ಬಂಡಾಯದ ನಾಡಲ್ಲಿ ಭಾವೈಕ್ಯತೆಯ ಬೆಳಕು ಬೆಳಗುತ್ತಿದೆ. ಇಂದಿನ ದಿನಮಾನಗಳಲ್ಲಿ ಕೋಮುದಳ್ಳುರಿ ಎಲ್ಲೆಡೆ ಸದ್ದು, ಗದ್ದಲ ಮಾಡ್ತಾಯಿದೆ. ಜಾತಿ- ಧರ್ಮದ ಹೆಸರಿನಲ್ಲಿ ಕಂದಕ ಸೃಷ್ಟಿ ಆಗ್ತಾಯಿವೆ. ಇಂಥ ಸಂದರ್ಭದಲ್ಲಿ ಸದ್ದಿಲ್ಲದೇ ಹಿಂದೂ ಮತ್ತು ಮುಸಲ್ಮಾನರು (Muslims) ನಾವೆಲ್ಲಾ ಒಂದೇ ಅನ್ನೋ ಸಂದೇಶ ಸಾರಿದ್ದಾರೆ. ಹೌದು ಮುಸ್ಲಿಂ ಸಮುದಾಯ ಹಿಂದೂ (Hindu) ಮಠಕ್ಕೆ ರಥವನ್ನು ದೇಣಿಗೆ ನೀಡುವ, ತನ್ಮೂಲಕ ಹಿಂದೂ-ಮುಸ್ಲಿಂ ಒಂದೇ ಅನ್ನೋ ಸಂದೇಶ ಸಾರಿದ್ದಾರೆ. ಭವ್ಯ ಮೆರವಣಿಗೆ ಮಾಡೋ ಮೂಲಕ ಮುಸ್ಲಿಂ ಸಮುದಾಯ ಭಾವೈಕ್ಯತೆಯ ರಥವನ್ನು ಇಂದು ಶ್ರೀ ಮಠಕ್ಕೆ (Nargund – Hiremath Temple of Shri Siddeshwar Panchagraha Gudda) ಹಸ್ತಾಂತರ ಮಾಡಲಾಯಿತು.. ಹಿಂದೂ ಮಠಕ್ಕೆ ಮುಸ್ಲಿಂ ತೇರು ಹಸ್ತಾಂತರ ಸಂಭ್ರಮ ಹೇಗಿದೆ ನೀವೇ ನೋಡಿ… ನರಗುಂದ ಪಟ್ಟಣದಲ್ಲಿ ಇಂದು ಗುರುವಾರ ಹಿಂದೂ ಮುಸ್ಲಿಂ ಭಾವೈಕ್ಯತೆ ರಥದ ಅದ್ಧೂರಿ ಮೆರವಣಿಗೆ. 501 ಸುಮಂಗಲೆಯರ ಕುಂಭ ಮೇಳದ ಅಬ್ಬರ. ವಿವಿಧ ಕಲಾತಂಡಗಳ ಅಬ್ಬರ. ಭಾವೈಕ್ಯತೆಯ ಝೇಂಕಾರದ ಮಧ್ಯೆ ರಥದ ಅದ್ಧೂರಿ ಮೆರವಣಿಗೆ.
ಹೌದು ಗದಗ ಜಿಲ್ಲೆಯ ನರಗುಂದ ಪಟ್ಟಣ ಎಂದ್ರೆ ಸಾಕು ಅದು ಬಂಡಾಯದ ನಾಡು ಎಂದೆ ಹೆಸರುವಾಸಿ. ರೈತ ಹೋರಾಟದಿಂದ ನಾಡಿನಲ್ಲಿ ಹೆಸರು ಮಾಡಿರೋದು ನರಗುಂದ ಪಟ್ಟಣ. ಆದ್ರೆ ಈವಾಗ ಭಾವೈಕ್ಯತೆ ಹೆಸರು ಮಾಡಿರೋ ಗರಿಯೊಂದನ್ನು ಪಡೆದುಕೊಂಡಿದೆ. ಅಂದಹಾಗೇ ನರಗುಂದ ಪಟ್ಟಣದ ಹಜರತ್ ಮೆಹಬೂಬಸುಭಾನಿ ದರ್ಗಾದ ಖಾದಿಮ್, ಬಾಬುಸಾಹೇಬ ಇಮಾಮಸಾಹೇಬ ಜಮಾದಾರಿಂದ ಸುಂದರವಾದ ರಥ ಹಿಂದೂ ಮಠಕ್ಕೆ ಕೊಡುಗೆ ನೀಡಲಾಗಿದೆ.
ಪಟ್ಟಣದ ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠ ದೇವಸ್ಥಾನಕ್ಕೆ ಭಾವೈಕ್ಯತೆ ರಥವನ್ನು ಹಸ್ತಾಂತರ ಮಾಡಲಾಯಿತು. ನರಗುಂದ ಪಟ್ಟಣದ ಮುಸ್ಲಿಂ ಸಮಾಜದ ಬಾಂಧವರು ಸೇರಿಕೊಂಡು 30 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಣೆ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಹಿಂದೂ ಸಂಪ್ರದಾಯದ ಪ್ರಕಾರ ರಥವನ್ನು, ಹೊನ್ನಾವರ ತಾಲೂಕಿನ ಇಡಗುಂಜಿಯ ರಥಶಿಲ್ಪಿ ಗಂಗಾಧರ ಆಚಾರ್ಯ ಅವರು ಕೆತ್ತನೆ ಮಾಡಿದ್ದಾರೆ. ಇಂದು ಮಹೆಬೂಬಸಾಬ್ ಸೂಬಾನಿ ದರ್ಗಾದ ಆವರಣದಲ್ಲಿ ಧರ್ಮ ಸಭೆಯನ್ನು ಮಾಡಲಾಯಿತು. ಪಂಚ ಪೀಠದ ಶ್ರೀಗಳು ಹಾಗೂ ಮುಸ್ಲಿಂ ಖಾದೀಮ್ ಗಳು ಸೇರಿಕೊಂಡು ರಥಕ್ಕೆ ವಿಶೇಷ ಪೂಜೆಯನ್ನು ಮಾಡಲಾಯಿತು. ಆದಾತ ಮೇಲೆ ಶ್ರೀ ಮಠಕ್ಕೆ ಹಸ್ತಾಂತರ ಮಾಡಲಾಯಿತು.
ಇನ್ನು ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠ ದೇವಸ್ಥಾನದಲ್ಲಿ ಈವರೆಗೆ ಪಲ್ಲಕಿ ಉತ್ಸವ ಮಾತ್ರ ಮಾಡಲಾಗುತ್ತಿತ್ತು. ಮಠಕ್ಕೆ ಒಂದು ರಥವನ್ನು ಮಾಡೋ ವಿಚಾರವನ್ನು ಪಂಚಪೀಠದ ಉಜ್ಜಯಿನಿ ಸ್ವಾಮೀಜಿಗಳು ಪ್ರಸ್ತಾಪ ಮಾಡಿದ್ರು. ಈ ವಿಷಯ ಮೆಹಬೂಬಸುಭಾನಿ ದರ್ಗಾದ ಖಾದಿಮ್, ಹಾಗೂ ಮುಸ್ಲಿಂ ಸಮಾಜದ ಮುಖಂಡರ ಕಿವಿಗೆ ಬಿದ್ದಿದೆ. ಹೀಗಾಗಿ ಬಾಬುಸಾಬ್ ಅಜ್ಜನವರ ನೇತೃತ್ವದಲ್ಲಿ ಮುಸ್ಲಿಂ ಸಮಾಜದವರು 30 ಲಕ್ಷ ರೂಪಾಯಿ ಹಣವನ್ನು ಸಂಗ್ರಹಣೆ ಮಾಡಿ, ರಥವನ್ನು ಮಾಡಿಸಿದ್ದಾರೆ. ಇಂದು ದರ್ಗಾದಿಂದ ಪಂಚಗ್ರಹ ಗುಡ್ಡದ ಹಿರೇಮಠ ಹಸ್ತಾಂತರ ಮಾಡಲಾಯಿತು.
ದರ್ಗಾದಿಂದ ಹಿಂದೂ ಮುಸ್ಲಿಂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ರು. 501ಮಹಿಳೆಯರು, ಕುಂಭ ಮೇಳದಲ್ಲಿ ಭಾಗಿಯಾಗಿದ್ರು. ಡೊಳ್ಳು ಕುಣಿತ, ರಗ್ಗಹಲಿಗೆ ಸೇರಿದಂತೆ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಶ್ರೀ ಮಠಕ್ಕೆ ಹಸ್ತಾಂತರ ಮಾಡಲಾಯಿತು. ಬಂಡಾಯದ ನಾಡಿನಲ್ಲಿ ಇವತ್ತು ಭಾವೈಕ್ಯತೆಯ ಕಂಪು ಜೋರಾಗಿತ್ತು. ಹಿಂದು ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರುವ ಉದ್ದೇಶದಿಂದ ರಥವನ್ನು ಹಸ್ತಾಂತರ ಮಾಡಲಾಯಿತು. ಹಿಂದು ಮುಸ್ಲಿಂ ಒಂದೇ ಎನ್ನುವ ಸಂದೇಶವನ್ನು ಸಾರುವ ಮೂಲಕ ಭಾವೈಕ್ಯತೆ ರಥವನ್ನು ಹಸ್ತಾಂತರ ಮಾಡಿದ್ದೇವೆ ಅಂತಾರೆ ಸೈಹಿದ.
ದೇಶದಲ್ಲಿ ಹಿಂದೂ ಮುಸ್ಲಿಂ ಕೋಮು ದಳ್ಳುರಿ ಎಲ್ಲೆಡೆ ಹೊತ್ತಿದೆ. ಈ ನಡುವೆ ಬಂಡಾಯದ ನಾಡಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೂಲಕ ನಾಡಿಗೆ ಸಂದೇಶ ಸಾರಿದ್ದಾರೆ. ಮುಸ್ಲಿಂ ಸಮುದಾಯದವರು, ಹಿಂದೂ ಶ್ರೀ ಮಠಕ್ಕೆ ಭಾವೈಕ್ಯತೆ ರಥವನ್ನು ಗಿಫ್ಟ್ ನೀಡೋ ಮೂಲಕ ಮಾದರಿಯಾಗಿದ್ದಾರೆ. ಇದೇ 11 ರಂದು ಭಾವೈಕ್ಯತೆ ಮೊದಲ ಅದ್ಧೂರಿ ರಥೋತ್ಸವ ನಡೆಯಲಿದೆ. ದೇವನೊಬ್ಬ ನಾಮ ಹಲವು. ಹಿಂದೂ ಮುಸ್ಲಿಂ ನಾವೆಲ್ಲಾ ಒಂದೇ ಎನ್ನುವ ಸಂದೇಶವನ್ನು ಸಾರಿ, ಸೈ ಅನ್ನಿಸಿಕೊಂಡಿದ್ದಾರೆ.