AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆ ಪರಿಶೀಲನೆ ವೇಳೆ ವಕ್ಫ್​ ಅಧಿಕಾರಿಗಳ ತಪ್ಪು ಸಾಬೀತು, ಸಿಹಿ ಹಂಚಿ ಸಂಭ್ರಮಿಸಿದ ರೈತರು

ಉಪ್ಪಿನಬೆಟಗೇರಿ ಗ್ರಾಮದ ರೈತರ ಪಹಣಿಯಲ್ಲಿನ ವಕ್ಪ್​ ಹೆಸರು ವಿವಾದ ಸುಖಾಂತ್ಯ ಕಂಡಿದೆ. ಪಹಣಿ ಪತ್ರದಲ್ಲಿ ಜಮೀನು ವಕ್ಫ್‌ ಆಸ್ತಿಗೆ ಒಳಪಟ್ಟಿರುತ್ತದೆ ಎಂದು ನಮೂದಾಗಿದ್ದು, ಅದನ್ನು ಇದೀಗ ತಹಶೀಲ್ದಾರ್​​ ಸಭೆ ನಡೆಸಿ ರೈತರ ಸಮಸ್ಯೆಯನ್ನು ನಿವಾರಿಸಿದ್ದಾರೆ ಇದರಿಂದ ರೈತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ದಾಖಲೆ ಪರಿಶೀಲನೆ ವೇಳೆ ವಕ್ಫ್​ ಅಧಿಕಾರಿಗಳ ತಪ್ಪು ಸಾಬೀತು, ಸಿಹಿ ಹಂಚಿ ಸಂಭ್ರಮಿಸಿದ ರೈತರು
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Nov 06, 2024 | 9:41 PM

Share

ಧಾರವಾಡ, (ನವೆಂಬರ್ 06): ಧಾರವಾಡ ಜಿಲ್ಲೆಯ ಉಪ್ಪಿನಬೇಟಗೇರಿ ಗ್ರಾಮದಲ್ಲಿ ರೈತರಿಗೆ ಎದುರಾಗಿದ್ದ ವಕ್ಫ್ ಆಸ್ತಿ ಆತಂಕ ಕೊನೆಗೂ ದೂರಾಗಿದೆ. ತಹಶೀಲ್ದಾರ್​ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ರೈತರ ಜಮೀನಿನ ಮೇಲೆ ವಕ್ಫ್ ನಿಂದ ಯಾವುದೇ ಅಧಿಕಾರ ಇಲ್ಲ ಎಂದು ಸಾಬೀತಾಗಿದೆ. ಅಲ್ಲದೇ ತಹಶೀಲ್ದಾರ್​ ನೇತೃತ್ವದಲ್ಲಿ ನಡೆದ ದಾಖಲೆ ಪರಿಶೀಲನೆ ವೇಳೆ ವಕ್ಫ್​ ಅಧಿಕಾರಿಗಳ ತಪ್ಪು ಕಂಡುಬಂದಿದೆ. ಈ ಸಂಬಂಧ ವಕ್ಫ್ ಮಂಡಳಿಯಿಂದ ಸಹ ಎನ್​ಒಸಿ ಪಡೆದುಕೊಂಡರು. ಇದರೊಂದಿಗೆ ತಮ್ಮ ಪಹಣಿಯಲ್ಲಿನ ವಕ್ಫ್ ಎಂಬ ಹೆಸರು ತೆರವು ಆಗುತ್ತೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ರೈತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಕೊನೆಗೂ ರೈತರಿಗೆ ಸಿಕ್ತು ಗೆಲುವು

ರಾಜ್ಯದಲ್ಲಿ ವಕ್ಪ್ ಬೋರ್ಡ್ ನಿಂದ ರೈತರ ಆಸ್ತಿ ಕಬಳಿಕೆಗೆ ಹುನ್ನಾರ ನಡೆದಿರೋ ವಿವಾದ ವಿಜಯಪುರದಲ್ಲಿ ಮೊದಲು ಭುಗಿಲೆದ್ದಿತ್ತು. ಅದಾದ ಬೆನ್ನಲ್ಲಿಯೇ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯ ಆರು ರೈತರ ಜಮೀನು ಪಹಣಿಯಲ್ಲಿಯೂ ಈ ಹಿಂದೆಯೇ ವಕ್ಪ್ ಆಸ್ತಿ ಎಂದು ನಮೂದಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಸುದ್ದಿಯಾಗುತ್ತಿದ್ದಂತೆಯೇ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ರೈತರ ಪರ ಬೀದಿಗಿಳಿದು ಹೋರಾಟ ಮಾಡಿದ್ದರು. ಕಳೆದ ವಾರ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ್ದರೆ, ಎರಡು ದಿನಗಳ ಹಿಂದೆ ಜಿಲ್ಲಾ ವಕ್ಫ್ ಕಚೇರಿಗೆ ಮುತ್ತಿಗೆ ಹಾಕುವ ಯತ್ನವೂ ನಡೆದಿತ್ತು. ಈ ಎಲ್ಲ ವಿದ್ಯಮಾನಗಳ ಬೆನ್ನಲ್ಲಿಯೇ ವಕ್ಫ್ ಅಧಿಕಾರಿಗಳು ಮತ್ತು ಸಂಬಂಧಿತ ರೈತರನ್ನು ಸೇರಿಸಿ, ಸಭೆ ಮಾಡಿ ದಾಖಲೆಗಳನ್ನು ಪರಿಶೀಲಿಸಿದ ತಹಸೀಲ್ದಾರರು, ರೈತರ ಪರ ನ್ಯಾಯ ಕೊಟ್ಟಿದ್ದಾರೆ. ಇದು ರೈತರಿಗೆ ಸಿಕ್ಕ ದೊಡ್ಡ ಗೆಲುವಾಗಿದೆ.

ಇದನ್ನೂ ಓದಿ: ಧಾರವಾಡ ರೈತರಿಗೂ ಶುರುವಾಯ್ತು ವಕ್ಫ್‌ ನಡುಕ: ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಉಲ್ಲೇಖ

ವಕ್ಪ್ ಅಧಿಕಾರಿಗಳ ತಪ್ಪು ಸಾಬೀತು

ಅಷ್ಟಕ್ಕೂ ರೈತರ ಯಾವುದೇ ತಪ್ಪಿಲ್ಲದೇ ಹೀಗೆ ಏಕಾಏಕಿಯಾಗಿ ಪಹಣಿಲ್ಲಿ ವಕ್ಫ್ ಅನ್ನೋದು ಬಂದಾಗ, ರೈತರು ತಹಸೀಲ್ದಾರ ಕಚೇರಿ ಮತ್ತು ವಕ್ಫ್ ಕಚೇರಿಗೆ ಅಲೆದಾಡಿ ಅಲೆದಾಡಿ ಅಲೆದಾಡಿ ಸುಮ್ಮನಾಗಿಬಿಟ್ಟಿದ್ದರು. ಆದರೆ ಯಾವಾಗ ರಾಜ್ಯಾದ್ಯಂತ ಈ ವಕ್ಪ್ ವಿವಾದ ಭುಗಿಲೆದ್ದಿತೋ ಆಗ ಉಪ್ಪಿನ ಬೆಟಗೇರಿ ರೈತರ ನೋವಿಗೂ ಸ್ಪಂದನೆ ಸಿಕ್ಕಿತ್ತು. ಹೀಗಾಗಿ ತಹಶೀಲ್ದಾರ್ ಸಭೆ ನಡೆಸಿದಾಗ, ಇದರಲ್ಲಿ ವಕ್ಪ್ ಅಧಿಕಾರಿಗಳದ್ದೇ ತಪ್ಪಿರೋದು ಸಾಬೀತಾಗಿದೆ.

1965ರಲ್ಲಿ ಜಮೀನು ಸರ್ವೆ ನಂಬರ್ ಗಳ ಅಪ್ಡೇಟ್ ಆದಾಗ, ಕೆಲವೊಂದು ಸರ್ವೆ ನಂಬರಗಳು ವಿಂಗಡಣೆಯಾಗಿ ಬ್ಲಾಕ್ ಗಳಾಗಿ ಪರಿವರ್ತನೆಗೊಂಡಿದ್ದವು. ಆದರೆ ಈ ಬ್ಲಾಕ್ ಗಳ ಬಗ್ಗೆ ವಕ್ಪ್ ಮಂಡಳಿ ಯಾವುದೇ ದಾಖಲೆ ಅಪ್ಡೇಟ್ ಮಾಡಿರಲಿಲ್ಲ. ಹಳೆ ಸರ್ವೆ ನಂಬರ್ ಆಧರಿಸಿಯೇ ಪಹಣಿಯಲ್ಲಿ ವಕ್ಪ್ ಅಂತಾ ಸೇರಿಸಿತ್ತು ಅನ್ನೋದು ಸಭೆಯಲ್ಲಿ ಸಾಬೀತಾಗಿದೆ. ಹೀಗಾಗಿ ಸಂಬಂಧವೇ ಇಲ್ಲದ ರೈತರ ಪಹಣಿಯಲ್ಲಿ ಹೀಗೆ ಬಂದಿತ್ತು.

ಇನ್ನು ಧಾರವಾಡ ತಾಲೂಕಿನಲ್ಲಿ ವಕ್ಫ್​​ಗೆ ಸಂಬಂಧಿಸಿದಂತೆ 22 ರೈತರ ಪಹಣಿಗಳಲ್ಲಿ ತಿದ್ದುಪಡಿಯಾಗಿದ್ದು, ಅದರಲ್ಲಿ ಆರು ಕೇಸ್ ಇತ್ಯರ್ಥ ಮಾಡಿದ್ದೇವೆ. ಈ ಸಂಬಂಧ ವಕ್ಫ್ ಅಧಿಕಾರಿಗಳಿಂದ ಎನ್ ಒ ಸಿ ಸಹ ಪಡೆದಿದ್ದು, ಇನ್ನೆರಡು ದಿನದಲ್ಲಿ ಅಧಿಕೃತ ಆದೇಶ ಸಹ ಹೊರಬೀಳಲಿದೆ ಎಂದು ಹೇಳಿದ್ದಾರೆ. ಯಾವಾಗ ತಮ್ಮ ಪಹಣಿಯಲ್ಲಿರೋ ವಕ್ಫ್ ಹೆಸರು ಇನ್ನು ಮುಂದೆ ಕಾಣೆಯಾಗುತ್ತೇ ಅನ್ನೋ ವಿಷಯ ಖಚಿತವಾಯ್ತೋ ಆಗ ತಹಶೀಲ್ದಾರ್ ಕಚೇರಿ ಎದುರಿನಲ್ಲಿನೇ ರೈತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿ, ರೈತರಿಗೆ ಆತಂಕ ಸೃಷ್ಟಿ ಮಾಡಿದ್ದ ವಕ್ಫ್ ರಗಳೆ ಸಧ್ಯಕ್ಕೆ ಈ ಗ್ರಾಮದ ಪಾಲಿಗೆ ಮುಗಿದ ವಿಷಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ