ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಕನಸಾಗಿದ್ದ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ನನಸಾಗಿದೆ. 2023-24ನೇ ಸಾಲಿನ ಬಜೆಟ್ (Karnataka Budget 2023) ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ (Kanakapura) ತಾಲ್ಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ಕನಕಪುರಕ್ಕೆ ಜಾರಿಯಾಗಿದ್ದ ಮೆಡಿಕಲ್ ಕಾಲೇಜ್ನ್ನು ಚಿಕ್ಕಬಳ್ಳಾಪುರಕ್ಕೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸ್ಥಳಾಂತರಿಸಿತ್ತು. ಇದಾದ ನಂತರ ಕೆರಳಿದ್ದ ಡಿಕೆ ಬ್ರದರ್ಸ್ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದೇ ತರುತ್ತೇವೆ ಎಂದು ಶಪಥಗೈದಿದ್ದರು. ಅದರಂತೆ ಇದೀಗ ಬಜೆಟ್ನಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ದೊರೆತಿದೆ.
2019ರಲ್ಲಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಎತ್ತಂಗಡಿಯಾದ ನಂತರ ಕೆರಳಿದ್ದ ಡಿಕೆ ಶಿವಕುಮಾರ್ ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಮೆಡಿಕಲ್ ಕಾಲೇಜು ಮಾತ್ರ ಕೊಡಲ್ಲ ಎಂದಿದ್ದರು. ಇದು ಬಸವಣ್ಣನ ನಾಡು. ಆದರೆ ಬಿಎಸ್ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ನಂತರ ಮೊದಲ ಕೆಲಸ ಮಾಡಿರುವುದು ಮೆಡಿಕಲ್ ಕಾಲೇಜು ಸ್ಥಳಾಂತರ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ ಸಿಎಂ ಸಿದ್ದರಾಮಯ್ಯ
ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅಭೂತಪೂರ್ವ ಗೆಲವು ಸಾಧಿಸಿದ ನಂತರ ಪ್ರಥಮಬಾರಿಗೆ ತವರು ಕ್ಷೇತ್ರಕ್ಕೆ ಹೋದ ಸಂದರ್ಭದಲ್ಲಿ “ಈ ಹಿಂದೆ ಮೆಡಿಕಲ್ ಕಾಲೇಜು ಆಗಬೇಕಿತ್ತು. ಬೊಮ್ಮಾಯಿ, ಯಡಿಯೂರಪ್ಪನವರು ಕ್ಯಾನ್ಸಲ್ ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಈಗ ಸಿಎಂಗೆ ಹೇಳಿ ಕ್ಯಾಬಿನೆಟ್ಗೆ ವಾಪಸ್ ತರಸಿದ್ದೇನೆ ಎಂದು ಹೇಳಿದ್ದರು.
ನಮ್ಮ ಜಿಲ್ಲಿಗೆ ಬಂದಿದ್ದ ಮೆಡಿಕಲ್ ಕಾಲೇಜ್ ಅನ್ನು ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋದರು. ಮೊದಲು ನಮ್ಮ ಜೊತೆಗೆ ಇದ್ದ ಅವರು ಕಿತ್ತಾಡಿಕೊಂಡು ಬೇರೆ ಕಡೆಗೆ ಹೋದರು. ಮುಂದೆ ಅವರನ್ನೇ ಕರೆದು ಇಲ್ಲಿ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಮಾಡಿಸಬೇಕು ಎಂಬುವುದು ನನ್ನ ಆಸೆಯಾಗಿದೆ. ಅವರು ಕಿತ್ತುಕೊಂಡು ಹೋಗಿರುವುದನ್ನು ಅವರಿಂದಲೇ ಸ್ಥಾಪಿಸಬೇಕು ಎಂಬ ಇಚ್ಛೆ ಇದೆ ಎಂದು ಕಿಚಾಯಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Fri, 7 July 23