ಕಳಸಾ ಬಂಡೂರಿ ಯೋಜನೆ: ಸಿಸಿ ಪಾಟೀಲ್ ಹೇಳಿಕೆಗೆ ಆಕ್ರೋಶ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದ ವೀರೇಶ ಸೊಬರದಮಠ

| Updated By: ಆಯೇಷಾ ಬಾನು

Updated on: Jan 05, 2023 | 1:39 PM

ಕಳಸಾ ಬಂಡೂರಿ ಹೋರಾಟಗಾರರು ಹೊಟ್ಟೆ ಪಾಡಿಗಾಗಿ ಹೋರಾಟ ಮಾಡಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ಹೇಳಿಕೆ ನೀಡಿದ್ದು ಆಕ್ರೋಶ ವ್ಯಕ್ತವಾಗಿದೆ.

ಕಳಸಾ ಬಂಡೂರಿ ಯೋಜನೆ: ಸಿಸಿ ಪಾಟೀಲ್ ಹೇಳಿಕೆಗೆ ಆಕ್ರೋಶ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದ ವೀರೇಶ ಸೊಬರದಮಠ
ವೀರೇಶ ಸೊಬರದಮಠ ಹಾಗೂ ರೈರ ಮುಖಂಡರು
Follow us on

ಗದಗ: ಕಳಸಾ ಬಂಡೂರಿ ಯೋಜನೆಗೆ(Kalasa Banduri Project) ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದ್ರೆ ರಾಜಕಾರಣಿಗಳು ಹಾಗೂ ರೈತ ಹೋರಾಟಗಾರರು ಕ್ರೆಡಿಟ್ ಪಡೆಯಲು ಸಖತ್ ಫೈಟ್ ಮಾಡ್ತಿದ್ದಾರೆ. ಹೌದು ಕಳಸಾ ಬಂಡೂರಿ ಹೋರಾಟಗಾರರು ಹೊಟ್ಟೆ ಪಾಡಿಗಾಗಿ ಹೋರಾಟ ಮಾಡಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್(CC Patil) ಹೇಳಿದ್ದಾರೆ. ಇದು ಹೋರಾಟಗಾರ ವೀರೇಶ ಸೊಬರದಮಠ ಅವರನ್ನು ಕೆರಳುವಂತೆ ಮಾಡಿದೆ. ತಮ್ಮದೇ ಸರ್ಕಾರ ಇದೆ ತಾಕತ್ತಿದ್ರೆ ತನಿಖೆ ಮಾಡಿಸಲಿ ಅಂತ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲ ಆರ್ ಎಸ್ ಎಸ್ ಹಾಗೂ ಬಿಜೆಪಿ ಹೈಕಮಾಂಡ್ಗೆ ದೂರು ನೀಡಲು ನಿರ್ಧಾರ ಮಾಡಿದ್ದು, ಸಾಕಷ್ಟು ಸಂಚಲನ ಮೂಡಿಸಿದೆ.

ಎರಡು ದಶಕಗಳ ಮಹದಾಯಿ ಹೋರಾಟಕ್ಕೆ ಸದ್ಯ ತಾರ್ಕಿಕ ಅಂತ್ಯ ಕಾಣ್ತಾಯಿದೆ. ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ಲಾಭ ಪಡೆಯಲು ನಾನಾ ಕಸರತ್ತು ನಡೆಯುತ್ತಿವೆ. ಈವಾಗ ರೈತ ಹೋರಾಟಗಾರರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರ ಮಧ್ಯೆ ಟಾಕ್ ವಾರ್ ಆರಂಭವಾಗಿದೆ. ಅಂದಹಾಗೇ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ವೀರೇಶ್ ಸೊಬರದಮಠ ನೇತೃತ್ಬದಲ್ಲಿ 2724 ದಿನಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ಲಾಠಿ ರುಚಿ ತಿಂದಿದ್ದಾರೆ. ಉಪವಾಸ ವನವಾಸ ಮಾಡಿ ಹೋರಾಟ ಮಾಡಿದ್ದಾರೆ.

ಸಿಸಿ ಪಾಟೀಲ್​ ಹೇಳಿಕೆಗೆ ಆಕ್ರೋಶ

ಕೇಂದ್ರ ಸರ್ಕಾರ ಕಳಸಾ ಬಂಡೂರಿ ಯೋಜನೆಗೆ ಈಗ ಗ್ರೀನ್ ಸಿಗ್ನಲ್ ಸಿಕ್ಕ ನಂತ್ರ ನರಗುಂದ ಪಟ್ಟಣದಲ್ಲಿ ಸಚಿವ ಸಿಸಿ ಪಾಟೀಲ್ ನೇತೃತ್ವದಲ್ಲಿ ಜನವರಿ 1ರಂದು ವಿಜಯೋತ್ಸವ ಆಚರಣೆ ಮಾಡಲಾಯಿತು. ಈ ವೇಳೆ ಸಚಿವ ಸಿಸಿ ಪಾಟೀಲ್ರು ಮಹದಾಯಿ ಹೋರಾಟದ ಬಗ್ಗೆ ಮಾತನಾಡುವಾಗ, ನಾನು ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಬಿ ಆರ್ ಯಾವಗಲ್ ಕೂಡಾ ಸಾಥ್ ನೀಡಿದ್ದೆವು. ಹೀಗಾಗಿ ದೊಡ್ಡ ಪ್ರಮಾಣದ ಹೋರಾಟ ಮಾಡಲು ಕಾರಣವಾಯಿತು. ಇದನ್ನೇ ವೀರೇಶ ಸೊಬರದಮಠ ಹೊಟ್ಟೆ ಪಾಡಿಗಾಗಿ ಹೋರಾಟ ಮಾಡಿದ್ದಾರೆ ಅಂತಾ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.

ಸಚಿವರ ಹೇಳಿಕೆಯನ್ನು ರೈತ ಸೇನಾ ಕರ್ನಾಟದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವ್ರು, ತೀವ್ರವಾಗಿ ಖಂಡಿಸಿದ್ದಾರೆ. ನರಗುಂದ ಪಟ್ಟಣದಲ್ಲಿ ನಡೆಯೋ ಹೋರಾಟ ಹೊಟ್ಟೆ ಪಾಡಿಗೆ ಅಂತ ನಿಮ್ಮ ಸಚಿವರು ಹೇಳಿದ್ದಾರೆ. ಹೀಗಾಗಿ ಹೋರಾಟದ ಬಗ್ಗೆ ತನಿಖೆ ಮಾಡಿಸಬೇಕು ಅಂತ ಸಿಎಂ ಅವ್ರಿಗೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಆರ್.ಎಸ್.ಎಸ್ ಮುಖ್ಯಸ್ಥ ‌ಮೊಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವ್ರಿಗೂ ಪತ್ರ ಬರಿಯುತ್ತೇನೆ. ಸಂಪೂರ್ಣ ತನಿಖೆ ಆಗಲಿ. ಉಪವಾಸ ಹೋರಾಟ, ನೂರಾರು ಜನ್ರು ಲಾಠಿ ಏಟು ತಿಂದ್ರು. 11 ಜನ ಪ್ರಾಣ ಕಳೆದುಕೊಂಡರು ಹೊಟ್ಟೆ ಪಾಡಿಗೆ ಕಳೆದುಕೊಂಡ್ರಾ ತನಿಖೆ ಆಗಲಿ. ನಿಮ್ಮದೇ ಸರ್ಕಾರ ಇದೆ ತನಿಖೆ ಮಾಡಿಸಿ ಎಂದು ಸಚಿವ ಸಿಸಿ ಪಾಟೀಲ್ ರಿಗೆ ಸವಾಲು ಹಾಕಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಪಕ್ಷದವ್ರು ಕಲ್ಲು ಹೊಡೆಸಿದ್ರಿ ಎಲ್ಲವೂ ತನಿಖೆ ಮಾಡಲಿ ಅಂತ ಒತ್ತಾಯಿಸಿದರು. ಇಲ್ಲವಾದ್ರೆ ಸಿಸಿ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ವರೆಗೂ ಹೋಗುತ್ತೇನೆ. ಹೊಟ್ಟೆ ಪಾಡಿಗೆ ಹೋರಾಟದ ಬಗ್ಗೆ ಕೋರ್ಟ್ ತೀರ್ಮಾನ ಮಾಡುತ್ತೇವೆ. ನಿಮ್ಮ ರಾಜಕೀಯ ತೀರ್ಮಾನ ದೈವ ಮಾಡುತ್ತೆ ಸಿ ಸಿ ಪಾಟೀಲ್ರೇ ಅಂತ ಹೋರಾಟಗಾರ ವೀರೇಶ ಸೊಬರದಮಠ ಕಿಡಿಕಾರಿದ್ದಾರೆ. ಸಚಿವ ಸಿ ಸಿ ಪಾಟೀಲ್ ಹೇಳಿಕೆಯನ್ನು ಮಾಜಿ ಸಚಿವ ಎಚ್ ಕೆ ಪಾಟೀಲ್ ಅವ್ರು ಖಂಡಿಸಿದ್ದಾರೆ. ಸಚಿವರು ಹೋರಾಟಗಾರರ ಬಗ್ಗೆ ಅವಮಾನ ಮಾಡಿದ್ದು, ದುರ್ದೈವ ಎಂದಿದ್ದಾರೆ.

ನೀವು ಏನೇ ಹೆಸರಿಸಬಹುದು. ನೀವು ಒಬ್ರೇ ಅಲ್ಲ ನಿಮ್ಮಂಥ ಹತ್ತು ಮಂದಿ ನಮ್ಮ ಹೋರಾಟದ ಮೇಲೆ ಅಪವಾದ ಮಾಡಿದ್ರು ಎದುರಿಸಲು ಸಿದ್ದ. ನೀವು ಸಿದ್ದವಾಗಿರಿ ಅಂತ ಸವಾಲು ಹಾಕಿದ್ರು, ಪಂಚಪೀಠದ ಶ್ರೀಗಳು, ಮಠಾಧೀಶರು, ಇಸ್ಲಾಂ ಧರ್ಮದ ಗುರುಗಳಿಗೆ, ಪಾದ್ರಿಗಳು ಸೇರಿ ಎಲ್ಲರೂ ಹೋರಾಟಕ್ಕೆ ಸಾಥ್ ನೀಡಿದ್ರು. ಹೀಗಾಗಿ ಇವ್ರಿಗೂ ಪತ್ರ ಚಳವಳಿ ಮಾಡುತ್ತೇವೆ ಅಂತಾ ಸೊಬರಮಠ ಹೇಳಿದ್ದಾರೆ. ಒಟ್ನಲ್ಲಿ ರೈತ ಹೋರಾಟಗಾರರು ಹಾಗೂ ಸಚಿವ ನಡುವೆ ಗುದ್ದಾಟ ಆರಂಭವಾಗಿದ್ದು, ಹೇಗೆ ತಾರ್ಕಿಕ ಅಂತ್ಯ ಕಾಣುತ್ತೇ ಕಾದು ನೋಡಬೇಕು.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ