿಂದ ಪೊಲೀಸರ ಪ್ಯಾಂಟ್ ಒದ್ದೆಯಾಗಬಹುದು ಎಂದ ನವಜೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ನೋಟಿಸ್ ಜಾರಿ