Bangalore Mangalore Tunnel: ರಾಜಧಾನಿ ಬೆಂಗಳೂರು-ಬಂದರು ನಗರಿ ಮಂಗಳೂರು ನಡುವೆ ನೇರ ಸಂಪರ್ಕಕ್ಕೆ ಸುರಂಗಮಾರ್ಗ! ಇಲ್ಲಿದೆ ವಿವರ

| Updated By: ಸಾಧು ಶ್ರೀನಾಥ್​

Updated on: Jun 27, 2023 | 10:33 AM

ಹಾಸನದ ಮೂಲಕ ಬೆಂಗಳೂರು ಮಂಗಳೂರು ಸಂಪರ್ಕಿಸೋ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೃಹತ್ ಸುರಂಗ ಮಾರ್ಗದ ರಸ್ತೆ ನಿರ್ಮಾಣಗೊಂಡರೆ ಈ ಮಾರ್ಗದಲ್ಲಿ ಸಂಚಾರ ಮಾಡೋ ವಾಹನ ಸವಾರರಿಗೆ ಸುಗಮ ಸಂಚಾರದ ಜೊತೆಗೆ ಸಮಯವೂ ಉಳಿತಾಯವಾಗಿ ಹೆಚ್ಚು ಅನುಕೂಲವಾಗಲಿದೆ.

Bangalore Mangalore Tunnel: ರಾಜಧಾನಿ ಬೆಂಗಳೂರು-ಬಂದರು ನಗರಿ ಮಂಗಳೂರು ನಡುವೆ ನೇರ ಸಂಪರ್ಕಕ್ಕೆ ಸುರಂಗಮಾರ್ಗ! ಇಲ್ಲಿದೆ ವಿವರ
ರಾಜಧಾನಿ ಬೆಂಗಳೂರು-ಬಂದರು ನಗರಿ ಮಂಗಳೂರು ನಡುವೆ ನೇರ ಸಂಪರ್ಕಕ್ಕೆ ಸುರಂಗಮಾರ್ಗ!
Follow us on

ರಾಜಧಾನಿ ಬೆಂಗಳೂರು ಹಾಗು ಬಂದರು ನಗರಿ ಮಂಗಳೂರು ನಡುವೆ ಉತ್ತಮ ರಸ್ತೆ ನಿರ್ಮಾಣವಾಗಬೇಕು, ಸರಕು ಸಾಗಾಟ ಸೇರಿ ಜನ ಸಂಚಾರಕ್ಕೆ ಸುಸಜ್ಜಿತ ರಸ್ತೆ ಮಾರ್ಗಬೇಕು ಅನ್ನೋದು ದಶಕಗಳ ಬೇಡಿಕೆ, ಸಾಕಷ್ಟು ಒತ್ತಾಯ, ಹೋರಾಟಗಳ ನಂತರ ರೈಲು ಮಾರ್ಗ ಅಸ್ತಿತ್ವಕ್ಕೆ ಬಂದು ಚಾಲನೆಯಲ್ಲಿದ್ದು, ಇದೀಗ ಬೆಂಗಳೂರು (Bangalore) ಮಂಗಳೂರು (Mangalore) ನಡುವೆ ಕಗ್ಗಂಟಾಗಿರೋ ಶಿರಾಡಿಘಾಟ್ (Shiradighat) ನಲ್ಲಿ ಬರೊಬ್ಬರಿ 3 ಕಿಲೋ ಮೀಟರ್ ಸುರಂಗ, 10 ಕಿಲೋಮೀಟರ್ ಫ್ಲೈಓವರ್ ಒಳಗೊಂಡ ಒಟ್ಟು 30 ಕಿಲೋಮೀಟರ್ ಪರ್ಯಾಯ ಮಾರ್ಗ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬೆಂಗಳೂರು ಮಂಗಳೂರು ನಡುವೆ ಸುಲಭ ಹಾಗೂ ವೇಗ ಸಂಪರ್ಕಕ್ಕೆ ಬೇಕಾದ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಉತ್ಸಾಹ ತೋರಿದ್ದು ಎರಡು ವರ್ಷಗಳ ಹಿಂದೆಯೇ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಿದ್ದ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೂ ವೇದಿಕೆ ಸಿದ್ದಗೊಂಡಿದ್ದು 10 ಸಾವಿರ ಕೋಟಿ ರೂಪಾಯಿ ಮೀರದ ಬೃಹತ್ ಯೋಜನೆ ಇದೀಗ ಹೊಸ ಚರ್ಚೆ ಹುಟ್ಟು ಹಾಕಿದೆ.

ರಾಜ್ಯದ ಜೀವನಾಡಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮತ್ತೊಂದು ಮಹತ್ವದ ಯೋಜನೆ.. ಬೆಂಗಳೂರು ಮಂಗಳೂರು ನಡುವಿನ ಶಿರಾಡಿ ಘಾಟ್ ನಲ್ಲಿ 30 ಕಿಲೋ ಮೀಟರ್ ಪರ್ಯಾಯ ರಸ್ತೆ ನಿರ್ಮಾಣಕ್ಕೆ ನೀಲ ನಕ್ಷೆ ರೆಡಿ… ಲೋಕೋಪಯೋಗಿ ಸಚಿವರ ಮುಂದೆ ಪ್ರಸ್ತಾಪ, ರಾಜ್ಯದ ಮೊದಲ 3 ಕಿಲೋಮೀಟರ್ ಸುರಂಗ ಕಾಡಿನೊಳಗೆ 10 ಕಿಲೋ ಮೀಟರ್ ಫ್ಲೈಓವರ್ ಒಳಗೊಂಡ 30 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಸಿಗಲಿದೆಯಾ ಚಾಲನೆ… ಹೌದು ರಾಜ್ಯ ರಾಜಧಾನಿ ಬೆಂಗಳೂರು ಹಾಗು ಬಂದರು ನಗರಿ ಮಂಗಳೂರನ್ನ ಸಂಪರ್ಕಿಸೋ ರಾಷ್ಟ್ರೀಯ ಹೆದ್ದಾರಿ 75 ಅನ್ನು ರಾಜ್ಯದ ಜೀವನಾಡಿ ರಸ್ತೆ ಎಂದೆ ಕರೆಯಲಾಗುತ್ತದೆ.

ಪೆಟ್ರೋಲ್, ಡೀಸಲ್ ಸೇರಿ ನಾಡಿನ ಜನರಿಗೆ ತಲುಪಬೇಕಾದ ಜೀವನಾವಶ್ಯಕ ವಸ್ತುಗಳ ಪ್ರಮುಖ ಸಾಗಾಟ ಮಾರ್ಗ ಸಹ ಇದೇ ಆಗಿರೋದು ಇದನ್ನ ಜೀವನಾಡಿ ರಸ್ತೆ ಎಂದೇ ಪರಿಗಣಿಸಲ್ಪಟ್ಟಿದೆ. ನಿತ್ಯವೂ ಸರಕು ಸಾಗಣೆ ವಾಹನ ಸೇರಿ ಸಾವಿರಾರು ವಾಹನಗಳ ಸಂಚಾರ ಒಂದೆಡೆಯಾದ್ರೆ ನಾಡಿನ ಹೆಸರಾಂತ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಹ ಇದೇ ಮಾರ್ಗ. ಹಾಗಾಗಿ ಲಕ್ಷಾಂತರ ಜನರಿಗೆಈ ರಸ್ತೆ ಹೆಚ್ಚು ಉಪಯುಕ್ತವಾಗಿದೆ. ಆದ್ರೆ ಇಂತಹ ರಾಷ್ಟ್ರೀಯ ಹೆದ್ದಾರಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹರಡಿರೋ ಪಶ್ಚಿಮಘಟ್ಟದ ತಪ್ಪಲಿನಲ್ಲಿನ ಶಿರಾಡಿ ಘಾಟ್ ಮೂಲಕ ಹಾದು ಹೋಗೋದ್ರಿಂದ ಇಲ್ಲಿ ದಶಕಗಳಿಂದ ಸುಸಜ್ಜಿತ ರಸ್ತೆ ಇಲ್ಲ. ಇದ್ದರೂ ಮಳೆಗಾಲದಲ್ಲಿ ಯಾವಾಗ ಬೇಕಿದ್ರು ಆಗೋ ಗುಡ್ಡ ಕುಸಿತ, ಅಪಾರ ವಾಹನಗಳ ಸಂಚಾರದಿಂದ ಹಾಗೂ ಅತಿಯಾದ ಮಳೆಯಿಂದ ರಸ್ತೆ ಗುಣಮಟ್ಟ ಕಾಯ್ದುಕೊಳ್ಳಲು ತೊಡಕಾಗಿ ಈ ಮಾರ್ಗದ ವಾಹನ ಸವಾರರು ಪಡಬಾರದ ಪಾಡು ಪಡುತ್ತಿದ್ದಾರೆ.

ಈಗ ಈ ಮಾರ್ಗದಲ್ಲಿ ಚತುಷ್ಪತ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದರೂ ಭವಿಷ್ಯದಲ್ಲಿ ಹೆಚ್ಚಿನ ವಾಹನ ಸಂಚಾರ ಆದ್ರೆ ಆಗ ಪರ್ಯಾ ಮಾರ್ಗದ ಅವಶ್ಯಕತೆ ಮನಗಂಡ ಅಧಿಕಾರಿ ವರ್ಗ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿಯಿಂದ ಅಡ್ಡಹೊಳೆವರೆಗೆ 30 ಕಿಲೋ ಮೀಟರ್ ಪರ್ಯಾಯ ಮಾರ್ಗಕ್ಕೆ ನೀಲನಕ್ಷೆ ರೆಡಿ ಮಾಡಿದೆ. 3 ಕಿಲೋ ಮೀಟರ್ ಸುರಂಗ, 10 ಕಿಲೋ ಮೀಟರ್ ಮುಗಿಲೆತ್ತರದ ಫ್ಲೈಓವರ್ ಒಳಗೊಂಡ ಈ ರಸ್ತೆ ನಿರ್ಮಾಣಕ್ಕೆ 10 ಸಾವಿರ ಕೋಟಿ ವೆಚ್ಚವಾಗಲಿದೆ ಎನ್ನೋ ಅಂದಾಜಿದೆ. ಎರಡು ದಿನಗಳ ಹಿಂದೆ ಶಿರಾಡಿ ಘಾಟ್ ಗೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೊಸ ಯೋಜನೆ ಬಗ್ಗೆ ವಿವರಣೆ ಮಾಡಿರೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಯೋಜನೆಯ ಮಹತ್ವ ವಿವರಿಸಿದ್ದು ಯೋಜನೆ ಜಾರಿಯಾದ್ರೆ ಅಪಘಾತ ತಡೆ ಜೊತೆಗೆ ಬೆಂಗಳೂರು-ಮಂಗಳೂರು ನಡುವೆ, ವೇಗದ ಹಾಗೂ ಸುರಕ್ಷಿತ ಸಂಚಾರಕ್ಕೆ ಅವಕಾಶ ಆಗಲಿದೆ ಎನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ ರವೀಂದ್ರ -ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ.

ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ನಿತ್ಯವೂ ಸಾವಿರಾರು ಸಂಖ್ಯೆಯ ಪ್ರಯಾಣಿಕರ ವಾಹನಗಳ ಜೊತೆಗೆ ಸರಕು ಸಾಗಣೆಯ ಭಾರೀ ಸಂಖ್ಯೆಯ ವಾಹನಗಳು ಓಡಾಡುತ್ತವೆ. ರಸ್ತೆ ಮೂಲಕ ಮಾತ್ರವೇ ಸರಕು ಸಾಗಣೆ ಕಷ್ಟ ಸಾಧ್ಯ ಎನ್ನೋದನ್ನ ಅರಿತ ಸರ್ಕಾರ ದಶಕಗಳ ಹಿಂದೆಯೇ ಕಠಿಣ ಪರಿಶ್ರಮದ ನಡುವೆ ರೈಲು ಮಾರ್ಗವನ್ನೂ ನಿರ್ಮಿಸಿದೆ. ಪಶ್ಚಿಮಘಟ್ಟವನ್ನ ಸೀಳಿಕೊಂಡು ಹಲವು ಸುರಂಗ, ಸೇತುವೆಗಳ ಮೂಲಕ ರೈಲುಮಾರ್ಗ ನಿರ್ಮಾಣವಾಗಿದೆ.

ಇದೀಗ ಇದೇ ಮಾದರಿಯಲ್ಲಿ ರಸ್ತೆ ಸಂಚಾರಕ್ಕೂ ಸುರಂಗ ಮಾರ್ಗ ನಿರ್ಮಿಸಲು ಪ್ಲಾನ್ ರೆಡಿಯಾಗಿದೆ. ಹಾಸನ ಜಿಲ್ಲೆಯ ಮಾರನಹಳ್ಳಿ ಬಳಿಯಿಂದ ಗುಂಡ್ಯವರೆಗೂ ಈ ಪರ್ಯಾಯ ರಸ್ತೆ ನಿರ್ಮಾಣವಾಗಲಿದೆ. ಅಡ್ಡಹೊಳೆ, ಗುಂಡ್ಯ, ಎಡಕುಮೇರಿ, ಕಡಗರವಳ್ಳಿ, ಮಾರನಹಳ್ಲಿ ಮೂಲಕ ಸುರಂಗ ಮಾರ್ಗ ಸಾಗಲಿದೆ. ಇದರಿಂದ ಈಗಾಗಲೆ ಬೆಂಗಳೂರಿನಿಂದ ಹಾಸನದ ವರೆಗೂ ಇರೋ ಚತುಷ್ಪತ ರಸ್ತೆ ಸಕಲೇಶಪುರದ ವೆರೆಗೂ ನಿರ್ಮಾಣ ಕಾರ್ಯ ಆಗುತ್ತಿರೋದರಿಂದ ಅದಕ್ಕೆ ಹೊಂದಿಕೊಂಡಂತೆ ಈ ಸುರಂಗ ನಿರ್ಮಾಣವಾದರೆ ಸರಕು ಸಾಗಣೆ ಸೇರಿ, ಇತರೆ ವಾಹನ ಸಂಚಾರಕ್ಕೂ ಅನುಕೂಲ ಆಗಲಿದೆ.

2018ರಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರೇ ಈ ಯೋಜನೆಯನ್ನ ಪ್ರಸ್ತಾಪ ಮಾಡಿ ಜಾರಿ ಬಗ್ಗೆ ಮಾತನಾಡಿದ್ದರು. ನಂತರ ಈ ಯೋಜನೆ ಬಗ್ಗೆ ಸಾಕಷ್ಟು ಪರ ವಿರೋದಿ ಚರ್ಚೆಗಳ ಕಾರಣದಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರೋ ಹೊಸ ಸರ್ಕಾರ ಈ ಯೋಜನೆ ಬಗೆಗೆ ಆಸಕ್ತಿ ತೋರಿದ್ದು, ಈ ಬಗ್ಗೆ ಶೀಘ್ರವೇ ಕೇಂದ್ರ ಸಚಿವರನ್ನು ಭೇಟಿಯಾಗೋದಾಗಿ ಹೇಳಿರೋ ಲೋಕೋಪಯೋಗಿ ಸಚಿವರು, ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು, ಪರಿಸರ ವಲಯ ಆಗಿರೋದರಿಂದ ಪರಿಸರದ ಮೇಲೂ ಯಾವುದೇ ಹಾನಿ ಆಗೋದಿಲ್ಲ ಎನ್ನೋದನ್ನ ಖಾತ್ರಿ ಮಾಡಿಕೊಂಡೇ ಈ ಯೋಜನೆ ಜಾರಿ ಬಗ್ಗೆ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ.

ಒಟ್ನಲ್ಲಿ ಅಪಾರ ಸಂಖ್ಯೆಯಲ್ಲಿ ವಾಹನಗಳು ಓಡಾಡೋ ಹಾಸನದ ಮೂಲಕ ಬೆಂಗಳೂರು ಮಂಗಳೂರು ಸಂಪರ್ಕಿಸೋ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೃಹತ್ ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕೆ ಯೋಜನೆಯೇನೋ ಸಿದ್ದಗೊಂಡಿದ್ದು ಶೀಘ್ರವಾಗಿ ಯೋಜನೆ ಜಾರಿಯಾದರೆ ಈ ಮಾರ್ಗದಲ್ಲಿ ಸಂಚಾರ ಮಾಡೋ ವಾಹನ ಸವಾರರಿಗೆ ಸುಗಮ ಸಂಚಾರದ ಜೊತೆಗೆ ಸಮಯವೂ ಉಳಿತಾಯವಾಗಿ ಹೆಚ್ಚು ಅನುಕೂಲವಾಗಲಿದೆ.

ಹಾಸನ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ