ಗದಗ ತಾಂಡಾಗಳಲ್ಲಿ ತೀಜ್ ಹಬ್ಬದ ಸಂಭ್ರಮ; ಕುಣಿದು ಸಂಭ್ರಮಿಸಿದ ಲಂಬಾಣಿ ಬೆಡಗಿಯರು

| Updated By: sandhya thejappa

Updated on: Oct 16, 2021 | 8:47 AM

ತಾಂಡಾಗಳಲ್ಲಿ ತೀಜ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ದುಡಿಯಲು ದೂರದ ಪಟ್ಟಣಗಳಿಗೆ ಹೋದ ಜನರು ದಸರಾ ಹಬ್ಬದ ಮುಂಚಿತವಾಗಿ ತಾಂಡಾಗಳಿಗೆ ಬರುತ್ತಾರೆ. ಮನೆಗೆ ಬಣ್ಣ ಹಚ್ಚಿ ಶುದ್ಧ ಮಾಡುತ್ತಾರೆ.

ಗದಗ ತಾಂಡಾಗಳಲ್ಲಿ ತೀಜ್ ಹಬ್ಬದ ಸಂಭ್ರಮ; ಕುಣಿದು ಸಂಭ್ರಮಿಸಿದ ಲಂಬಾಣಿ ಬೆಡಗಿಯರು
ಲಂಬಾಣಿ ಬೆಡಗಿಯರ ನೃತ್ಯ
Follow us on

ಗದಗ: ದಸರಾ ವೇಳೆ ಹಸಿರು ಬೆಳೆ ಪೋಷಿಸುವ ಸಂಕೇತವಾಗಿ ಆಚರಣೆ ಮಾಡುವ ಬುಡಕಟ್ಟು ಜನಾಂಗದ ತೀಜ್ ಹಬ್ಬವನ್ನು ಗದಗ ತಾಲೂಕಿನ ಬೆಳದಡಿ ತಾಂಡಾದಲ್ಲಿ ಲಂಬಾಣಿಗರು ಶುಕ್ರವಾರ (ಅ.15) ಸಂಜೆ ಸಂಭ್ರಮದಿಂದ ಆಚರಿಸಿದರು. ಸಕಾಲಕ್ಕೆ ಮಳೆ ಬಂದು, ಸಮೃದ್ಧಿ ಬೆಳೆ ಬರಲಿ. ತಾಂಡಾದಲ್ಲಿ ಆರೋಗ್ಯ ನೆಲೆಸಲಿ ಎಂದು ತೀಜ್(ಹುಲ್ಲಿನ ಬುಟ್ಟಿ) ಹೊತ್ತ ಯುವತಿಯರು ಹಾಡಿನ ಮೂಲಕ ಪ್ರಾರ್ಥನೆ ಮಾಡುವ ದೃಶ್ಯಗಳು ನಾಗಾವಿ, ಬೆಳದಡಿ ತಾಂಡಾಗಳಲ್ಲಿ ವಿಶೇಷವಾಗಿ ಕಂಡುಬಂದವು.

ತಾಂಡಾಗಳಲ್ಲಿ ತೀಜ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ದುಡಿಯಲು ದೂರದ ಪಟ್ಟಣಗಳಿಗೆ ಹೋದ ಜನರು ದಸರಾ ಹಬ್ಬದ ಮುಂಚಿತವಾಗಿ ತಾಂಡಾಗಳಿಗೆ ಬರುತ್ತಾರೆ. ಮನೆಗೆ ಬಣ್ಣ ಹಚ್ಚಿ ಶುದ್ಧ ಮಾಡುತ್ತಾರೆ. ದಸರಾ ಆಚರಣೆಯ 9 ದಿನ ಮುಂಚಿತವಾಗಿ ತಾಂಡಾದ ನಾಯಕ ಅಥವಾ ಸೇವಾಲಾಲ್ ಮಹಾರಾಜ್ ಭಗತ್ (ಪೂಜಾರಿ) ದೇವಿಗೆ ಹಾಗೂ ಸೇವಾಲಾಲರಿಗೆ ಪೂಜೆ ಮಾಡಿ 9 ಗೋಧಿ ಕಾಳುಗಳನ್ನು ತಾಂಡಾದ ಹಿರಿಯ ಮಹಿಳೆಯರಿಗೆ ನೀಡುತ್ತಾರೆ. ಅದರ ಜೊತೆಗೆ ಹೆಚ್ಚಿನ ಕಾಳುಗಳನ್ನು ಸೇರಿಸಿ ಪ್ರತಿಯೊಂದು ಮನೆಯಲ್ಲಿ ಬಿದುರಿನ ಬುಟ್ಟಿಯಲ್ಲಿ ಮಣ್ಣು, ದೇಶಿ ಆಕಳ ಸಗಣಿ ಗೊಪ್ಪರ ಹಾಕಿ ಗೋಧಿ ಬೀಜಗಳನ್ನು ನೆಡುತ್ತಾರೆ. ಅದಕ್ಕೆ ಸೂರ್ಯನ ಬೆಳಕು ತಾಗದಂತೆ ಮುಚ್ಚಿ ಇಡುತ್ತಾರೆ. ಪ್ರತಿದಿನ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾರೆ. ಇದಕ್ಕೆ ತೀಜ್ ಬುರೆರೋ (ಮುಚ್ಚಿಡುವುದು) ಎಂದು ಕರೆಯುತ್ತಾರೆ.

ಕುಣಿದು ಕುಪ್ಪಳಿಸಿದ ಬಂಜಾರ ಬೆಡಗಿಯರು
9 ದಿನಗಳ ಕಾಲ ಸಂಜೆ ವೇಳೆ ನಡೆಯುವ ಈ ಹಬ್ಬದಲ್ಲಿ ಮದುವೆಯಾಗದ ತಾಂಡಾದ ಬಂಜಾರ ಬೆಡಗಿಯರು ಪ್ರಮುಖ ಪಾತ್ರವಹಿಸುತ್ತಾರೆ. ಅವರಿಗೆ ಹಿರಿಯ ಮಹಿಳೆಯರು ಮಾರ್ಗದರ್ಶನ ನೀಡುತ್ತಾರೆ. ಪ್ರತಿ ದಿನವೂ ರಾತ್ರಿ ಪೂಜೆಯ ನಂತರ ವೃತ್ತಾಕಾರದಲ್ಲಿ ಹೆಣ್ಣುಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. ಬಂಜಾರ ಸಂಪ್ರದಾಯದ ಬಗ್ಗೆ, ದಸರಾ ಹಬ್ಬದ ಹಿನ್ನೆಲೆ ಬಗ್ಗೆ, ತೀಜ್ ಹಬ್ಬದ ಬಗ್ಗೆ ಹಾಡಿನ ರೂಪದಲ್ಲಿ ಹೇಳುತ್ತಾರೆ. ಕೆಲವೊಮ್ಮೆ ಒಡಪು ಇಟ್ಟು ಹಾಡುವಾಗ ಸ್ಪರ್ಧೆಗಳು ನಡೆಯುತ್ತವೆ. ಹಾಗಾಗಿ ದಸರಾ ಒಂಭತ್ತು ದಿನವೂ ತಾಂಡಾಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಕೊನೆಯ ದಿನ ಸಮೀಪದ ನದಿಗೆ ಅಥವಾ ಹಳ್ಳಕ್ಕೆ ಹೋಗಿ ಸಸಿಗಳನ್ನು ನೀರಲ್ಲಿ ಬಿಟ್ಟು, ಗಂಗಾಮಾತಗೆ ಪ್ರಾರ್ಥಿಸುತ್ತಾರೆ. ನಂತರ ಬನ್ನಿ ಮುಡಿಯುತ್ತಾರೆ.

ಹುಲ್ಲಿನ ಬುಟ್ಟಿ ಹೊತ್ತ ಯುವತಿಯರು

ಹಬ್ಬದ ಆಚರಣೆಯಲ್ಲಿ ಪರಸ್ಪರರಿಗೆ ತೀಜ್ ಹಂಚಿಕೊಂಡು ಬಾಳು ಯಾವತ್ತೂ ಹಸಿರಾಗಲಿ, ಒಳ್ಳೆಯದಾಗಲಿ ಎಂದು ಹಾರೈಸಲಾಗುತ್ತದೆ. ಬಂಜಾರ ಶೈಲಿಯ ಹೊಸ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುತ್ತಾರೆ. ಹೀಗಾಗಿ ಇಂದಿಗೂ ನಮ್ಮ ಜನಾಂಗದ ಮಹಿಳೆಯರು ಉಡುಗೆ-ತೊಡುಗೆ ಬಿಟ್ಟಿಲ್ಲ ಎಂದು ಹಿರಿಯ ಮಹಿಳೆಯರಾದ ಸುವರ್ಣ ಟಿಕಪ್ಪ ನಾಯಕ, ಶೀಲವ್ವ ಕೇಶಪ್ಪ ಕಾರಭಾರಿ ಹೇಳಿದರು.

ಇದನ್ನೂ ಓದಿ

Fruits: ವಿವಿಧ ಬಗೆಯ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ?

ಬಿ ಎಮ್ ಡಬ್ಲ್ಯು ಇಂಡಿಯ ಸ್ಕೂಟರ್​ ತಯಾರಿಸಿರೋದು ಮಾತ್ರ ನಿಜ, ಆದರೆ ಮಾರುತ್ತಿರೋದು ಮಾತ್ರ ಕಾರಿನ ಬೆಲೆಯಲ್ಲಿ!