ಗದಗ: ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು, ಸ್ಮಶಾನ, ರೈತರ 50 ಎಕರೆ ಜಮೀನಿಗೂ ಕಂಟಕ

| Updated By: Ganapathi Sharma

Updated on: Nov 07, 2024 | 8:53 AM

ಗದಗ ಜಿಲ್ಲೆಯಲ್ಲಿ ವಕ್ಫ್ ಹೆಸರಿನಲ್ಲಿ ಅನೇಕ ಆಸ್ತಿಗಳನ್ನು ಅಕ್ರಮವಾಗಿ ದಾಖಲಿಸಿರುವುದು ಬೆಳಕಿಗೆ ಬಂದಿದೆ. ಅನ್ನದಾನೇಶ್ವರ ಮಠದ ಆಸ್ತಿ, ಸ್ಮಶಾನ ಜಾಗ ಮತ್ತು ರೈತರ 50 ಎಕರೆ ಜಮೀನುಗಳನ್ನು ವಕ್ಫ್ ಆಸ್ತಿಯೆಂದು ತೋರಿಸಲಾಗಿದೆ. ಇದರಿಂದ ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ. ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಲಾಗಿದೆ.

ಗದಗ: ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು, ಸ್ಮಶಾನ, ರೈತರ 50 ಎಕರೆ ಜಮೀನಿಗೂ ಕಂಟಕ
ಲಕ್ಷ್ಮೇಶ್ವರ ಪಟ್ಟಣದ ರೈತರು ತಹಶೀಲ್ದಾರ್​​ಗೆ ಮನವಿ ಸಲ್ಲಿಸಿದರು.
Follow us on

ಗದಗ, ನವೆಂಬರ್ 7: ಮುದ್ರ ಕಾಶಿಯೆಂದೇ ಪ್ರಸಿದ್ಧವಾಗಿರುವ ಗದಗ ಜಿಲ್ಲೆಗೂ ಇದೀಗ ವಕ್ಫ್ ಕಂಟಕ ವಕ್ಕರಿಸಿದೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಪ್ರಸಿದ್ಧ ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಸರ್ವ ಸಮಾಜದವರು ಅಂತ್ಯಕ್ರಿಯೆ ನೆರವೇರಿಸುವ ಸ್ಮಶಾನ ಜಾಗ ಹಾಗೂ ರೈತರ ಸುಮಾರು 50 ಎಕರೆ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ಕಂಡುಬಂದಿದೆ. ಇದರಿಂದ ಜಿಲ್ಲೆಯ ಜನ ಕಂಗೆಟ್ಟಿದ್ದಾರೆ.

ಅನ್ನದಾನೇಶ್ವರ ಮಠದ ಪಹಣಿ ತೆಗೆಸಿ ನೋಡಿದಾಗ ಭಕ್ತರು ಕಂಗಾಲಾಗಿದ್ದಾರೆ. 2019-20 ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಠದ ಆಸ್ತಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಹಣಿ ಬದಲಾವಣೆ ಮಾಡಿದ ಜಿಲ್ಲಾಡಳಿತ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

500 ವರ್ಷಗಳ ಇತಿಹಾಸ ಇರುವ ಮಠದ ಇದಾಗಿದೆ. ಮಠದ ಪ್ರಸಾದ ನಿಲಯದ 11.19 ಎಕರೆ ಆಸ್ತಿ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ.

ದಾನವಾಗಿ ಮಠಕ್ಕೆ ದೊರಕಿದ್ದ ಆಸ್ತಿ

ಸರ್ವೇ ನಂಬರ್ 410/2ಬಿ 15 ಎಕರೆ 6 ಗುಂಟೆ ಜಮೀನು ದಾನವಾಗಿ ಮಠಕ್ಕೆ ಬಂದಿತ್ತು. ಈ 15 ಎಕರೆ ಆಸ್ತಿ ಪೈಕಿ 11 ಎಕರೆ 19 ಗುಂಟೆ ಆಸ್ತಿಯಲ್ಲಿ ವಕ್ಫ್ ಅಂತ ನಮೂದಾಗಿದೆ. ಮಠದ ಆಸ್ತಿ ಉತಾರದಲ್ಲಿ ರೆಹಮಾನ್ ಶಾವಲಿ ದರ್ಗಾ ವಕ್ಫ್ ಆಸ್ತಿ ಅಂತ ಸೇರ್ಪಡೆಯಾಗಿದೆ. ಮಠದ ಉಚಿತ ಪ್ರಸಾದ ನಿಲಯದ ಹೆಸರಲ್ಲಿ ಕೇವಲ 3 ಎಕರೆ 27 ಗುಂಟೆ ನಮೂದಾಗಿದೆ. ನೋಟಿಸ್ ನೀಡದೇ ಏಕಾಏಕಿ ವಕ್ಫ್ ಹೆಸರು ಉಲ್ಲೇಖಿಸಿದ್ದಕ್ಕೆ ಶ್ರೀಗಳು, ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಕ್ಫ್ ಕಾನೂನು ಮರುಪರಿಶೀಲನೆಗೆ ಒತ್ತಾಯಿಸಿದ್ದಾರೆ. ಜತೆಗೆ, ಮಠದ ಆಸ್ತಿ ಮರಳಿ ಬಿಟ್ಟು ಕೊಡುವಂತೆ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ. ಸರ್ಕಾರ ಕೂಡಲೇ ಮಠದ ಆಸ್ತಿ ಮಠಕ್ಕೆ ಬದಲಾಯಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸ್ಮಶಾನ ಜಾಗವೂ ವಕ್ಫ್ ಪಾಲು

ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಹುಣಸೀಕಟ್ಟಿ ರಸ್ತೆಗೆ ಹೊಂದಿಕೊಂಡಿರುವ ಸ್ಮಶಾನದ ಜಾಗದ ಪಹಣಿಯಲ್ಲಿಯೂ ವಕ್ಫ್ ಹೆಸರು ನಮೂದಾಗಿದೆ. ಸರ್ವೇ ನಂ-113ರ 4 ಎಕರೆ 1 ಗುಂಟೆ ಜಮೀನು ಕಂದಾಯ ಇಲಾಖೆಯ ಸ್ಮಶಾನ ಭೂಮಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಈ ಸ್ಮಶಾನದಲ್ಲಿ ಹಿಂದೂ ಮುಸ್ಲಿಮರು ಸೇರಿ ಎಲ್ಲ ಜನಾಂಗದವರು ಶವಸಂಸ್ಕಾರ ನೆರವೇರಿಸುತ್ತಿದ್ದರು. 1975ರಿಂದ 2019ರ ವರೆಗೆ ಈ ಕಾರ್ಯ ನಿರ್ವಿಘ್ನವಾಗಿ ನಡೆದುಕೊಂಡು ಬಂದಿತ್ತು . ಆದರೀಗ ಕಂದಾಯ ಇಲಾಖೆಯ ಸ್ಮಶಾನ ಪಹಣಿಯಲ್ಲಿ 2019ರಿಂದ ‘ಚಿಕ್ಕನರಗುಂದ ಮಕಾನ ವಕ್ಫ್ ಆಸ್ತಿ’ ಎಂದು ನಮೂದಾಗಿದೆ. ಇದರಿಂದ ಶವಸಂಸ್ಕಾರ ಮಾಡಲು ಜಾಗವಿಲ್ಲದ ಪರಿಸ್ಥಿತಿ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸರ್ಕಾರವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರೈತರ 50 ಎಕರೆ ಜಮೀನು ಪಹಣಿಯಲ್ಲೂ ವಕ್ಫ್ ಹೆಸರು

ಲಕ್ಷ್ಮೇಶ್ವರ ಪಟ್ಟಣದ ದೇಸಾಯಿ ಬಣದ ರೈತರ 50 ಎಕರೆ ಜಮೀನು ಪಹಣಿಯಲ್ಲಿಯೂ ವಕ್ಫ್ ಹೆಸರು ನಮೂದಾಗಿದೆ. 2018 ರಲ್ಲಿ ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದು, ಪಟ್ಟಣದ ಸರ್ವೆ ನಂಬರ್ 256/257ರ 50 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ದಾಖಲೆ ಪರಿಶೀಲನೆ ವೇಳೆ ವಕ್ಫ್​ ಅಧಿಕಾರಿಗಳ ತಪ್ಪು ಸಾಬೀತು, ಸಿಹಿ ಹಂಚಿ ಸಂಭ್ರಮಿಸಿದ ರೈತರು

‘ಊಳುವವನೇ ಹೊಲದ ಒಡೆಯ’ ಯೋಜನೆಯಲ್ಲಿ ರೈತರಿಗೆ ಈ ಜಮೀನು ಮಂಜೂರಾಗಿತ್ತು. ಅಂದಿನಿಂದ ಖಾತೆ ಪಹಣಿಯಲ್ಲಿನ ಹೆಸರು ಬದಲಾವಣೆಗೆ ರೈತರ ಅಲೆದಾಟ ನಡೆಯುತ್ತಿತ್ತು. ಪಹಣಿ ಹೆಸರು ಬದಲಾವಣೆ ಆಗದೇ ಇರುವ ಕಾರಣ ಸರ್ಕಾರದ ಸೌಲಭ್ಯಗಳಿಂದ ರೈತರು ವಂಚಿತರಾಗುವಂತಾಗಿದೆ. ಜಮೀನು ಮಾರಾಟ ಮಾಡಲು, ಸರ್ಕಾರಿ ಸೌಲಭ್ಯ ಪಡೆಯಲಾಗದೆ ಪರದಾಡುವಂತಾಗಿದೆ. ಇದೀಗ ರೈತರು ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿಕೊಡಿ ಎಂದು ಲಕ್ಷ್ಮೇಶ್ವರ ತಹಶೀಲ್ದಾರ್​ಗೆ ಮನವಿ ಮಾಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ