ಸರಕಾರದ ದಿವ್ಯ ನಿರ್ಲಕ್ಷ್ಯ: ಪಾಳುಬಿದ್ದ ಡಾ.ಗಂಗೂಬಾಯಿ ಹಾನಗಲ್ ಮನೆ

ಸರಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಖ್ಯಾತ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಮನೆ ಪಾಳು ಬಿದ್ದಿದೆ. ಧಾರವಾಡ ನಗರದ ಶುಕ್ರವಾರ ಪೇಟೆ ಬಡಾವಣೆಯಲ್ಲಿರುವ ನಿವಾಸ ಹಂತ ಹಂತವಾಗಿ ಕುಸಿಯುತ್ತಿದ್ದು, ಇದರ ನಿರ್ವಹಣೆ ನೋಡಿಕೊಳ್ಳಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸ್ಮಾರಕವನ್ನು ಮರತೇ ಬಿಟ್ಟಿದೆ ಎಂಬುದು ಸ್ಥಳೀಯರ ಆರೋಪ.

ಸರಕಾರದ ದಿವ್ಯ ನಿರ್ಲಕ್ಷ್ಯ: ಪಾಳುಬಿದ್ದ ಡಾ.ಗಂಗೂಬಾಯಿ ಹಾನಗಲ್ ಮನೆ
ಪಾಳುಬಿದ್ದ ಮನೆ
Updated By: ಪ್ರಸನ್ನ ಹೆಗಡೆ

Updated on: Oct 10, 2025 | 6:56 PM

ಧಾರವಾಡ, ಅಕ್ಟೋಬರ್​ 10: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಆದ ಸಾಧನೆ ಮಾಡಿರುವವರ ಪೈಕಿ ಡಾ. ಗಂಗೂಬಾಯಿ ಹಾನಗಲ್ (Gangubai Hanga) ಹೆಸರು ಮುಂಚೂಣಿಯಲ್ಲಿರುತ್ತದೆ. ಇಂತಹ ಮೇರು ಗಾಯಕಿ ಹುಟ್ಟಿದ್ದು, ಬೆಳೆದಿದ್ದು ಸಂಗೀತ ಕಾಶಿ ಧಾರವಾಡದಲ್ಲಿ. ಹೀಗಿರುವಾಗ ಇವರು ನೆಲೆಸಿದ್ದ ಮನೆಯನ್ನು ನೋಡಿದರೆ ಎಂತವರೂ ಒಮ್ಮೆ ಗಾಬರಿಯಾಗುತ್ತಾರೆ. ಇದಕ್ಕೆ ಕಾರಣ ಮನೆಯ ಸದ್ಯದ ಸ್ಥಿತಿ. ಯಾರು ಎಷ್ಟೇ ಮನವಿ ಮಾಡಿದರೂ ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನಲೆ, ಖ್ಯಾತ ಗಾಯಕಿಯ ಮನೆ ಸಂಪೂರ್ಣ ಕುಸಿಯುವ ಹಂತ ತಲುಪಿದೆ.

ಧಾರವಾಡ ನಗರದ ಶುಕ್ರವಾರ ಪೇಟೆ ಬಡಾವಣೆಯಲ್ಲಿ ಡಾ. ಗಂಗೂಬಾಯಿ ಹಾನಗಲ್ ಅವರ ನಿವಾಸವಿದ್ದು, ಆ ಮನೆಯನ್ನು ಸರ್ಕಾರ ಸ್ಮಾರಕವಾಗಿ ಪರಿವರ್ತಿಸಿತ್ತು. ಇದಾದ ಕೆಲವೇ ವರ್ಷಗಳಲ್ಲಿ ಈ ಮನೆ ಭೂತ ಬಂಗಲೆಯಂತಾಗಿದ್ದು, ಸ್ಮಾರಕದ ಸ್ವರೂಪ ಕಳೆದುಕೊಂಡು ಸಂಪೂರ್ಣ ಪಾಳು ಬಿದ್ದಿದೆ. ಈ ಮನೆಯ ಬಳಿಯೇ ಗಂಗೂಬಾಯಿ ಅವರ ಶಿಷ್ಯ ಬಳಗದಿಂದ ಸಂಗೀತ ತರಗತಿ ನಡೆಯುತ್ತಿತ್ತು. ಪರ ಊರುಗಳಿಂದ ಆಗಮಿಸುತ್ತಿದ್ದ ಸಂಗೀತಾಸಕ್ತರು, ಗಣ್ಯರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಇಂತಹ ಜಾಗವೀಗ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದೆ.

ಇದನ್ನೂ ಓದಿ: ವರ್ಗಾವಣೆಯಾದರೂ ನಿಯುಕ್ತಿಗೆ ಅವಕಾಶ ಸಿಗದೇ ಪೊಲೀಸ್ ಇನ್ಸ್​ಪೆಕ್ಟರ್​ಗಳ ಪರದಾಟ

ಸ್ಮಾರಕವಾಗಿದ್ದ ಮನೆ

ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದ ಸಂದರ್ಭ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದ ಸರ್ಕಾರ, ಈ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಿತ್ತು. 25 ಲಕ್ಷ ರೂಪಾಯಿಗಳ ಪೈಕಿ 10 ಲಕ್ಷ ಹಣದಲ್ಲಿ ಈ ಮನೆಯನ್ನು ವಶಕ್ಕೆ ಪಡೆಯಲಾಗಿತ್ತು. ಉಳಿದ 15 ಲಕ್ಷದಲ್ಲಿ ಮನೆಯನ್ನು ನವೀಕರಿಸಿ ವಸ್ತು ಸಂಗ್ರಹಾಲಯ ಮಾಡಲಾಗಿತ್ತು. ಗಂಗೂಬಾಯಿ ಅವರ 96ನೇ ಜನ್ಮದಿನದಂದು ಅಂದರೆ 2008ರ ಮಾರ್ಚ್ 5ರಂದು ಸ್ಮಾರಕ ಉದ್ಘಾಟನೆಗೊಂಡ ಬಳಿಕ ನಾಲ್ಕು ವರ್ಷ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ ಬಳಿಕ ನಿರ್ವಹಣೆಯನ್ನು ನೋಡಿಕೊಳ್ಳಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸ್ಮಾರಕವನ್ನು ಮರತೇ ಬಿಟ್ಟಿದೆ.

ಮನೆಯ ಒಂದೊಂದೇ ಭಾಗ ಬೀಳಲು ಶುರುವಾದ ಬಳಿಕ ಇಲ್ಲಿದ್ದ ಪರಿಕರಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಸೇರಿ ಭದ್ರವಾಗಿವೆ. ಸಣ್ಣ ಪುಟ್ಟ ದುರಸ್ತಿಗಳನ್ನು ನಿರ್ಲಕ್ಷಿಸಿದ್ದರಿಂದ ಇಡೀ ಕಟ್ಟಡವನ್ನೇ ಮತ್ತೊಮ್ಮೆ ನಿರ್ಮಿಸುವ ಸ್ಥಿತಿ ಬಂದೊದಗಿದೆ. ಇದೀಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮತ್ತೆ ಎಲ್ಲವನ್ನು ಸರಿಪಡಿಸಬೇಕಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರವನ್ನೂ ಬರೆಯಲಾಗಿದೆ. ಆದರೆ ವರ್ಷಗಳು ಕಳೆದರೂ ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ಬಂದು ಸ್ಥಳ ಪರಿಶೀಲಿಸಿಲ್ಲ. ದುರಸ್ತಿಗೆ ಬೇಕಾದ ಅಂದಾಜು ವೆಚ್ಚದ ನೀಲನಕ್ಷೆಯನ್ನು ತಯಾರಿಸಲೇ ಇಲ್ಲ. ಹೀಗಾಗಿ ಈ ಮನೆಯ ಬಗೆಗಿನ ನಿರ್ಲಕ್ಷ್ಯ ಹಾಗೆಯೇ ಮುಂದುವರೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಕೂಡಲೇ ಎಲ್ಲರೂ ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ ಅವರಿಂದ ಯಾವ ಪ್ರಯೋಜನವೂ ಆಗಿಲ್ಲ ಅನ್ನೋದು ಸ್ಥಳೀಯರ ಆರೋಪ.

ಈ ಬಗ್ಗೆ TV9 ಡಿಜಿಟಲ್ ಜೊತೆಗೆ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಮಾತನಾಡಿದ್ದು, ಗಂಗೂಬಾಯಿ ಅವರ ಮನೆ ಈ ಸ್ಥಿತಿ ತಲುಪಿರೋದು ನಿಜಕ್ಕೂ ನೋವಿನ ಸಂಗತಿ. ಇದರಲ್ಲಿ ಸರಕಾರ, ಸ್ಥಳೀಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ತಪ್ಪು ಇದೆ. ಗಂಗೂಬಾಯಿ ಹಾನಗಲ್ ಸಂಗೀತ ಕ್ಷೇತ್ರ ಕಂಡ ಅದ್ಭುತ ಸಾಧಕಿ. ಅಂತವರನ್ನು ನಾವು ಮರೆಯುತ್ತೇವೆ ಎಂದರೆ ಹೇಗೆ? ಎಂತಹ ಕಷ್ಟಗಳೇ ಬಂದರೂ ತಮ್ಮ ಸಾಧನೆಯನ್ನು ಬಿಟ್ಟು ಅವರು ಹಿಂದೆ ಸರಿದವರಲ್ಲ. ಇಂತವರ ಬಗ್ಗೆ ಇಷ್ಟೊಂದು ನಿಷ್ಕಾಳಜಿ ಮಾಡಿದರೆ ಅದನ್ನು ಹೇಗೆ ಸಹಿಸಿಕೊಳ್ಳಬೇಕು? ಹೀಗಾಗಿ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಿಎಂಗೆ ಯತ್ನಾಳ್​ ಪತ್ರ

ಧಾರವಾಡದಲ್ಲಿರುವ ಗಂಗೂಬಾಯಿ ಹಾನಗಲ್ ಅವರ ಮನೆಯ ಜೀರ್ಣೋದ್ಧಾರದ ಬಗ್ಗೆ ಸಿಎಂಗೆ ಶಾಸಕ ಬಸನಗೌಡ ಯತ್ನಾಳ್ ಪತ್ರ ಬರೆದಿದ್ದಾರೆ. ಗಂಗೂಬಾಯಿ ಅವರ ಪ್ರತಿಮೆ ಅನಾವರಣ ಮಾಡುವಂತೆಯೂ ಪತ್ರದಲ್ಲಿ ಸಿದ್ದರಾಮಯ್ಯರನ್ನು ಶಾಸಕ ಯತ್ನಾಳ್ ಒತ್ತಾಯಿಸಿದ್ದಾರೆ.

‘ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’

ಇತ್ತೀಚಿಗಷ್ಟೇ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರು ಈ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ಸಂಸ್ಥೆಗೆ ದುರಸ್ತಿ ಯೋಜನೆಯ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಸಮಸ್ಯೆಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದು ಕನ್ನಡ & ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published On - 6:23 pm, Fri, 10 October 25