ಬೇಲೂರು: ದೇವಾಲಯದ ಆಸ್ತಿ ಕಂಡೋರ ಪಾಲು! ಕೋಟಿ ಬೆಲೆಯ ಭೂಮಿ ಹೊಡೆಯಲು ಅಧಿಕಾರಿಗಳ ಜತೆಗೂಡಿ ಸ್ಕೆಚ್?

ಬೇಲೂರಿನ ವಿದ್ಯಾಗಣಪತಿ ದೇವಸ್ಥಾನದ 10 ಗುಂಟೆ ಜಮೀನನ್ನು ಅಧಿಕಾರಿಗಳ ನೆರವಿನಿಂದ ಖಾಸಗಿ ವ್ಯಕ್ತಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಹಗರಣ ಬಯಲಾಗಿದೆ. 10 ಸಾವಿರ ಅಡಿ ಬದಲಿಗೆ 24 ಸಾವಿರ ಅಡಿಗೆ ಇ-ಸ್ವತ್ತು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ತನಿಖೆಗೆ ಆದೇಶಿಸಿದ್ದಾರೆ.

ಬೇಲೂರು: ದೇವಾಲಯದ ಆಸ್ತಿ ಕಂಡೋರ ಪಾಲು! ಕೋಟಿ ಬೆಲೆಯ ಭೂಮಿ ಹೊಡೆಯಲು ಅಧಿಕಾರಿಗಳ ಜತೆಗೂಡಿ ಸ್ಕೆಚ್?
ಬೇಲೂರು
Image Credit source: tv9
Edited By:

Updated on: Apr 11, 2026 | 2:32 PM

ಹಾಸನ, ಏಪ್ರಿಲ್ 11: ಹಾಸನ (Hassan) ಜಿಲ್ಲೆಯ ವಿಶ್ವವಿಖ್ಯಾತ ಬೇಲೂರಿನಲ್ಲಿ (Belur) ಕಂದಾಯ ಮತ್ತು ಪುರಸಭೆ ಅಧಿಕಾರಿಗಳ ಕರಾಮತ್ತಿನಿಂದಾಗಿ ಐತಿಹಾಸಿಕ ದೇವಾಲಯಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಖಾಸಗಿ ವ್ಯಕ್ತಿಯ ಪಾಲಾಗಿದೆ. ವಿದ್ಯಾಗಣಪತಿ ಟ್ರಸ್ಟ್ ಹೆಸರಿನಲ್ಲಿದ್ದ ಜಮೀನನ್ನು ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಹಗರಣ ನಡೆದಿದ್ದು ಹೇಗೆ?

ಪುರಸಭೆಯ ಸರ್ವೆ ನಂಬರ್ 27ರಲ್ಲಿ ಸುಮಾರು 50 ವರ್ಷಗಳಿಂದ ವಿದ್ಯಾಗಣಪತಿ ಟ್ರಸ್ಟ್ ಹೆಸರಿನಲ್ಲಿ 20 ಗುಂಟೆ ಭೂಮಿ ಇತ್ತು. ಈ ಪೈಕಿ 10 ಗುಂಟೆಯನ್ನು ಅರ್ಚಕರಿಗೆ ನೀಡಲಾಗಿತ್ತು. 1995ರಲ್ಲಿ ಅರ್ಚಕರು ತಮಗೆ ಮಂಜೂರಾಗಿದ್ದ 10 ಗುಂಟೆಯನ್ನು ಮಲ್ಲಿಕಾರ್ಜುನ್ ಎಂಬುವವರಿಗೆ ಮಾರಾಟ ಮಾಡಿದ್ದರು. ಆದರೆ, ಭೂಮಿ ಖರೀದಿ ಮಾಡಿದ ವ್ಯಕ್ತಿ ಅಧಿಕಾರಿಗಳ ಜೊತೆ ಶಾಮೀಲಾಗಿ, ತಾನು ಖರೀದಿಸಿದ 10 ಗುಂಟೆಯ ಜೊತೆಗೆ ದೇವಾಲಯಕ್ಕೆ ಸೇರಿದ ಉಳಿದ 10 ಗುಂಟೆಯನ್ನೂ ಸೇರಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ.

ಅಧಿಕಾರಿಗಳ ಸಾಥ್

ಅನ್ಯಕ್ರಾಂತ (ಅಲಿನೇಷನ್) ಮಾಡುವಾಗ ದಿಕ್ಕುಗಳನ್ನು ಅದಲುಬದಲು ಮಾಡಿ ನಕ್ಷೆ ತಯಾರಿಸಲಾಗಿದೆ. ಕೇವಲ 10 ಸಾವಿರ ಅಡಿ ಜಾಗಕ್ಕೆ ದಾಖಲೆ ಇರಬೇಕಾಗಿದ್ದರೂ, ಪುರಸಭೆ ಅಧಿಕಾರಿಗಳು ಬರೋಬ್ಬರಿ 24 ಸಾವಿರ ಅಡಿಗೆ ಇ-ಸ್ವತ್ತು ಮಾಡಿಕೊಟ್ಟಿದ್ದಾರೆ. ಈ ಅಕ್ರಮದ ಬಗ್ಗೆ ದೂರು ನೀಡಿದ್ದರೂ, 2019ರಲ್ಲಿ ಅಧಿಕಾರಿಗಳು ಅದೇ ಅಕ್ರಮ ಅಳತೆಗೆ ದಾಖಲೆ ನೀಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ತನಿಖೆಗೆ ಉಸ್ತುವಾರಿ ಸಚಿವರ ಆದೇಶ

ಬೇಲೂರಿನಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಈ ಬಗ್ಗೆ ದೂರು ಕೇಳಿಬರುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಒಂದು ವಾರದೊಳಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ರೂ. ಅಕ್ರಮ ಆಸ್ತಿ! ಬೆಳಗಾವಿ ನಗರಾಭಿವೃದ್ಧಿ ಇಂಜಿನಿಯರ್ ಆಸ್ತಿ ಕಂಡು ಲೋಕಾಯುಕ್ತರೇ ಶಾಕ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us