ಹಾಸನ: ಭಾರತ್ ಜೋಡೋ ಯಾತ್ರೆ (Bharat Jodo Yatra) ಯಿಂದ ಬಿಜೆಪಿ (BJP) ಮೇಲೆ ಯಾವ ಪರಿಣಾಮ ಬೀರಲ್ಲ. ಅವರು ಹೇಗೆ ಜೋಡಿಸುತ್ತಾರೆ ಅನ್ನೋದಕ್ಕೆ ಉತ್ತರ ಹುಡುಕುವುದು ಕಷ್ಟ. ಒಂದಾಗಿರುವ ದೇಶವನ್ನ ಜೋಡಿಸುತ್ತೇನೆ ಎಂದು ರಾಹುಲ್ ಯಾವ ಅರ್ಥದಲ್ಲಿ ಹೇಳುತ್ತಿದ್ದಾರೆ ಅನ್ನೋದನ್ನ ಅವರನ್ನೇ ಕೇಳಿ ಎಂದು ಜಿಲ್ಲೆಯ ಅರಕಲಗೂಡಿನಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಟಾಂಗ್ ನೀಡಿದರು. ಚುನಾವಣೆ ಹತ್ತಿರ ಬರುತ್ತಿರುವ ವೇಳೆ ಯಾವುದೇ ವಿರೋಧ ಪಕ್ಷ ಪ್ರತಿಭಟನೆ, ಧರಣಿ, ಸಭೆಗಳನ್ನು ಮಾಡುತ್ತಾ ಇರುತ್ತೆ, ಅದನ್ನು ಮಾಡ್ತಾ ಇದ್ದಾರೆ. ಅವರು ಹೇಗೆ ಜೋಡಿಸುತ್ತಾರೆ ಅನ್ನುವ ಶಬ್ದಕ್ಕೆ ಉತ್ತರ ಹುಡುಕುವುದು ಕಷ್ಟ. ನರೇಂದ್ರ ಮೋದಿಯವರು ಬರುವ ಮುಂಚೆ ಕಾಶ್ಮೀರದಲ್ಲಿ ಪ್ರತ್ಯೇಕ, ಸಂವಿಧಾನ, ಪ್ರತ್ಯೇಕ ಕಾನೂನು ಉಂಟು ಅಂತ ಹೇಳುತ್ತಿದ್ದರು. 370 ಯನ್ನು ರದ್ದು ಮಾಡಿ ಭಾರತದೊಂದಿಗೆ ಕಾಶ್ಮೀರವನ್ನು ಸಂಪೂರ್ಣ ವಿಲಿನ ಮಾಡಿರುವ ಗೌರವ ಯಾರಿಗಾದರೂ ಇದ್ದರೆ ಅದು ನರೇಂದ್ರ ಮೋದಿಯವರಿಗೆ ಮಾತ್ರ.
ಒಂದಾಗಿರುವ ಭಾರತವನ್ನು ಪುನಃ ಜೋಡಿಸುತ್ತೇನೆ ಅಂತ ಯಾವ ಅರ್ಥದಲ್ಲಿ ಹೇಳುತ್ತಾರೆ ಅನ್ನೋದನ್ನ ರಾಹುಲ್‌ಗಾಂಧಿ ಅವರಿಗೆ ಕೇಳಿ. ಸಹಜವಾಗಿ ಪೊಲಿಟಿಕಲ್ ಪಾರ್ಟಿಯೊಂದು ಚುನಾವಣೆ ಬರ್ತಿರುವ ಸಂದರ್ಭದಲ್ಲಿ ತಮ್ಮ ಪಕ್ಷದ ಸಂಘಟನೆ ಮಾಡಲಿಕ್ಕೆ ಇವೆಲ್ಲ ಮಾಡುತ್ತೆ. ಸುಮ್ಮನೆ ಇರುವುದಕ್ಕಿಂತ ಏನಾದರೂ ಮಾಡಬೇಕು ಎನ್ನುವ ಅವಶ್ಯಕತೆ ರಾಜಕೀಯ ಪಕ್ಷಗಳಿಗೆ ಇರುತ್ತೆ ಎಂದು ಹೇಳಿದರು.
ಮರುತನಿಖೆಗೆ ಪರೇಶ್ ಮೇಸ್ತ ಕುಟುಂಬಸ್ಥರು ಆಗ್ರಹ
ಪರೇಶ್ ಮೇಸ್ತ ಸಾವು ಆಕಸ್ಮಿಕ ಎಂದು ಸಿಬಿಐ ವರದಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ತನಿಖೆಯನ್ನು ಸಿಬಿಐಗೆ ವಹಿಸಲು 4 ತಿಂಗಳು ವಿಳಂಬ ಮಾಡಿದರು. ಹಾಗಾಗಿ ಸಿಬಿಐ ತಂಡಕ್ಕೆ ಸಾಕ್ಷ್ಯಾಧಾರಗಳ ಕೊರತೆ ಆಗಿರಬಹುದು. ಮರುತನಿಖೆಗೆ ಪರೇಶ್ ಮೇಸ್ತ ಕುಟುಂಬಸ್ಥರು ಆಗ್ರಹ ಮಾಡಿದ್ದಾರೆ. ನಾಳೆ ಅಥವಾ ನಾಡಿದ್ದು ನಾನು ಕುಟುಂಬಸ್ಥರ ಜತೆ ಮಾತನಾಡುತ್ತೇನೆ. ಸರ್ಕಾರಕ್ಕೆ ಅವರ ಕುಟುಂಬಕ್ಕೆ ನ್ಯಾಯದೊರಕಿಸುವ ಕೆಲಸ ಮಾಡುತ್ತೆ ಎಂದು ತಿಳಿಸಿದರು.
ತಪ್ಪು ಮಾಡುವವರನ್ನು ನಿರ್ಬಂಧಿಸಬೇಕಾದದ್ದು ಕೇಂದ್ರ ಸರ್ಕಾರದ ಜವಾಬ್ದಾರಿ
ರಸ್ತೆ ಮೇಲೆ ಪಿಎಫ್ಐ ಬರಹ ವಿಚಾರವಾಗಿ ಮಾತನಾಡಿದ ಅವರು ಜನತಂತ್ರ ವ್ಯವಸ್ಥೆಯಲ್ಲಿ ಕೆಲವರು ಅನಾಹುತಗಳನ್ನೇ ಒಳ್ಳೆಯ ಕೆಲಸ ಎಂದು ತಿಳಿದುಕೊಂಡಿರುತ್ತಾರೆ. ಕಾಂಗ್ರೆಸ್ ಸರ್ಕಾರ ಇರುವಾಗ 23 ಮಂದಿ ಕಾರ್ಯಕರ್ತರನ್ನು ಕೊಚ್ಚಿ ಕೊಂದಂತಹ ಘಟನೆ ನಡೆದಿದೆ. ಅದರಲ್ಲಿ ಅವರ ಪಾತ್ರ ಬಹಳ ಇದೆ ಎಂದು ಅಂಕಿ ಅಂಶಗಳ ಮೂಲಕ ತನಿಖೆ ಮುಖಾಂತರ ಬಂದಿದೆ. ಯಾರು ರಾಷ್ಟ್ರಕ್ಕೆ ವಿರುದ್ದವಾಗಿ ಭಯೋತ್ಪಾದನೆಯನ್ನು ಮಾಡಿ, ಸಮಾಜಕ್ಕೆ ಕಂಟಕ ತರುವ ಕೆಲಸ ಮಾಡುತ್ತಾರೋ ಅದು ಯಾವ ಸಂಘಟನೆ ಆಗಿರಲಿ, ಯಾವ ವರ್ಗ, ಜಾತಿ, ಧರ್ಮ ಯಾವುದು ಅಲ್ಲ. ಯಾರು ತಪ್ಪು ಮಾಡುತ್ತಾರೊ ಅವರನ್ನು ನಿರ್ಬಂಧಿಸಬೇಕಾದದ್ದು ಕೇಂದ್ರ ಸರ್ಕಾರದ ಗುರುತರವಾದಂತಹ ಜವಾಬ್ದಾರಿ.
ಎಲ್ಲಾ ಸಾಕ್ಷ್ಯಾಧಾರಗಳನ್ನು ಗಮನದಲ್ಲಿಟ್ಟುಕೊಂಡು, ಕೇರಳದಲ್ಲಿ ಆಗಿರುವ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಪಿಎಫ್ಐನ್ನು ರದ್ದು ಮಾಡಿದ್ದಾರೆ. ಕೇಂದ್ರ ಸರ್ಕಾರದ ಕೆಲಸ ಅತ್ಯಂತ ಸಮರ್ಥನೀಯ ಅಂತ ಅನ್ಸುತ್ತೆ. ಭಾರತದಂತಹ ಒಂದು ಶಕ್ತಿಯುತವಾದ ರಾಷ್ಟ್ರಕ್ಕೆ, ಕರ್ನಾಟಕದಂತಹ ಒಂದು ಒಳ್ಳೆಯ ಪೊಲೀಸ್ ಪಡೆ ಇರುವ ರಾಜ್ಯಕ್ಕೆ ಯಾವ ಬರಹಗಳು ಕೂಡ, ಯಾರನ್ನು ವಿಚಲಿತ ಮಾಡುವುದಿಲ್ಲ. ಅದೆಷ್ಟೇ ಗಟ್ಟಿಯಾಗಿ ಅವರು ಅನಾಹುತಗಳನ್ನು ಮಾಡುತ್ತೇವೆ. ಭಯೋತ್ಪಾದನೆಯನ್ನು ಸೃಷ್ಟಿ ಮಾಡುತ್ತೇವೆ ಅಂಥ ಹೇಳಿದರು ಕೂಡ ಮಟ್ಟ ಹಾಕುವಂತಹ ಶಕ್ತಿ ಸರ್ಕಾರಕ್ಕೆ ಇದೆ ಎಂದು ಸಚಿವರು ಎಚ್ಚರಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.