ಬೆಂಗಳೂರು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕಿನ ತೀವ್ರತೆ ಹೆಚ್ಚಾಗಿ ಅದೆಷ್ಟೋ ಜನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಗಲು ಇರುಳು ಎನ್ನದೇ ದಿನವಿಡೀ ಕೆಲಸ ಮಾಡಿ ಕೊವಿಡ್ ಕರ್ತವ್ಯದಲ್ಲಿ ಮೃತಪಟ್ಟ ಸರ್ಕಾರಿ ನೌಕರರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಕೊವಿಡ್ ಕರ್ತವ್ಯದಲ್ಲಿದ್ದ ಅವಧಿಯಲ್ಲಿ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬಕ್ಕೆ ಮೂವತ್ತು ಲಕ್ಷ ರೂಪಾಯಿ ವಿಮಾ ಮೊತ್ತ ಪರಿಹಾರ ನೀಡಲಾಗುತ್ತದೆ. ಈ ಕುರಿತಂತೆ ಕೊವಿಡ್ ಕರ್ತವ್ಯ ನಿರತ ಅನುದಾನಿತ ಶಾಲಾ ಶಿಕ್ಷಕರು ಕೂಡಾ ವಿಮಾ ವ್ಯಾಪ್ತಿಗೆ ಸೇರ್ಪಡೆಯಾಗಲಿದ್ದಾರೆ.
ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 3 ಡ್ರೋಣ್ಗಳ ಮೂಲಕ ಸ್ಯಾನಿಟೈಸೇಶನ್
ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಳೆಯಿಂದ 10 ದಿನಗಳ ಕಾಲ 3 ಡ್ರೋಣ್ಗಳ ಮೂಲಕ ಸ್ಯಾನಿಟೈಸೇಶನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಸಂಸದ ಪಿ.ಸಿ. ಮೋಹನ್ ಸ್ವಂತ ವೆಚ್ಚದಲ್ಲಿ ಚೆನ್ನೈಯಿಂದ ಡ್ರೋಣ್ಗಳನ್ನು ತರಿಸಿದ್ದು, ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯ ತಿಳಿಸಿದ್ದಾರೆ.
ಇಡೀ ದೇಶ ಕೊವಿಡ್ ಎದುರಿಸುತ್ತಿರುವ ಸಮಯದಲ್ಲಿ ರಾಜ್ಯದಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸೇಶನ್ ಮಾಡಲಾಗುತ್ತಿದೆ. ಗರುಡಾ ಏರೋಸ್ಪೇಸ್ ಸಂಸ್ಥೆ ಉಚಿತವಾಗಿ ಡ್ರೋಣ್ ಮೂಲಕ ಸ್ಯಾನಿಟೈಸ್ ಮಾಡುವ ಕಾರ್ಯಕ್ಕೆ ಇಳಿದಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ. ಲಸಿಕೆ ಪೂರೈಕೆ ಆಗದ ಕಾರಣ ನಾಳೆಯಿಂದ ಲಸಿಕೆ ನೀಡಲ್ಲ. ನಾಳೆಯಿಂದ ಕೊರೊನಾ ವ್ಯಾಕ್ಸಿನ್ ನೀಡಿಕೆ ಆರಂಭ ಆಗುತ್ತಿಲ್ಲ. ಲಸಿಕೆ ಸಿಗದ ಕಾರಣ ವಿಳಂಬ ಆಗ್ತಿದೆ, ಇದು ವೈಫಲ್ಯ ಅಲ್ಲ. ಲಸಿಕೆ ಸಿಕ್ಕಿದ ಕೂಡಲೇ ಲಸಿಕೆ ನೀಡಿಕೆ ಆರಂಭ ಆಗುತ್ತದೆ. ಇದರಲ್ಲಿ ಅನಗತ್ಯವಾಗಿ ಪ್ರಧಾನಿ ಹೆಸರು ತರೋದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸೆಂಟ್ರಲ್ನಲ್ಲಿ ನಾಳೆಯಿಂದ ಡ್ರೋಣ್ ಮೂಲಕ ಸ್ಯಾನಿಟೈಸೇಶನ್; ಸಂಸದ ಪಿ ಸಿ ಮೋಹನ್ ಸ್ವಂತ ವೆಚ್ಚದಲ್ಲಿ ಡ್ರೋಣ್ ಖರೀದಿ