ನಾಗರಪಂಚಮಿಯಲ್ಲಿ ಜೋಕಾಲಿ ಕಟ್ಟಿ ಆಡುವುದು ಬಹಳ ಜೋರು. ವಯಸ್ಸಿನ ಬೇದವಿಲ್ಲದೆ ಮಕ್ಕಳು, ಹಿರಿಯರು ಎಲ್ಲರೂ ಜೋಕಾಲಿ ಆಡುತ್ತಾರೆ. ಅದೇ ರೀತಿಯಾಗಿ ಗದಗ (Gadag) ಜಿಲ್ಲೆ ಲಕ್ಷ್ಮೇಶ್ವರ (Lakshmeshwara) ಪಟ್ಟಣದ ಎಪಿಎಂಸಿ ಆವರಣದಲ್ಲಿ ಜೋಕಾಲಿ ಕಟ್ಟಿದ್ದಾರೆ. ಆದರೆ ಇಲ್ಲಿ ಜೋಕಾಲಿ ಆಡಿದ್ದು, ಮನುಷ್ಯರಲ್ಲ. ಅರೇ ಮತ್ಯಾರು ಅಂತಿರಾ ! ಕೋತಿ. ಹೌದು ನಾಗರಪಂಚಮಿ ನಿಮಿತ್ತ ಕಟ್ಟಿದ ಜೋಕಾಲಿಯಲ್ಲಿ ಕೋತಿ ಆರಾಮಾಗಿ ಯಾರ ಭಯವಿಲ್ಲದೆ ಜೋಕಾಲಿ ಆಡಿದೆ.
ಒಂದು ರೀತಿ ಇಡೀ ಎಪಿಎಂಸಿ ಆವರಣದ ಸಾಮ್ರಾಜ್ಯಕ್ಕೆ ನಾನೇ ರಾಜ ಎಂಬಂತೆ ಜೋಕಾಲಿಯಲ್ಲಿ ಕೂತು ಆನಂದದಿಂದ ಕೋತಿ ಜೋಕಾಲಿ ಆಡುತ್ತಿದೆ. ಕೋತಿ ಜೋಕಾಲಿ ಆಡುವುದನ್ನು ನೋಡಿದರೆ ಒಂದು ಕ್ಷಣ ನಿಬ್ಬೆರಾಗುತ್ತದೆ. ಅಷ್ಟೊಂದು ಚೆನ್ನಾಗಿ ಜೋಕಾಲಿ ಆಡುತ್ತಿದೆ.
ಒಂದು ಕೈಯಲ್ಲಿ ಹಗ್ಗವನ್ನು ಹಿಡಿದುಕೊಂಡು, ಬಾಲವನ್ನು ಜೋತು ಬಿಟ್ಟು ಜೋಕಾಲಿ ಆಡುತ್ತಿದೆ. ತೇಟ್ ಮನುಷ್ಯರು ಜೋಕಾಲಿ ಆಡುವಂತೆ. ಕೋತಿ ಜೋಕಾಲಿ ಆಡುತ್ತಿರುವ ಸನ್ನಿವೇಶವನ್ನು ಸ್ಥಳಿಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡದಿದ್ದಾರೆ. ವಿಡಿಯೋದಲ್ಲಿ ಕೋತಿ ಆರಾಮದಾಯಕವಾಗಿ ಜೋಕಾಲಿ ಆಡುವುದನ್ನು ನೋಡಬಹುದಾಗಿದೆ.