ಹೋಳಿ ಸಾಂಸ್ಕೃತಿಕ ಮಾನ್ಯತೆಗೆ ಗ್ರೀನ್ ಸಿಗ್ನಲ್: ಹಲವಾರು ವರ್ಷಗಳಿಂದ ಇದ್ದ ಬೇಡಿಕೆಗೆ ಸ್ಪಂದಿಸಿದ ಸಚಿವರು

| Updated By: ganapathi bhat

Updated on: Mar 15, 2021 | 7:52 PM

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಅರವಿಂದ ಲಿಂಬಾವಳಿ ಇದೀಗ ಸರ್ಕಾರದ ವತಿಯಿಂದಲೇ ಹೋಳಿ ಆಚರಣೆಗೆ ಸೈ ಎಂದು ಭರವಸೆ ನೀಡಿದ್ದು, ಇದೇ ವರ್ಷದಿಂದಲೇ ಅನುದಾನ ನೀಡುವ ವಾಗ್ದಾನವನ್ನು ಸಹ ಸಚಿವರು ನೀಡಿದ್ದಾರೆ.

ಹೋಳಿ ಸಾಂಸ್ಕೃತಿಕ ಮಾನ್ಯತೆಗೆ ಗ್ರೀನ್ ಸಿಗ್ನಲ್: ಹಲವಾರು ವರ್ಷಗಳಿಂದ ಇದ್ದ ಬೇಡಿಕೆಗೆ ಸ್ಪಂದಿಸಿದ ಸಚಿವರು
ಅರವಿಂದ ಲಿಂಬಾವಳಿ
Follow us on

ಬಾಗಲಕೋಟೆ: ದೇಶದ ಎರಡನೇ ಅತಿ ದೊಡ್ಡ ಹೋಳಿ ಆಚರಣೆಗೆ ಪ್ರಸಿದ್ದವಾದ ನಗರ ಎಂದರೆ ಅದು ಬಾಗಲಕೋಟೆ. ಈ ನಗರದ ಹೋಳಿ ಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ನಗರದಲ್ಲಿ ಪುರಾತನ ಕಾಲದಿಂದಲೂ ಬಂಡಿ ಹೋಳಿ ಆಚರಿಸುತ್ತಾ ಹಲಗೆ ವಾದನಕ್ಕೆ ಸಂಭ್ರಮ ಪಡುತ್ತಾರೆ. ಮೊದಲು ಹತ್ತು ದಿನಗಳ ಕಾಲ ನಡೆಯುತ್ತಿದ್ದ ಹೋಳಿ ಆಚರಣೆ ಸದ್ಯ ನಾಲ್ಕು ದಿನಕ್ಕೆ ಬಂದು ನಿಂತಿದೆ. ಇನ್ನು ಹೋಳಿಯನ್ನು ಸಾಂಸ್ಕೃತಿಕ ಮಾನ್ಯತೆ ನೀಡಬೇಕೆಂಬ ಕೂಗು ಹಲವಾರು ವರ್ಷಗಳಿಂದ ಇತ್ತು. ಸದ್ಯ ಅದಕ್ಕೆ ಸಚಿವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ಬಾರಿಯ ಹೋಳಿಗೆ ಮತ್ತಷ್ಟು ರಂಗು ಬರಲಿದೆ.

ಶಿವರಾತ್ರಿ ಅಮಾವಾಸ್ಯೆ ದಿನದಿಂದಲೇ ಬಾಗಲಕೋಟೆಯಲ್ಲಿ ಹಲಗೆ ಮೇಳ ನಡೆಸಲಾಗುತ್ತದೆ. ಹೋಳಿ ಹಬ್ಬದ ಈ 15 ದಿನ ಕೋಟೆ ನಗರಿಯಲ್ಲಿ ಹಲಗೆ ಮೇಳ ಇರಲಿದ್ದು, ಸೋಗಿನ ಬಂಡಿಯದ್ದು ಮತ್ತೊಂದು ಆಕರ್ಷಣೆ. ಹೋಳಿ ಹುಣ್ಣಿಮೆಯಿಂದ ಮೂರು-ನಾಲ್ಕು ದಿನ ನಡೆಯುವ ಬಣ್ಣದೋಕುಳಿ ಸಂಭ್ರಮ ಹೇಳತೀರದು. ದೇಶದಲ್ಲಿ ಕೋಲ್ಕತ್ತಾ ಬಳಿಕ ಬಾಗಲಕೋಟೆಯಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹೋಳಿ ನಡೆಯುತ್ತಾ ಬಂದಿದೆ. ದೇಶದ ಎರಡನೇ ಅತಿ ದೊಡ್ಡ ಹೋಳಿ ಎಂಬ ಹೆಸರು ಬಾಗಲಕೋಟೆಗೆ ಇದೆ. ಆದರೆ ಮುಳುಗಡೆಗೆ ಸಿಕ್ಕು ಬಾಗಲಕೋಟೆ ಮೂರು ಭಾಗವಾಗಿ ಹೋಗಿದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಹೋಳಿ ಸಂಭ್ರಮಕ್ಕೆ ಸ್ವಲ್ಪ ಮಂಕು ಕವಿಯುತ್ತಿರುವುದು ಸುಳ್ಳಲ್ಲ.

ಹೀಗಾಗಿಯೇ ಬಾಗಲಕೋಟೆ ಹೋಳಿ ಸಂಭ್ರಮ ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಆ ಸಂಭ್ರಮ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪುಣೆ ಗಣೇಶ ಉತ್ಸವ ಮಾದರಿಯಲ್ಲಿ ಬಾಗಲಕೋಟೆ ಹೋಳಿ ಹಬ್ಬಕ್ಕೆ ಸಾಂಸ್ಕೃತಿಕ ರೂಪ ನೀಡಬೇಕು. ಇದು ಸರ್ಕಾರದ ವತಿಯಿಂದ ನಡೆಯಬೇಕು. ಇದಕ್ಕಾಗಿ ಪ್ರತಿ ವರ್ಷ ಅನುದಾನ ಮೀಸಲಿಟ್ಟು, ಉತ್ಸವ ನಿರಂತರವಾಗಿ ನಡೆಯುವಂತಾಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಆದರೆ ಇದು ಆಗಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಅರವಿಂದ ಲಿಂಬಾವಳಿ ಇದೀಗ ಸರ್ಕಾರದ ವತಿಯಿಂದಲೇ ಹೋಳಿ ಆಚರಣೆಗೆ ಸೈ ಎಂದು ಭರವಸೆ ನೀಡಿದ್ದು, ಇದೇ ವರ್ಷದಿಂದಲೇ ಅನುದಾನ ನೀಡುವ ವಾಗ್ದಾನವನ್ನು ಸಹ ಸಚಿವರು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಹೋಳಿ ಆಚರಣೆ

ಅರವಿಂದ ಲಿಂಬಾವಳಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕ ಮಾ.13 ರಂದು ಬಾಗಲಕೋಟೆಗೆ ಆಗಮಿಸಿದ್ದರು. ಈ ವೇಳೆ ಸಚಿವರನ್ನು ಭೇಟಿ ಮಾಡಿದ ಬಾಗಲಕೋಟೆ ಹೋಳಿ ಆಚರಣಾ ಸಮಿತಿ ಮುಖಂಡರು ಬಾಗಲಕೋಟೆ ಹೋಳಿಗೆ ಸಾಂಸ್ಕೃತಿಕ ರೂಪ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಉತ್ಸವ ಆಚರಿಸುವಂತಾಗಬೇಕು ಎನ್ನುವ ಮನವಿಯನ್ನು ಕೊಟ್ಟರು. ಅದಕ್ಕೆ ಸ್ಪಂದಿಸಿರುವ ಸಚಿವರು ಅಸ್ತು ಎಂದಿದ್ದಾರೆ.

ಬಣ್ಣ ಹಚ್ಚಿ ಹೋಳಿ ಆಚರಣೆ ಮಾಡುವುದು ವಾಡಿಕೆ

ಬಾಗಲಕೋಟೆ ಹೋಳಿ ಆಚರಣೆಯ ಹಿಂದೆ ಅಸ್ಪೃಶ್ಯತೆ ನಿವಾರಣೆಯ ದಿವ್ಯ ಸಂದೇಶವೂ ಇದೆ. ಬಾಗಲಕೋಟೆ ಬಾಬುದಾರ ಕುಟುಂಬದಿಂದ ದಲಿತರ ಮನೆಗೆ ತೆರಳಿ ಕಾಮದಹನಕ್ಕೆ ಬೆಂಕಿ ತರುವುದಲ್ಲದೆ ಹೋಳಿ ಆಚರಣೆಗೆ ಅವರಿಗೆ ಆಹ್ವಾನ ನೀಡಿ ಬರುವ ಪದ್ಧತಿ ಹಿಂದಿನಿಂದಲೂ ಇದೆ. ಹುಣ್ಣಿಮೆಯ ಇಡೀ ದಿನ ಬಾಗಲಕೋಟೆಯ ಎಲ್ಲ ಗಲ್ಲಿಗಳಲ್ಲೂ ಕಾಮದಹನ ನಡೆಯುತ್ತದೆ. ಬಳಿಕ ಮೂರರಿಂದ ನಾಲ್ಕು ದಿನ ಬಣ್ಣ ದೋಕುಳಿ ಸಂಭ್ರಮ ನಡೆಯುತ್ತದೆ.

ಬಾಗಲಕೋಟೆಯಲ್ಲಿ ಹೋಳಿ ಆಚೆಣೆಗೆ ಸರ್ಕಾರದಿಂದ ಅನುಮತಿ

ಹಿಂದೆ ಹೋಳಿ ಆಚರಣೆ ಹತ್ತು ದಿನಗಳ ಕಾಲ ನಡೆಯುತ್ತಿತ್ತು. ನಂತರ ಅದು ಒಂದು ವಾರಕ್ಕೆ ಸೀಮಿತವಾಗಿತ್ತು, ಸದ್ಯ ಮೂರರಿಂದ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಹಾಗೆಯೇ ಪ್ರತಿ ದಿನ ರಾತ್ರಿ ಸೋಗಿನ ಬಂಡಿಗಳ ಸಂಭ್ರಮ ಇರುತ್ತದೆ. ಬಣ್ಣದ ಬಂಡಿಗಳ ಮೂಲಕ ಬಣ್ಣದೋಕುಳಿ ಜೊತೆಗೆ ಹಲಗೆ ವಾದ್ಯದ ಸದ್ದು ಈಗಾಗಲೇ ಶುರುವಾಗಿದ್ದು, ಎಲ್ಲವನ್ನೂ ನೋಡೋದೆ ಒಂದು ಸಂಭ್ರಮದ ಕ್ಷಣ. ಇನ್ನು ಈ ಬಾರಿ ಸರ್ಕಾರದಿಂದಲೇ ಅನುಮತಿ ಸಿಕ್ಕಿದ್ದು, ಹೋಳಿಯ ಹಳೆ ವೈಭವ ಮರುಕಳಿಸುತ್ತದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಒಂದು ವಾರ ನಡೆಯುವ ಜಾತ್ರೆಗೆ ಆಗಮಿಸಿದ ಹೊರ ರಾಜ್ಯದ ಭಕ್ತರು