ಬದಲಾದ ತುಂಗಭದ್ರೆ ನೀರಿನ ಬಣ್ಣ: ಜೀವನಾಡಿ ನದಿಗೆ ಏನಾಯ್ತು?

| Updated By: ಗಂಗಾಧರ​ ಬ. ಸಾಬೋಜಿ

Updated on: Jan 16, 2025 | 8:24 PM

ಗದಗ ಜಿಲ್ಲೆಯ ತುಂಗಭದ್ರಾ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಸಕ್ಕರೆ ಕಾರ್ಖಾನೆಯಿಂದ ಬಿಡುಗಡೆಯಾದ ರಾಸಾಯನಿಕಗಳು ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ನದಿ ನೀರು ಕುಡಿದ ಜನರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅಧಿಕಾರಿಗಳು ನೀರಿನ ಪರೀಕ್ಷೆ ನಡೆಸಿದ್ದು, ಸದ್ಯ ಜನರಲ್ಲಿ ಆತಂಕ ಮನೆ ಮಾಡಿದೆ.

ಬದಲಾದ ತುಂಗಭದ್ರೆ ನೀರಿನ ಬಣ್ಣ: ಜೀವನಾಡಿ ನದಿಗೆ ಏನಾಯ್ತು?
ಬದಲಾದ ತುಂಗಭದ್ರೆ ನೀರಿನ ಬಣ್ಣ.. ಜೀವನಾಡಿ ನದಿಗೆ ಏನಾಯ್ತು..?
Follow us on

ಗದಗ, ಜನವರಿ 16: ಅದು ಉತ್ತರ ಕರ್ನಾಟಕದ‌ ಜೀವನದಿ. ಮೂರು ಜಿಲ್ಲೆಯ ಜನರು ದಾಹ ನೀಗಿಸುವ ತುಂಗೆ. ಆದರೆ ಈಗ ಈ ತುಂಗೆ ಸಂಪೂರ್ಣ ಮಲೀನವಾಗಿದ್ದಾಳೆ. ಮೂರು ಜಿಲ್ಲೆಯ ನಿದ್ದೆಗೆಡಿಸಿದ್ದಾಳೆ. ವಿಚಿತ್ರ ಅಂದರೆ ಅತೀ ವಿಷಕಾರಿಯಾಗಿದ್ದಾಳೆ ಎಂಬ ಆತಂಕ ಎದುರಾಗಿದೆ. ಇಡೀ ತುಂಗಭದ್ರಾ ನದಿ (Tungabhadra River) ಹಸಿರು ವರ್ಣಕ್ಕೆ ತಿರುಗಲು ಆ ಸಕ್ಕರೆ ಕಾರ್ಖಾನೆ ಕಾರಣ ಅಂತ ಜನರು ಕಿಡಿಕಾರಿದ್ದಾರೆ. ತುಂಗೆ ನೀರು ಕುಡಿದ ಜನರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.

ಹಸಿರಾದ ನೀರು: ಕುಡಿಯಲು ಜನರು ಹಿಂದೇಟು 

ಜಿಲ್ಲೆಯ ಮುಂಡರಗಿ ತಾಲೂಕು ಕೊರ್ಲಳ್ಳಿ ಬಳಿ ನದಿಯ ನೀರು ಸಂಪೂರ್ಣ ಹಸಿರಾಗಿದೆ. ಹಾಗಾಗಿ ಗದಗ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ವಿಪರ್ಯಾಸ ಅಂದರೆ, ಕಳೆದ ಒಂದು ವಾರದಿಂದ ನದಿ ನೀರು ಈ ರೀತಿಯ ಬಣ್ಣಕ್ಕೆ ತಿರುಗಿದ್ದು, ಮೊದ ಮೊದಲು, ನದಿ ನೀರು ಪಾಚಿಗಟ್ಟಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ದಿನಗಳೆದರೂ, ನೀರು ತನ್ನ ಮೊದಲಿನ ಬಣ್ಣಕ್ಕೆ ಹಿಂದಿರುಗಿಲ್ಲ. ನೀರು ಕುಡಿದ ಜನರಿಗೆ ಹೊಟ್ಟೆ ನೋವು ಶುರುವಾಗಿದೆಯಂತೆ. ಇದರಿಂದ ಆತಂಕಗೊಂಡ ನದಿ ಪಾತ್ರದಲ್ಲಿನ ರೈತರು ತಮ್ಮ ದನ, ಕರುಗಳನ್ನ ನದಿಯಲ್ಲಿ ನೀರು ಕುಡಿಸಲು ಹಿಂದೇಟು ಹಾಕಿದ್ದು, ನದಿ ನೀರನ್ನ ಜಾನುವಾರು ಸೇರಿದಂತೆ ತಾವುಗಳು ಕುಡಿಯಲು ಹೆದರುತ್ತಿದ್ದಾರೆ. ಮೂರು ಜಿಲ್ಲೆಯ ಜನರು ದಾಹ ನೀಗಿಸಬೇಕಿದ್ದ ತುಂಗಭದ್ರಾ ನದಿ ನೀರು ಕುಡಿಯಲು ಭಯ ಪಡ್ತಾಯಿದ್ದಾರೆ.

ಇದನ್ನೂ ಓದಿ: ಗದಗ: ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ನಿರ್ಮಾಣಕ್ಕೆ ಅನುದಾನ ನೀಡದ ಸರ್ಕಾರ, ಭಿಕ್ಷಾಟನೆ ಮೂಲಕ ಹಣ ಸಂಗ್ರಹ

ಗದಗ, ಕೊಪ್ಪಳ, ವಿಜಯನಗರ ಜಿಲ್ಲೆಯ ಸುಮಾರು 40ಕ್ಕೂ ಅಧಿಕಾರಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿದು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಂತ ಗ್ರಾಮಸ್ಥರು ಕೆಂಡಕಾರಿದ್ದಾರೆ. ಮುಂಡರಗಿ ತಾಲೂಕಿನ ಗಂಗಾಪೂರ ಬಳಿಯ ವಿಜಯನಗರ ಶುಗರ್ ಫ್ಯಾಕ್ಟರಿ ಕೆಮಿಕಲ್ ನೀರು ನದಿಗೆ ಹರಿಬಿಟ್ಟಿದ್ರಿಂದ ನದಿ ಕಲುಷಿತವಾಗಿದೆ ಅಂತ ರೈತರು, ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸಕ್ಕರೆ ಕಾರ್ಖಾನೆ ಪರಿಶೀಲನೆ ಮಾಡುತ್ತಿಲ್ಲವಂತೆ. ರಾತ್ರೋರಾತ್ರಿ ಸಕ್ಕರೆ ಕಾರ್ಖಾನೆ ಕಲುಷಿತ ನೀರು ನದಿಗೆ ಬಿಡಲಾಗುತ್ತಿದೆ ಎಂದು ಕೊರ್ಲಹಳ್ಳಿ ಗ್ರಾಮಸ್ಥ ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

ಮೀನುಗಾರರಲ್ಲಿ ಆತಂಕ

ಜಲಚರ ಪ್ರಾಣಿಗಳ ಜೀವಕ್ಕೂ ಅಪಾಯವಿದೆ ಅಂತ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ತುಂಗಭದ್ರಾ ನದಿಯ ಮೀನಗೆ ಈ ಭಾಗದಲ್ಲಿ ಭಾರಿ ಡಿಮ್ಯಾಂಡ್ ಇದೆ. ಆದರೆ ನದಿ ನೀರು ಕಲುಷಿತ ಆಗಿರೋದ್ರಿಂದ ಜನರು ಮೀನು ಖರೀದಿ ಮಾಡ್ತಿಲ್ಲ. ತಕ್ಷಣ ಅಧಿಕಾರಿಗಳು ನದಿ ನೀರು ಪರೀಕ್ಷೆ ಮಾಡಬೇಕು. ಕುಡಿಯೋಕೆ ಯೋಗ್ಯ ಇದೆಯೋ ಇಲ್ವೋ ಅನ್ನೋದು ಅಧಿಕಾರಿಗಳು ತಕ್ಷಣ ಸ್ಪಷ್ಟಪಡಿಸಬೇಕು ಎಂದು ಮೀನುಗಾರ ಮಹೇಶ್ ಹೇಳಿದ್ದಾರೆ.

ಇದನ್ನೂ ಓದಿ: DHFWS Gadag Recruitment 2025: DHFWS ಗದಗ ನೇಮಕಾತಿ, ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಇದ್ರಿಂದ ಎಲ್ಲಿ? ಯಾರ ಪ್ರಾಣಕ್ಕೆ ಹಾನಿಯಾಗುತ್ತೆದೆಯೋ ಅನ್ನೋ ಭಯದಲ್ಲಿ ರೈತವರ್ಗ ಚಡಪಡಿಸುತ್ತಾ, ಬೇರೆ ದಾರಿಯಿಲ್ಲದೇ ಅದೇ ಹಸಿರು ಬಣ್ಣಕ್ಕೆ ತಿರುಗಿದ ನೀರನ್ನ ಕೆಲವೊಂದು ಕಡೆ ಬಳಕೆ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ನದಿ ನೀರು ಈ ರೀತಿ ಕಲುಷಿತಗೊಂಡಿದ್ದರೂ ಸಹ, ಯಾವ ಇಲಾಖೆಯ ಅಧಿಕಾರಿಗಳೂ ತೀವ್ರಗತಿಯಲ್ಲಿ ಕಾರ್ಯಪ್ರವೃತ್ತರಾಗಿಲ್ಲ ಅಂತ ಜನರು ಕಿಡಿ ಕಾರ್ತಿದ್ದಾರೆ. ಇಂದು ನದಿ ಪಾತ್ರದ ಗ್ರಾಮಗಳಿಂದ ಇಂದು ಮುಂಡರಗಿ ತಹಶೀಲ್ದಾರ ಯರ್ರಿಸ್ವಾಮಿ ಭೇಟಿ ಪರಿಶೀಲನೆ ಮಾಡಿದ್ದಾರೆ. ನದಿ ನೀರು ಪರೀಕ್ಷೆಗೆ ಲ್ಯಾಬ್​ಗೆ ಕಳಿಸಲಾಗಿದ್ದು, ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ. ಇನ್ನೂ ನದಿ ಪಾತ್ರದ ಗ್ರಾಮಗಳಲ್ಲಿ ನೀರು ಕುಡಿಯದಂತೆ ಡಂಗರು ಸಾರಲಾಗಿದೆ ಎಂದಿದ್ದಾರೆ.

ಇನ್ನು ಬ್ಯಾರೇಜ್ ಹಿಂಭಾಗದಲ್ಲಿ ಗದಗ ಹಾಗೂ ಮುಂಡರಗಿ ಪ್ರದೇಶಗಳಿಗೆ ಕುಡಿಯುವ ನೀರು ಸಂಪರ್ಕಿಸುವ ಜ್ಯಾಕ್ ವೆಲ್ ಗಳಿದ್ದು, ಆ ಭಾಗದಲ್ಲಿ ನೀರು ಕಲುಷಿತಗೊಂಡಿಲ್ಲ ಎನ್ನಲಾಗ್ತಿದೆ. ಹೀಗಾಗಿ ಅಲ್ಲಿನ ಜ್ಯಾಕ್ ವೆಲ್ ಗಳಿಂದ ಹೊರಹೋಗುವ ನೀರಿನ ಪ್ರದೇಶಗಳಿಗೆ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿ ವರ್ಗ ಮೈ ಚಳಿ ಬಿಟ್ಟು, ತುಂಗಭದ್ರಾ ನದಿಗೆ ಬಂದಿರೋ ಗಂಭೀರ ಸಮಸ್ಯೆಯನ್ನ ಸರಿಪಡಿಸುವಲ್ಲಿ, ಕಾರ್ಯಪ್ರವೃತ್ತರಾಗುತ್ತಾರಾ? ಅನ್ನೋದನ್ನ ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.