ಬೆಂಗಳೂರು: ಸರ್ಕಾರದ ಕೆಲ ಯೋಜನೆಗಳು ನೇರವಾಗಿ ಬಡತ ರೇಖೆಗಿಂತ ಕೆಳಗೆ ಇರುವ ಜನರ ಮನೆಗಳಿಗೆ ತಲುಪಲಿ ಎಂದು ರಾಜ್ಯ ಸರ್ಕಾರ (Karnataka Government) ಬಿಪಿಎಲ್ ಕಾರ್ಡ್ (BPL Card) ಅನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯದಲ್ಲಿನ ಸಾಕಷ್ಟು ಜನರಿಗೆ ಅನುಕೂಲವಾಗುತ್ತಿದೆ. ಆದರೆ ಇದೇ ಬಿಪಿಎಲ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ದುರುಳರು ನಮ್ಮ ಮಧ್ಯೆ ಇದ್ದಾರೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಸರ್ಕಾರಿ ನೌಕರರು ಮತ್ತು ಐಷಾರಾಮಿ ಕಾರು ಮಾಲೀಕರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವುದು ಬೆಳಕಿಗೆ ಬಂದಿದೆ.
ಆಶ್ಚರ್ಯವೆನಿಸಿದರು ಸತ್ಯ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಜನವರಿ 2021 ರಲ್ಲಿ ಪ್ರಾರಂಭಿಸಿದ ಕಾರ್ಯಾಚರಣೆಯಲ್ಲಿ ಈ ರೀತಿ ಅಕ್ರಮವಾಗಿ ಪಡಿತರ ಚೀಟಿ ಹೊಂದಿದವರಿಂದ 13 ಕೋಟಿ ರೂ. ದಂಡವನ್ನು ಸಂಗ್ರಹಿಸಿದೆ. ಇದರಲ್ಲಿ 17,521 ಸರ್ಕಾರಿ ನೌಕರರಿಂದ 11 ಕೋಟಿ ರೂ. ಸಂಗ್ರಹವಾಗಿದೆ.
ಅಂತ್ಯೋದಯ ಅನ್ನ ಯೋಜನೆ (AYY) ಮತ್ತು ಆದ್ಯತಾ ಕುಟುಂಬ ಕಾರ್ಡ್ (PHH) ಗಳನ್ನು ಅಕ್ರಮವಾಗಿ ಹೊಂದಿರುವ 4.63 ಲಕ್ಷ ಕುಟುಂಬಗಳನ್ನು ಇಲಾಖೆ ಗುರುತಿಸಿದೆ.
ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು, ಸರ್ಕಾರಿ ನೌಕರರು, ಇತರ ಆದಾಯ ತೆರಿಗೆ ಪಾವತಿದಾರರು, ಕೆಲಸ ಮಾಡುವ ಕುಟುಂಬದ ಯಾವುದೇ ಸದಸ್ಯರು, ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಯು) ಅಥವಾ ಸರ್ಕಾರಿ-ನೆರವಿನ ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿರುವ ಕುಟುಂಬಗಳು ಮತ್ತು ರೂ 1.2 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್‌ಗಳಿಗೆ ಅನರ್ಹರಾಗಿರುತ್ತಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಆಯುಕ್ತ (ಪ್ರಭಾರ) ಮತ್ತು ವಿಜಿಲೆನ್ಸ್ ಮತ್ತು ಐಟಿ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ಗೆ ಫುಲ್ ಡಿಮ್ಯಾಂಡ್: ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಮುಂದಾದ ಜನ
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಡೇಟಾಬೇಸ್ ಬಳಸಿ ಸರ್ಕಾರಿ ನೌಕರರನ್ನು ಗುರುತಿಸಲಾಗಿದೆ ಮತ್ತು ಆಧಾರ್ ವಿವರಗಳೊಂದಿಗೆ ಅವರ ಮಾಹಿತಿ ಕಲೆ ಹಾಕಲಾಗಿದೆ. ಹೆಚ್ಚುವರಿಯಾಗಿ, ನಾಲ್ಕು ಚಕ್ರ ವಾಹನಗಳನ್ನು ಹೊಂದಿದ್ದು, PHH ಕಾರ್ಡ್ ಹೊಂದಿರುವವರನ್ನು ಗುರುತಿಸಲು ಇಲಾಖೆಯು ಪ್ರಾದೇಶಿಕ ಸಾರಿಗೆ ಕಚೇರಿಗಳ (RTOs) ಜಂಟಿಯಾಗಿ ಕೆಲಸ ಮಾಡಿದೆ. ಈ ವೇಳೆ 12,012 ಐಷಾರಾಮಿ ಕಾರು ಮಾಲೀಕರು PHH ಕಾರ್ಡ್‌ಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.
“ಅಕ್ರಮವಾಗಿ ಕಾರ್ಡ್ ಹೊಂದಿರುವವರಿಗೆ ಇಲಾಖೆಯು ನೋಟಿಸ್ ನೀಡಿದ್ದು, ದಂಡ ಪಾವತಿಸಿದ ನಂತರ ಕಾರ್ಡ್‌ಗಳನ್ನು ಹಿಂತಿರುಗಿಸುವಂತೆ ಅಥವಾ ಪರಿವರ್ತಿಸುವಂತೆ” ಸೂಚಿಸಲಾಗಿದೆ. ಉಲ್ಲಂಘಿಸುವವರ ಪಾವತಿಸುವ ಸಾಮರ್ಥ್ಯ ಮತ್ತು ಮಾರ್ಗಸೂಚಿಗಳ ಉಲ್ಲಂಘನೆಯ ಆಧಾರದ ಮೇಲೆ ದಂಡವನ್ನು ಸಂಗ್ರಹಿಸಲಾಗುತ್ತಿದೆ ಎಂದು ಗಂಗ್ವಾರ್ ಹೇಳಿದ್ದಾರೆ.
ಆದ್ದರಿಂದ, ಇತರ ಆದಾಯ ತೆರಿಗೆ ಪಾವತಿದಾರರಿಂದ (ಸರ್ಕಾರಿ ನೌಕರರನ್ನು ಹೊರತುಪಡಿಸಿ) 88 ಲಕ್ಷ ರೂ., ದೂರುಗಳ ಆಧಾರದ ಮೇಲೆ ಅಕ್ರಮ ಕಾರ್ಡುದಾರರಿಂದ 85 ಲಕ್ಷ ಮತ್ತು ನಾಲ್ಕು ಚಕ್ರದ ಮಾಲೀಕರಿಂದ 28 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ.
ಮೂರು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವವರಿಂದ 1.21 ಲಕ್ಷ ಕುಟುಂಬಗಳಿಂದ 9,000 ರೂ. ಮತ್ತು 1.2 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ 22,810 ಕುಟುಂಬಗಳಿಂದ 8,124 ರೂ. ದಂಡ ಸಂಗ್ರಹಿಸಲಾಗಿದೆ.
ಒಟ್ಟಾರೆಯಾಗಿ, 21,232 ಸರ್ಕಾರಿ ನೌಕರರು ಅಕ್ರಮವಾಗಿ ಪಿಎಚ್‌ಹೆಚ್ ಕಾರ್ಡ್‌ಗಳನ್ನು ಹೊಂದಿದ್ದು, ಅವರಲ್ಲಿ 17,521 ಮಂದಿಗೆ ದಂಡ ವಿಧಿಸಲಾಗಿದೆ ಮತ್ತು ಉಳಿದವರಿಗೆ ಶೀಘ್ರದಲ್ಲೇ ದಂಡ ವಿಧಿಸಲಾಗುವುದು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಅವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
4.63 ಲಕ್ಷ ಅನರ್ಹ ಕಾರ್ಡ್ ಹೊಂದಿರುವವರ ಪೈಕಿ 3.33 ಲಕ್ಷ ಕಾರ್ಡ್‌ಗಳನ್ನು ಅರ್ಹತಾ ಮಾನದಂಡಗಳನ್ನು ಅನುಸರಿಸಿ ಎಪಿಎಲ್‌ಗೆ ಮೇಲ್ದರ್ಜೆಗೇರಿಸಲಾಗಿದೆ. ಪಡಿತರ ಚೀಟಿಗಳ ದುರುಪಯೋಗವನ್ನು ತಡೆಯಲು ಇಲಾಖೆಯು ನಿಯಮಿತವಾಗಿ ಕಾರ್ಯಾಚರಣೆ ನಡೆಸುತ್ತದೆ ಎಂದು ಗಂಗ್ವಾರ್ ತಿಳಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Tue, 30 May 23