ಗದಗ: ರಂಜಾನ್ ಹಬ್ಬಕ್ಕೆ ತನ್ನ ಮಗಳನ್ನು ಕರೆತರಲು ಪೋಷಕರು ಪ್ಲನ್ ಮಾಡಿಕೊಂಡಿದ್ದರು. ಇದಕ್ಕಾಗಿ ಎಲ್ಲಾ ತಯಾರಿಗಳನ್ನು ಮನೆಯವರು ನಡೆಸುತ್ತಿದ್ದರು. ಇಷ್ಟೊಂದು ಸಂತೋಷದಲ್ಲಿದ್ದ ತವರು ಮನೆಯಲ್ಲಿ ನೀರವ ಮೌನ ಆವರಿಸಿದೆ. ಪೋಷಕರು, ಸಂಬಂಧಿಗಳು ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದಾರೆ. ಹೌದು, ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾದವಾಗಿದ್ದ ನವವಿವಾಹಿತೆಯನ್ನು ಪತಿಯೇ ಕೊಲೆ ಮಾಡಿ ತನ್ನ ಕುಟುಂಬದೊಂದಿಗೆ ಪರಾರಿಯಾದ ಘಟನೆ ಗದಗದ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
ನವವಿವಾಹಿತೆ ಶಹನಾಜ್ ಬೇಗಂ (24) ಒಂದೂವರೆ ತಿಂಗಳ ಹಿಂದೆಯಷ್ಟೇ ಧಾರವಾಡ ಜಿಲ್ಲೆ ಅಣ್ಣಿಗೇರಿ ಮೂಲದ ಶಹಬಾಜ್ ಮುಳಗುಂದ ಎಂಬಾತನನ್ನು ವಿವಾಹವಾಗಿದ್ದಳು. ಒಂದೆಡೆ ಶಹನಾಜ್ ಬೇಗಂ ತವರು ಮನೆಯಲ್ಲಿ ಮಗಳ ಮದುವೆಯಾದ ಸಂತಸವಿದ್ದರೆ, ಇನ್ನೊಂದೆಡೆ ರಂಜಾನ್ ಹಬ್ಬದ ಸಂಭ್ರಮ ಸಡಗರ. ಈ ಹಬ್ಬಕ್ಕೆ ನವವಿವಾಹಿತೆ ಶಹನಾಜ್ ಬೇಗಂಳನ್ನು ಕರೆತರುವ ಪ್ಲಾನ್ ಕೂಡ ಪೋಷಕರು ಹಾಕಿಕೊಂಡಿದ್ದರು.
ಗಂಡನ ಮನೆಯಿಂದ ಶಹನಾಜ್ ಬೇಗಂಳ ತವರಿಗೆ ಬರುತ್ತಿರುವ ಹಿನ್ನೆಲೆ ಹಬ್ಬವನ್ನು ಪ್ರತಿ ವರ್ಷಕ್ಕಿಂತ ಅದ್ದೂರಿಯಾಗಿ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಲಾಗುತ್ತಿತ್ತು. ಆಕೆಗೆ ನೀಡಲೆಂದೇ ಹೊಸ ಬಟ್ಟೆ, ಚಿನ್ನವನ್ನು ಖರೀದಿಸಿಟ್ಟಿದ್ದರು. ಆದರೆ, ಇತ್ತ ಕೆಟ್ಟ ಪಿಡುಗಿನ ಹಿಂದೆ ಬಿದ್ದ ಬೇಗಂ ಪತಿ ಶಹಬಾಜ್ ಮುಳಗುಂದ ಮತ್ತು ಆತನ ಕುಟುಂಬದ ಸದಸ್ಯರು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ರಂಜಾನ್ ಹಬ್ಬದಂದು ಮಗಳು ಬೇಗಂ ಬರುತ್ತಿದ್ದಾಳೆ ಎಂದು ಕಾಯುತ್ತಿದ್ದ ಪೋಷಕರಿಗೆ ತನ್ನ ಮಗಳ ಮೃತದೇಹ ಆಸ್ಪತ್ರೆಯಲ್ಲಿರುವ ಮಾಹಿತಿ ತಿಳಿದುಬಂದು ಬರ ಸಿಡಿಲು ಬಡಿದಂತಾಗಿದೆ. ಕೊಲೆ ನಂತರ ಶಹಬಾಜ್ ಮುಳಗುಂದ ಮತ್ತು ಕುಟುಂಬ ಪರಾರಿಯಾಗಿದ್ದು, ಇತ್ತ ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಬೇಗಂ ಕುಟುಂಬಸ್ಥರು ಆರೋಪಿಸಿದ್ದಾರೆ.
ಕ್ರೈಂ ನ್ಯೂಸ್ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Fri, 21 April 23