ಗದಗ, ಅ.21: ತವರು ಮನೆಯಲ್ಲಿ ಮಹಿಳೆಯರಿಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡುವುದು ಸಹಜ. ಆದರೆ, ನವರಾತ್ರಿ (Navaratri) ಅಂಗವಾಗಿ ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 25 ಗರ್ಭಿಣಿ ಮಹಿಳೆಯರಿಗೆ ಅದ್ಧೂರಿ ಸಾಮೂಹಿಕ ಸೀಮಂತ (Baby Shower) ವಿಶೇಷ ಕಾರ್ಯಕ್ರಮ ಮಾಡಲಾಗಿದೆ.
ಗ್ರಾಮದ ದಂಡಿನ ದುರ್ಗಾದೇವಿ ಸೇವಾ ಸಮಿತಿ, 23ನೇ ವಾರ್ಷಿಕೋತ್ಸವ ಹಾಗೂ ನವರಾತ್ರಿ ಉತ್ಸವದ ಅಂಗವಾಗಿ ದಂಡಿನ ದುರ್ಗಾದೇವಿ ಸೇವಾ ಸಮಿತಿಯ ಆಶ್ರಯದಲ್ಲಿ ಹಾಗೂ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀಶಕ್ತಿ ಸಂಘಗಳು ಮತ್ತು ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಿಂದಾಗಿ ಲಕ್ಕುಂಡಿ ಗ್ರಾಮದಲ್ಲಿ ಹಬ್ಬದ, ಸಂಭ್ರಮದ ವಾತಾವರಣವೇ ನಿರ್ಮಾಣವಾಗಿತ್ತು. ಗರ್ಭಿಣಿ ಮಹಿಳೆಯರು ಹಸಿರು ಸೀರೆಯುಟ್ಟು ಕಂಗೊಳಿಸಿದರು. ಸಂಪ್ರದಾಯದ ಪ್ರಕಾರವೇ ವೇದಿಕೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಇದನ್ನೂ ಓದಿ: ಮೈಸೂರಲ್ಲಿ ನವರಾತ್ರಿ ಸಂಭ್ರಮ, ಕರಾವಳಿಯಲ್ಲಿ ದಾಂಡಿಯಾ ಕಿಚ್ಚು: ಎಲ್ಲೆಲ್ಲಿ ಹೇಗಿದೆ ದಸರಾ ಸಂಭ್ರಮ?
ಲಕ್ಕುಂಡಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದ ಬೃಹತ್ ವೇದಿಯಲ್ಲಿ 25 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಯಿತು. ಸಂಪ್ರದಾಯದ ಪ್ರಕಾರ ಅರಿಶಿನ, ಕುಂಕುಮ, ಬಳೆ, ಉತ್ತತ್ತಿ ಕುಪ್ಪಸದೊಂದಿಗೆ ಗರ್ಭಿಣಿಯರಿಗೆ ಉಡಿ ತುಂಬಿ ಆರತಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸೋಬಾನ ಪದ ಕೂಡ ಹಾಡಲಾಯಿತು. ಸಂಘಟಕರಿಂದಲೇ ಹಸಿರು ಸೀರೆ, ಬಳೆ, ಹೂವು, ಉಡಿ ತುಂಬುವ ವಸ್ತುಗಳು ನೀಡಲಾಯಿತು. ಗರ್ಭಿಣಿ ಮಹಿಳೆಯರ ಕುಟುಂಬಸ್ಥರಿಂದ ನೈಯಾಪೈಸೆ ಪಡೆಯದೇ ಸಮಿತಿ ವತಿಯಿಂದ ಉಚಿತವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ವಿಶೇಷವಾಗಿ ಮುಸ್ಲಿಂ ಮಹಿಳೆಯು ಸಹ ಸೀಮಂತ ಮಾಡಿಸಿಕೊಂಡಿದ್ದು ವಿಶೇಷವಾಗಿತ್ತು. ಹೀಗಾಗಿ ಇದೊಂದು ಭಾವೈಕ್ಯತೆಯ ಬಿಂಬಿಸುವ ಸಾಮೂಹಿಕ ಸೀಮಂತ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ನವರಾತ್ರಿ ಹಬ್ಬದಲ್ಲಿ ಈ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಸೀಮಂತ ಮಾಡಿಸಿಕೊಂಡ ಗರ್ಭಿಣಿಯರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಇನ್ನು ಉತ್ತರ ಕರ್ನಾಟಕ ವಿಶೇಷ ಖಾದ್ಯವಾದ ಹೂರಣ ಹೋಳಿಗೆ, ರೊಟ್ಟಿ, ಪಾಯಸಾ, ಸಂಡಿಗೆ ಅನ್ನ, ಸಾರು ಊಟದ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಕರ್ನಾಟಕದ ಖಾದ್ಯಗಳ ನೋಡಿದ್ರೆ ಬಾಯಿಲ್ಲಿ ನೀರು ಬರುವಂತಿತ್ತು. ಹೋಳಿಗೆ ವಿಶೇಷ ಅಂದರೆ, ಅಂಗನವಾಡಿ ಶಿಕ್ಷಕಿಯರು, ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಘಗಳ ಸದಸ್ಯರೇ ಸಂಘದ ವತಿಯಿಂದ ಹೋಳಿಗೆ ಸೇರಿ ವಿವಿಧ ನಮೂನೆ ಖಾದ್ಯಗಳು ಮಾಡಿಕೊಂಡು ಬಂದಿದ್ದು ವಿಶೇಷ.
ಈ ಕಾರ್ಯಕ್ರಮ ಬೇಕಾಗುವ ಸೀರೆ, ಉಡಿ ತುಂಬು ವಸ್ತುಗಳು, ಊಟದ ವ್ಯವಸ್ಥೆ ಎಲ್ಲವೂ ದಾನಿಗಳು ನೀಡುತ್ತಾರೆ. ದೇವಿ ಸನ್ನಿಧಾನದಲ್ಲಿ ಅದ್ಧೂರಿ ಸೀಮಂತ ಕಾರ್ಯ ಮಾಡಿಸಿಕೊಂಡು ಗರ್ಭಿಣಿ ಮಹಿಳೆಯರು ಕಾರ್ಯಕ್ರಮದ ಬಳಿಕ ಭರ್ಜರಿ ಹೋಳಿಗೆ ಊಟ ಮಾಡಿ ತಮ್ಮ ಮನೆಗಳಿಗೆ ತೆರಳಿದ್ದರು. ಈ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಹೋಳಿಗೆ ಊಟ ಸವಿದರು.
ಸೀಮಂತ ಕಾರ್ಯಕ್ರಮ ಮಾತ್ರವಲ್ಲ. ಸೀಮಂತ ಕಾರ್ಯಕ್ರಮಕ್ಕೆ ಭರತನಾಟ್ಯ ಕಾರ್ಯಕ್ರಮ ಮೆರಗು ನೀಡಿತು. ವೇದಿಕೆ ಮೇಲೆ ಗರ್ಭಿಣಿಯರು ಹಸಿರು ಸೀರೆಯುಟ್ಟು ಕಂಗೊಳಸಿದರೆ, ಇತ್ತ ದೇವಿಯ ಕುರಿತು ಬಾಲಕಿಯರು ಭರತನಾಟ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ