ದಸರಾ ರಜೆಯಿಲ್ಲ, ವಿಶ್ರಾಂತಿಯಿಲ್ಲ: ಎಸ್‌ಎಸ್‌ಎಲ್‌ಸಿ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು ಹಾಗೂ ಗ್ರಾಮಸ್ಥರ ವಿನೂತನ ಪ್ರಯೋಗ
ಗದಗ ಜಿಲ್ಲೆಯ ಮುಳಗುಂದ ಸರ್ಕಾರಿ ಪ್ರೌಢಶಾಲೆ ರಾಜ್ಯಕ್ಕೆ ಮಾದರಿಯಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶಕ್ಕಾಗಿ, ಶಿಕ್ಷಕರು ದಸರಾ ರಜೆಯನ್ನೂ ತ್ಯಜಿಸಿ ಮಕ್ಕಳಿಗೆ ವಸತಿ, ಊಟದ ವ್ಯವಸ್ಥೆಯೊಂದಿಗೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದಾರೆ. ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಟ್ಯೂಷನ್ ವೆಚ್ಚ ಭರಿಸಲು ಕಷ್ಟವಾಗುವುದರಿಂದ ಈ ಉಪಕ್ರಮವು ಶೈಕ್ಷಣಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತಿದೆ.

ಮುಖ್ಯಾಂಶಗಳು
- ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಇಡೀ ರಾಜ್ಯಕ್ಕೆ ಮಾದರಿ
- ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ತರಲು ಪಣ
- ದಸರಾ ರಜೆಯಲ್ಲೂ ಸಿಗುವ ರಜೆಯನ್ನು ತ್ಯಜಿಸಿ ಮಕ್ಕಳಿಗೆ ವಿಶೇಷ ತರಗತಿ
ಗದಗ, ಅ.20: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಹಾಗೂ ಮೂಲಸೌಕರ್ಯಗಳ ಕೊರತೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆ (RMSA) ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ತರಲು ಪಣ ತೊಟ್ಟಿರುವ ಈ ಶಾಲೆಯ ಶಿಕ್ಷಕರು, ದಸರಾ ರಜೆಯಲ್ಲೂ ಸಿಗುವ ರಜೆಯನ್ನು ತ್ಯಜಿಸಿ ಮಕ್ಕಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯೊಂದಿಗೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ತರಗತಿಯು ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಟ್ಯೂಷನ್‌ಗೆ ತೆರಳಲು ಆರ್ಥಿಕ ಸಾಮರ್ಥ್ಯವಿರುವುದಿಲ್ಲ. ಇದನ್ನು ಮನಗಂಡು ಶಾಲೆಯ ಶಿಕ್ಷಕರು ದಸರಾ ರಜೆ ಪಡೆಯದೆ ಪ್ರತಿದಿನ ಮಕ್ಕಳಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿರುವ ಒಟ್ಟು 30 ಮಕ್ಕಳ ಪೈಕಿ 26 ಮಕ್ಕಳು ನಿತ್ಯ ತಪ್ಪದೆ ರಜೆಯ ದಿನಗಳಲ್ಲೂ ಶಾಲೆಗೆ ಬಂದು ಪಾಠ ಕೇಳುತ್ತಿದ್ದಾರೆ. ಯಾವ ವಿದ್ಯಾರ್ಥಿ ಯಾವ ವಿಷಯದಲ್ಲಿ ಹಿಂದುಳಿದಿದ್ದಾನೋ , ಅಂಥವರಿಗೆ ವಿಶೇಷ ಕಾಳಜಿ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ.
ಸರ್ಕಾರಿ ಶಾಲೆಗಳ ಮಕ್ಕಳು ಕೂಡ ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೇರಬೇಕು ಎಂಬ ಸದಾಶಯದಿಂದ ಗ್ರಾಮಸ್ಥರು ಮತ್ತು ಶಿಕ್ಷಕರು ಕೈಜೋಡಿಸಿದ್ದಾರೆ. ಗಂಡು ಮಕ್ಕಳಿಗೆ ಶಾಲೆಯಲ್ಲಿಯೇ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಮಸ್ಥರ ಸಹಾಯದಿಂದ ಮಕ್ಕಳಿಗೆ ನಿತ್ಯ ಉಚಿತ ಹಾಗೂ ರುಚಿಕರವಾದ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. ಹೆಣ್ಣು ಮಕ್ಕಳು ಬೆಳಗಿನಿಂದ ಸಂಜೆಯವರೆಗೆ ತರಗತಿಗಳಲ್ಲಿ ಪಾಠ ಆಲಿಸಿ ತೆರಳುತ್ತಾರೆ. ಮುಳಗುಂದದ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಶೇ. 100ರಷ್ಟು ಫಲಿತಾಂಶ ದಾಖಲಾಗುತ್ತಿದೆ. ಈ ಬಾರಿಯೂ ಉತ್ತಮ ಫಲಿತಾಂಶ ಕಾಯ್ದುಕೊಳ್ಳಲು ರಜೆಯಲ್ಲೂ ವಿಶೇಷ ತರಗತಿಗಳು ಬಹಳ ಸಹಕಾರಿಯಾಗಿವೆ ಎಂದು ಪ್ರಧಾನ ಗುರುಗಳಾದ ಶರಣು ಪೂಜಾರ್ ಹಾಗೂ ಗದಗ ಗ್ರಾಮೀಣ ವಲಯದ ಬಿಇಒ ವಿ.ವಿ. ನಡುವಿನಮನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೀಲ್ಸ್ ಹುಚ್ಚಾಟ: ಡೆಡ್ಲಿ ವೀಲಿಂಗ್ ಮಾಡುತ್ತಿದ್ದ 9 ಯುವಕರ ಬಂಧನ
ತೇಜಸ್ವಿನಿ ಹಾಗೂ ವಿದ್ಯಾ ಸೇರಿದಂತೆ ಇತರೆ ವಿದ್ಯಾರ್ಥಿನಿಯರು ಮಾತನಾಡಿ, ರಜೆಯ ದಿನಗಳಲ್ಲಿ ಸಿಗುತ್ತಿರುವ ಈ ವಿಶೇಷ ತರಗತಿಗಳು ಹಾಗೂ ಸೌಲಭ್ಯಗಳು ನಮ್ಮ ಪರೀಕ್ಷಾ ತಯಾರಿಗೆ ತುಂಬಾ ಅನುಕೂಲವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Tue, 20 October 26




