ಬೆಂಗಳೂರು: ಸಾರಿಗೆ ಸಿಬ್ಬಂದಿಯ ಮುಷ್ಕರಕ್ಕೆ ಕಡಿವಾಣ ಹಾಕಲು ಸರ್ಕಾರ ಬೇರೆಯದ್ದೇ ಹಾದಿಯಲ್ಲಿ ಹೆಜ್ಜೆ ಹಾಕಿದೆ. ಖಾಸಗಿ ಬಸ್ಗಳ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ತಿಂಗಳಿಗೆ 18 ಸಾವಿರ ಸಂಬಳದಂತೆ, 3 ತಿಂಗಳವರೆಗೆ ವೇತನ ನೀಡುವ ಭಾರಿ ಕೊಡುಗೆ ಘೋಷಿಸಲು ಸರ್ಕಾರ ಯೋಚಿಸಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗುತ್ತಿದೆ.
ಒಂದು ವೇಳೆ.. 10 ದಿನಗಳಲ್ಲಿ ಸಾರಿಗೆ ಸಿಬ್ಬಂದಿಯ ಮುಷ್ಕರ ಅಂತ್ಯವಾದರೆ ಸರ್ಕಾರ ಭರವಸೆ ಕೊಟ್ಟಂತೆ 3 ತಿಂಗಳ ವೇತನ ನೀಡಲಿದೆ. ಖಾಸಗಿಯವರು 10 ದಿನವೇ ಕೆಲಸ ಮಾಡಿದರೂ, 3 ತಿಂಗಳ ವೇತನ ನೀಡುವ ಸಾಧ್ಯತೆಯಿದೆ. ಸಾರಿಗೆ ಸಿಬ್ಬಂದಿಯ ಪ್ರತಿಭಟನೆ ಅಂತ್ಯವಾಗುವವರೆಗೂ ಈ ಮೂಲಕ ಸರ್ಕಾರಿ ಬಸ್ ಓಡಿಸಲು ನಿರ್ಧರಿಸುವ ಸಾಧ್ಯತೆಯಿದೆ.
ಖಾಸಗಿ ಚಾಲಕರನ್ನೇ ನಿಗಮದ ಚಾಲಕರಾಗಿ ನೇಮಕಕ್ಕೆ ಚಿಂತನೆ?
ಒಂದು ವೇಳೆ ಪ್ರತಿಭಟನೆ ಹೀಗೆ ಮುಂದುವರಿದರೆ ಧರಣಿ ನಿರತ ಸಾರಿಗೆ ಸಿಬ್ಬಂದಿಯನ್ನ ಕೆಲಸದಿಂದ ವಜಾಗೊಳಿಸಿ, ಖಾಸಗಿ ಚಾಲಕರನ್ನೇ ನಿಗಮದ ಚಾಲಕರಾಗಿ ನೇಮಕಕ್ಕೆ ಚಿಂತನೆ ನಡೆಸಲಾಗಿದೆ. ಈ ತಂತ್ರದ ಮೂಲಕ ಬಸ್ ಓಡಿಸಲು ಇಲಾಖೆ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ನಾಳೆ ರಾತ್ರಿಯೊಳಗೆ ಈ ಕುರಿತು ಅಂತಿಮ ರೂಪರೇಷೆ ಸಿದ್ಧವಾಗುವ ನಿರೀಕ್ಷೆಯಿದೆ.